Advertisement

ದಾಸ ಕೀರ್ತನೆಗಳ ರಸಾಸ್ವಾದವಾದ ಸಂಗೀತೋತ್ಸವ 

12:30 AM Feb 01, 2019 | |

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ಜರಗಿದ 41ನೇ ವಾದಿರಾಜ ಕನಕದಾಸ ಸಂಗೀತೋತ್ಸವ ದ ಮೊದಲ ಕಾರ್ಯಕ್ರಮವಾಗಿ ಶಿಲ್ಪಾ ಪುತ್ತೂರು ಇವರಿಂದ‌ ಹಾಡುಗಾರಿಕೆ ನಡೆಯಿತು. ಸಾರಂಗ ರಾಗದ ವರ್ಣದಿಂದ ಕಛೇರಿ ಶಾಸ್ತ್ರಬದ್ಧವಾಗಿ ಪ್ರಾರಂಭವಾಯಿತು. ಕಲ್ಯಾಣ ವಸಂತದ ಚುರುಕಾದ ಆಲಾಪನೆಯೊಂದಿಗೆ “ಗಜಮುಖ ವಂದಿಸುವೆ’ ವಾದಿರಾಜರ ರಚ‌ನೆಯನ್ನು ಸ್ವರ ಪ್ರಸ್ತಾರದೊಂದಿಗೆ ಹಾಡಿದರು. ಮುಂದೆ ಬಿಲಹರಿಯಲ್ಲಿ ವಿಸ್ತಾರವಾದ ಆಲಾಪನೆಯೊಂದಿಗೆ ಕನಕದಾಸರ ಕೀರ್ತನೆ “ತಲ್ಲಣಿಸದಿರು ಕಂಡ್ಯ’ ನವಿರಾದ ಸ್ವರವಿಸ್ತಾರಗಳೊಂದಿಗೆ ಮೂಡಿ ಬಂತು. ಪ್ರಧಾನ ರಾಗವಾಗಿ ಚಾರುಕೇಶಿಯನ್ನು ಎತ್ತಿಕೊಂಡ ಕಲಾವಿದೆ ಒಳ್ಳೆಯ ಅಕಾರಗಳಿಂದ ಕೂಡಿದ ರಾಗ ವಿಸ್ತಾರಗಳನ್ನು ಪ್ರದರ್ಶಿಸಿದರು. ನಂತರ ಮಧುವಂತಿಯಲ್ಲಿ “ದಾರಿಯ ತೋರೋ ಗೋಪಾಲ’, ಬೃಂದಾವನೀ ಸಾರಂಗದಲ್ಲಿ ರಾಗಂ ತಾನಂ ಪಲ್ಲವಿಯನ್ನು,ಹಾಡಿ ತೋರಿಸಿದರು. ಶ್ರೀ ವಾದಿರಾಜ ವಿರಚಿತ ” ಸ್ವಾಮಿ ಶ್ರೀ ಹಯವದನ’ ಎನ್ನುವ ಪಲ್ಲವಿ ಭಾಗವನ್ನು ಚತುರಶ್ರ ತ್ರಿಪುಟ ತಾಳದಲ್ಲಿ ಪ್ರಸ್ತುತ ಪಡಿಸಿದರು. ಇದನ್ನು ಕಲ್ಯಾಣಿ ರಾಗದಲ್ಲಿ ಸಂಯೋಜಿಸಲಾಗಿತ್ತು. ಪಕ್ಕ ವಾದ್ಯ ನುಡಿಸಿದವರು, ವಯೊಲಿನ್‌-ವೇಣುಗೋಪಾಲ್‌ ಶ್ಯಾನುಭೋಗ್‌, ಮೃದಂಗ ಅಕ್ಷಯ ನಾರಾಯಣ್‌, ಮೋರ್ಸಿಂಗ್‌-ಶ್ಯಾಮ ಭಟ್‌. ತಾನವನ್ನು ಹಾಡುವಾಗ ಮೃದಂಗವನ್ನು ನುಡಿಸಿದುದು ಸೊಗಸಾಗಿ ಕೇಳುತ್ತಿತ್ತು. 

