ಯಾದಗಿರಿ: 3 ಎಕರೆ 16 ಗುಂಟೆ ಸ್ಥಳ ಯಾರದ್ದು, ಭೂ ಮಾಲೀಕರಿಗೆ ಅನುಮತಿ ಕೇಳಬೇಕು. ಈ ಎಲ್ಲಾ ತೀರ್ಮಾನ ತೆಗೆದುಕೊಂಡವರು ಬಿಜೆಪಿ ಸರ್ಕಾರದಲ್ಲಿದ್ದ ಸಿಎಂ ಅವರ ಗಮನಕ್ಕೆ ಇರಲಿಲವೇ, ಮುಡಾದಲ್ಲಿ ಮೊದಲೇ ಹಗರಣ ನಡೆದಿದ್ದು, ಆಗ ಬಿಜೆಪಿ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದರು, ಈಗ ಸುಖಾಸುಮ್ಮನೇ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.
ನಗರದ ಜಿಲ್ಲಾ ಉಸ್ತುವಾರಿ ಕಚೇರಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ರಾಮ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನ ವಿಧಾನಸಭೆಯಲ್ಲಿ ಗೆದ್ದಿದೆ, ಲೋಕಸಭೆ ಫಲಿತಾಂಶದಲ್ಲಿ ಸಹ ಬಿಜೆಪಿ ಅಂದುಕೊಂಡಷ್ಟು ಸ್ಥಾನಗಳು ಸಿಗದೇ ಇರುವ ಕಾರಣ ಹೈ ಕಮಾಂಡ್ ನಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಒತ್ತಡವಿದೆ ಆದ ಕಾರಣ ಬಿಜೆಪಿನಾಯಕರು ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಸ್ವತಃ ಬಿಜೆಪಿ ಶಾಸಕ ಯತ್ನಾಳ ಅವರೇ ಪಾದಯಾತ್ರೆ ಬಗ್ಗೆ ಟೀಕಿಸಿದ್ದು, ಬಿಜೆಪಿ ಸರ್ಕಾರ ಇದ್ದಾಗಲೇ ಮುಡಾ ಹಗರಣ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ. ಹಗರಣವೂ ಅವರೇ ಮಾಡುತ್ತಾರೆ ಜೊತೆಗೆ ಪಾದಯಾತ್ರೆಯೂ ಸಹ ಅವರೇ ಮಾಡುತ್ತಾರೆ ಎಂದು ಹೇಳಿದರು.
ಬಿಜೆಪಿ ಅವರು ಮಾಡಿದ ತಪ್ಪಿಗೆ ಕೇಂದ್ರವೇ ಉತ್ತರಿಸಬೇಕು. ಸ್ಥಳವನ್ನು ಕಬಳಿಸಿದ ಮುಡಾ ಹಗರಣದ ಬಗ್ಗೆ ಆಗಿನ ಸರ್ಕಾರ ಯಾರಿದ್ದರು ಕೇಂದ್ರ ಸರ್ಕಾರವೇ ತಿಳಿಸಲಿ. ಎಲ್ಲಾ ಪಕ್ಷದವರು ಮುಡಾದಲ್ಲಿ ಪ್ಲಾಟ್ ಖರೀದಿ ಮಾಡಿದ್ದಾರೆ ಎನ್ನುವ ಸಚಿವ ಬೈರತಿ ಸುರೇಶ ಅವರ ಮಾತನ್ನು ಯಾರೊಬ್ಬ ಬಿಜೆಪಿ ನಾಯಕ ಅಲ್ಲಗೆಳೆದಿಲ್ಲ. ಭ್ರಷ್ಟಾಚಾರದಲ್ಲಿ ಬಿಜೆಪಿ ಎತ್ತಿದ ಕೈಯಾಗಿದೆ, ಮುಡಾದಲ್ಲಿ ಹಗರಣ ಮಾಡಿದ್ದೇ ಬಿಜೆಪಿಗರು, ತಾವು ತಿಂದು ಬೇರೆಯವರ ಮೂತಿಗೆ ಒರೆಸುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: Mangaluru: ಭಾರೀ ಗಾಳಿಗೆ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳ ಮೇಲೆ ಬಿದ್ದ ಕಟ್ಟಡದ ರೂಫ್ ಟಾಪ್