Advertisement

ಬಂದೂಕು ಎದುರಿಗಿರಿಸಿ ಹಲ್ಲೆಗೆ ಯತ್ನಿಸಿದ್ದ ದರ್ಶನ್‌

12:47 AM Jun 19, 2024 | Team Udayavani |

ಬೆಂಗಳೂರು: “ದರ್ಶನ್‌ ಹಾಗೂ ತಂಡ ನನ್ನ ಮೇಲೂ ಹಲ್ಲೆಗೆ ಮುಂದಾಗಿತ್ತು. ಅಂದು ನಾನು ಬದುಕಿ ಬಂದದ್ದೇ ಹೆಚ್ಚು’ ಎಂದು ದರ್ಶನ್‌ ನಟನೆಯ “ರಾಬರ್ಟ್‌’ ಸಿನೆಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗಂಭೀರ ಆರೋಪ ಮಾಡಿದ್ದಾರೆ.

Advertisement

ದರ್ಶನ್‌ ಪ್ರಕರಣದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಅದೊಂದು ದಿನ ಮೈಸೂರಿನ ಸೋಶಿಯಲ್ಸ್‌ ಹೊಟೇಲ್‌ಗೆ ಕರೆಸಿಕೊಂಡು ನನ್ನ ಮುಂದೆ ಬಂದೂಕು ಇರಿಸಿ ದರ್ಶನ್‌ ಅವರು ಆಡದ ಮಾತುಗಳಿಲ್ಲ. ಸುಮಾರು ನಾಲ್ಕು ತಾಸುಗಳ ಕಾಲ ನನಗೂ ಅವರಿಗೂ ಮಾತುಕತೆಯಾಯಿತು. ದರ್ಶನ್‌ ಅವರು ಏಕಾಏಕಿ ಗನ್‌ ತೆಗೆದು ಟೇಬಲ್‌ ಮೇಲೆ ಇಟ್ಟರು. ಅಂದು ನನ್ನನ್ನು ಹೊಡೆಯುವ ಹಂಚಿಕೆ ಹಾಕಿದ್ದರು. ಆ ದಿನ ನಾನು ಬದುಕಿ ಬಂದದ್ದೇ ಹೆಚ್ಚು’ ಎಂದಿದ್ದಾರೆ. ಈ ಮೂಲಕ ದರ್ಶನ್‌ ವಿರುದ್ಧ ಮತ್ತೂಂದು ಆರೋಪ ಕೇಳಿಬಂದಿದೆ.

ಲಕ್ನೋದಲ್ಲೂ ಗಲಾಟೆ
“ರಾಬರ್ಟ್‌’ ಚಿತ್ರೀಕರಣ ಲಕ್ನೋದಲ್ಲಿ ನಡೆದಿತ್ತು. ಈ ವೇಳೆಯೂ ದರ್ಶನ್‌ ಮದ್ಯಪಾನ ಮಾಡಿ ಗಲಾಟೆ ಮಾಡಿದ್ದರು.

ಈ ಕುರಿತು ಮಾತನಾಡಿದ ಉಮಾಪತಿ, “ಲಕ್ನೋದಲ್ಲಿ ರಾಬರ್ಟ್‌ ಶೂಟಿಂಗ್‌ ವೇಳೆ ದರ್ಶನ್‌ ಮದ್ಯ ಸೇವಿಸಿ ಗಲಾಟೆ ಮಾಡಿದ್ದರು. ಅಂದು ಕೂಡ ಪ್ರಕರಣ ವಿಕೋಪಕ್ಕೆ ಹೋಗುತ್ತಿತ್ತು, ನಾನೇ ತಡೆದೆ’ ಎಂದಿದ್ದಾರೆ.

ಮದ್ಯದ ಬಿಲ್‌ 9 ಲಕ್ಷ ರೂ.
“ರಾಬರ್ಟ್‌’ ಸಿನೆಮಾದ ಸಮಾರಂಭವೊಂದು ಹುಬ್ಬಳ್ಳಿಯಲ್ಲಿ ನಡೆದಿತ್ತು. ಈ ವೇಳೆ ಸ್ಟಾರ್‌ ಹೊಟೇಲ್‌ನಲ್ಲಿ ದರ್ಶನ್‌ಗೆ ರೂಂ ಒದಗಿಸಲಾಗಿತ್ತು. ಅಲ್ಲಿ ದರ್ಶನ್‌ ಹಾಗೂ ಅವರ ತಂಡ ಮದ್ಯಕ್ಕಾಗಿ 9 ಲಕ್ಷ ರೂ.ಗಳಷ್ಟು ಬಿಲ್‌ ಮಾಡಿತ್ತು ಎಂದು ಉಮಾಪತಿ ಆರೋಪಿಸಿದ್ದಾರೆ.

Advertisement

ಸಂಬಂಧ ಕೆಟ್ಟದ್ದು ಯಾಕೆ?
ಉಮಾಪತಿ ಹಾಗೂ ದರ್ಶನ್‌ ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿಯೇ ಇದ್ದರು. ಆದರೆ ಮೈಸೂರಿನ ಘಟನೆಯೊಂದು ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಯಿತು. ದರ್ಶನ್‌ ಹೆಸರು ಬಳಸಿಕೊಂಡು ನಿರ್ಮಾಪಕ ಉಮಾ ಪತಿ ಸಾಲಕ್ಕೆ ಅರ್ಜಿ ಹಾಕಿ ವಂಚನೆಗೆ ಯತ್ನಿಸಿದ್ದರು ಎಂದು ದರ್ಶನ್‌ ಹಾಗೂ ಅವರ ತಂಡ ಆರೋಪಿಸಿ, ದೂರು ಕೂಡ ನೀಡಿತ್ತು.

ದರ್ಶನ್‌ ಸಿಟ್ಟಿಗೆ ಕಾರಣವೇನು?
ರಾಬರ್ಟ್‌ ಸಿನೆಮಾದ ಬಳಿಕ ಉಮಾಪತಿ ಮತ್ತೂಬ್ಬ ಸ್ಟಾರ್‌ ನಟನಿಗಾಗಿ ಸಿನೆಮಾ ಮಾಡಲು ಮುಂದಾಗಿದ್ದು, ದರ್ಶನ್‌ ಸಿಟ್ಟಿಗೆ ಒಂದು ಕಾರಣ ಎನ್ನಲಾಗಿದೆ. ಸ್ಟಾರ್‌ ನಟನಿಂದ ಉಮಾಪತಿ ಖರೀದಿಸಿದ ಆಸ್ತಿಯೊಂದನ್ನು ತನಗೆ ನೀಡುವಂತೆ ದರ್ಶನ್‌ ಕೇಳಿದ್ದರು. ಆದರೆ ಉಮಾಪತಿ ಅದನ್ನು ನೀಡಲು ನಿರಾಕರಿಸಿದ್ದರು, ಇದು ದರ್ಶನ್‌ ಸಿಟ್ಟು ಹೆಚ್ಚಾಗುವಂತೆ ಮಾಡಿತ್ತು ಎನ್ನಲಾಗಿದೆ. ಅಂದಿನಿಂದಲೇ ತನ್ನ ಜತೆಗಿನ ದರ್ಶನ್‌ ನಡವಳಿಕೆ ಬದಲಾಗಿ ಮೈಸೂರಿನ ಪ್ರಕರಣವೊಂದರಲ್ಲಿ ತನ್ನನ್ನು ಸಿಲುಕಿಸಲು ಹಂಚಿಕೆ ಹಾಕಿದ್ದರು ಎಂದು ಉಮಾಪತಿ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next