Advertisement

ಭೋಜನಾನಂತರದ ಕಾರ್ಯಕ್ರಮವನ್ನು ನೀಡಿದವರು ಕಾಸರಗೋಡಿನ ಉಷಾ ಈಶ್ವರ ಭಟ್‌. ಇವರು ನೀಡಿದ‌ ಪ್ರಸ್ತುತಿಗಳು – ಗಜಮುಖ ವಂದಿಸುವೆ ( ಕಲ್ಯಾಣ ವಸಂತ), ಕುಲಕುಲಕುಲವೆನ್ನುತಿಹರು (ಪಹಾಡಿ), ರಾಮ ರಾಮೆಂಬೆರಡ‌ಕ್ಷರದ (ಪಂತುವರಾಳಿ) ಆಲಾಪನೆ ಹಾಗೂ ಸ್ವರ ಪ್ರಸ್ತಾರಗಳೊಂದಿಗೆ, ಶರಣು ಸಕಲೋದ್ಧಾರ (ಭೌಳಿ), ಮಂದಮತಿಯು ನಾನು (ಹಂಸನಾದ), ದಾರಿಯ ತೋರೋ ಗೋಪಾಲ (ಚಾರುಕೇಶಿ), ಅಹುದಾದರಹುದೆನ್ನಿ (ವಾಸಂತಿ). ಚಾರುಕೇಶಿಯಲ್ಲಿ ಸೊಗಸಾದ ಆಲಾಪನೆ, ದಾರಿಯ ತೋರೋ ಗೋಪಾಲದ “ಸಿರಿಹಯವದನನೆ ಬಾರೋ’ದಲ್ಲಿ ಪಕ್ವವಾದ ನೆರವಲ್‌ ಹಾಗೂ ಸ್ವರಪ್ರಸ್ತಾರವನ್ನು ಮಾಡಲಾಯಿತು. ತೂಕವುಳ್ಳ ಶಾರೀರ, ಅನೇಕ ಕಾರ್ಯಕ್ರಮಗಳನ್ನು ನೀಡಿದ ಅನುಭವ ಇಲ್ಲಿ ಧ್ವನಿಸಿತು. ವೇಣುಗೋಪಾಲ್‌ ಶ್ಯಾನುಭೋಗ್‌ ಅವರು ಈ ಎರಡೂ ಕಛೇರಿಗಳಿಗೆ ವಯೊಲಿನ್‌ ನುಡಿಸಿದರು. ಎರಡು ಬಾರಿ ವಿಸ್ತತಗೊಂಡ ಚಾರುಕೇಶಿಯನ್ನು ಬೇರ ಬೇರೆ ವಿಭಿನ್ನ ಶೈಲಿಗಳಲ್ಲಿ ನುಡಿಸಿ ತಮ್ಮ ಛಾಪು ತೋರಿಸಿದರು. ರಾಜೀವ ಗೋಪಾಲ್‌ ವೆಳ್ಳಿಕೋತ್‌ ಮೃದಂಗದಲ್ಲಿ ಸಹಕಾರವನ್ನಿತ್ತರು. 

ಮೊದಲನೇ ದಿನದ ಕೊನೆಯಲ್ಲಿ ಚೈತನ್ಯ ಜಿ. ಮಂಗಳೂರು ಅವರ ಹಿಂದುಸ್ಥಾನಿ ಗಾಯನ ನಡೆಯಿತು. ಶ್ರೀ ರಾಗ್‌ನಲ್ಲಿ ಆಲಾಪ್‌, ವಿಲಂಬಿತ್‌ ಹಾಗೂ ಧೃತ್‌ ತಾಲ್‌ಗ‌ಳಲ್ಲಿ ತರಾನಾ, ಭೂಪ್‌ ರಾಗ್‌ ಜಪ್‌ತಾಲ್‌ನಲ್ಲಿನ ರಚನೆಗಳನ್ನು ಪಾಂಡಿತ್ಯಪೂರ್ಣವಾಗಿ ನಿರೂಪಿಸಿದ ನಂತರ ತೋಡಿಯಲ್ಲಿ ತಲ್ಲಣಿಸದಿರು ಕಂಡ್ಯ, ನಂದ್‌ ರಾಗದಲ್ಲಿ ಧವಳ ಗಂಗೆಯ, ಭಟಿಯಾದಲ್ಲಿ ನೀ ಮಾಯೆಯೊಳಗೋ, ಬೇಹಾಗ್‌ನಲ್ಲಿ ನೆಚ್ಚದಿರು ಸಂಸಾರ, ಜೋಗ್‌ನಲ್ಲಿ ಸಾರಿದೆನೋ ರಂಗ, ತೊರೆದು ಜೀವಿಸಬಹುದೆ ಮಧುವಂತಿಯಲ್ಲಿ, ಭೈರವಿಯಲ್ಲಿ ನೆನೆವೆ ನೆನೆವೆ ದಾಸರ ಪದಗಳನ್ನು ಮನೋಜ್ಞವಾಗಿ ಪ್ರಸ್ತುತಿ ಪಡಿಸಿದರು. ಗಾಯಕರಿಗೆ ಸಮರ್ಥವಾದ ಸಾಥಿಯನ್ನು ಒದಗಿಸಿದವರು ತಬ್ಲಾದಲ್ಲಿ ಭಾರವಿ ದೇರಾಜೆ ಸುರತ್ಕಲ್‌, ಹಾಗೂ ಹಾರ್ಮೋನಿಯಂನಲ್ಲಿ ಸತೀಶ್‌ ಭಟ್‌ ಹೆಗ್ಗಾರ ಅವರು. 

ಎರಡನೇ ದಿನದ ಮೊದಲ ಕಛೇರಿಯನ್ನು ನೀಡಿದವರು ಬೆಂಗಳೂರಿನ ಮೇಘಾ ಭಟ್‌. ಮೊದಲಿಗೆ ಹಂಸಧ್ವನಿ ರಾಗದಲ್ಲಿ ಶ್ಲೋಕ, ನಮ್ಮಮ್ಮ ಶಾರದೆ, ನಂತರ ವಾಸಂತಿ ರಾಗದಲ್ಲಿ ಉಗಾಭೋಗದೊಂದಿಗೆ ಅನೇಕ ಚರಣಗಳನ್ನೊಳಗೊಂಡ ಈಶ ನಿನ್ನ ಚರಣ ಭಜನೆ, ಬಳಿಕ ಹಿಂದೋಳ ರಾಗವನ್ನು ಎತ್ತಿಕೊಂಡು ಸೊಗಸಾದ ಬಿರ್ಕಾಗಳೊಂದಿಗಿನ ಅಲಾಪನೆಯೊಂದಿಗೆ ಕನಕದಾಸರ “ದಾಸ ದಾಸರ ಮನೆಯ’ ಕೀರ್ತನೆಯನ್ನು ಹಾಡಿದರು. ಪಲ್ಲವಿ ಭಾಗದಲ್ಲಿÉ ಕ್ಷಿಪ್ರ ಗತಿಯಲ್ಲಿ ಸ್ವರಗಳನ್ನು ಪೋಣಿಸಲಾಯಿತು. ಮುಂದೆ ಕೇದಾರಗೌಳ ರಾಗದಲ್ಲಿ ಧವಳ ಗಂಗೆಯ, ಆಮೇಲೆ ಷಣ್ಮುಖಪ್ರಿಯ ರಾಗವನ್ನು ವಿಸ್ತಾರಕ್ಕಾಗಿ ಎತ್ತಿಕೊಂಡು “ಕುಲ ಕುಲ ಕುಲವೆನ್ನುತಿಹರು’ ಕೀರ್ತನೆಯನ್ನು ನೆರವಲ್‌ ಮತ್ತು ಕಲ್ಪನಾಸ್ವರಗಳೊಂದಿಗೆ ನಿರೂಪಿಸಿದರು. ವಿಭುದೇಂದ್ರ ಸಿಂಹ ಬೆಂಗಳೂರು ಅವರು ವಯೊಲಿನ್‌ ಮತ್ತು ಗಣೇಶಮೂರ್ತಿ ಸೂರಳಿ ಮೃದಂಗದಲ್ಲಿ ಪೂರಕವಾಗಿ ಸಹಕರಿಸಿದರು.

ಕೊನೆಯ ಕಛೇರಿ ಕಲ್ಕೂರ ಸಹೋದರಿಯರೆಂದೇ ಕರೆಯಲ್ಪಡುವ ವಿನುತಾ ಆಚಾರ್ಯ ಹಾಗೂ ಲಲಿತಾ ರಮಾನಂದ ಅವರಿಂದ ನಡೆಯಿತು. ಭೌಳಿ ರಾಗದ “ಶರಣು ಶರಣು’ ವಿನೊಂದಿಗೆ ಮೊದಲ್ಗೊಂಡು ಮುಂದೆ, ಅಭೋಗಿಯಲ್ಲಿ “ನಾನು ನೀನು ಎನ್ನದಿರು’ ಅನಂತರ ಕಾಂಭೋಜಿಯ ನವಿರಾದ ಆಲಾಪನೆಯೊಂದಿಗೆ ಮೂಡಿ ಬಂದದ್ದು “ಭಜಿಸಿ ಬದುಕೆಲೊ ಮನುಜ’ ದಾಸರ ಕೀರ್ತನೆ. ಬಳಿಕ “ಕುದುರೆ ಬಂದಿದೆ'(ಪೂರ್ವಿ ಕಲ್ಯಾಣಿ), ಉಗಾಭೋಗದೊಂದಿಗೆ “ಹ್ಯಾಂಗೆ ಕೊಟ್ಟನು ಹೆಣ್ಣ’ (ಅಭೇರಿ), ಮುಂದೆ ಪ್ರಧಾನ ರಾಗವಾಗಿ ಸಹೋದರಿಯರು ಆರಿಸಿಕೊಂಡದ್ದು, ಶುಭ ಪಂತುವರಾಳಿ ರಾಗವನ್ನು. ರಾಗ, ಭಾವಗಳನ್ನಾಧರಿಸಿದ‌ ಹೃದ್ಯವಾದ ಆಲಾಪನೆಯಲ್ಲಿ “ಹರಿನಾರಾಯಣ’ ದಾಸರ ಪದವನ್ನು ಹಾಡಿ, ಅತಿ ಮೋಹನ ಭರಿತವನ್ನು ಸೊಗಸಾದ ನೆರವಲ್‌ ಹಾಗೂ ಕಲ್ಪನಾ ಸ್ವರಗಳಿಂದ ಪೋಷಿಸಿದರು. ಮಾಂಡ್‌ನ‌ಲ್ಲಿ “ಸತ್ಯವಂತರ ಸಂಗವಿರಲು’ ಹಾಗೂ ಮಂಗಳಾರತಿ ಹಾಡಿನೊಂದಿಗೆ ಈ ಕಛೇರಿ ಮುಕ್ತಾಯವಾಯಿತು. ಮತ್ತೋರ್ವ ಸಹೋದರಿ ಶೋಭಿತಾ ಉದಯಶಂಕರ್‌ ವಯಲಿನ್‌ ಹಾಗೂ ಸಹೋದರ ಶಿವಕುಮಾರ್‌ ಕಲ್ಕೂರ ಬೆಂಗಳೂರು ಇವರು ತನಿ ಆವರ್ತನದೊಂದಿಗಿನ ಮೃದಂಗ ಸಹಕಾರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದರು. ಒಟ್ಟಿ$rನಲ್ಲಿ ಒಂದೇ ಕುಟುಂಬದ ಬಳಗದವರು ನಡೆಸಿದ ಕಛೇರಿ ಇದಾಗಿತ್ತು. 

Advertisement

ವಿದ್ಯಾಲಕ್ಷ್ಮೀ ಕಡಿಯಾಳಿ 

Advertisement

Udayavani is now on Telegram. Click here to join our channel and stay updated with the latest news.

Next