ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ “ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳನ್ನು ಭರದಿಂದ ನಡೆಸುತ್ತಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ತಂಡ ಇತ್ತೀಚೆಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮ್ಮುಖದಲ್ಲಿ ಅದ್ಧೂರಿಯಾಗಿ ಚಿತ್ರದ ಟ್ರೇಲರ್ ಅನ್ನು ಹೊರತಂದಿದೆ.
ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ನಟ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ದರ್ಶನ್, “”ಇಂಡಿಯಾ ವರ್ಸಸ್ ಇಂಗ್ಲೆಂಡ್’ ಅನ್ನೋ ಟೈಟಲ್ ತುಂಬಾ ಚೆನ್ನಾಗಿದೆ. ನಾನು ಅದಕ್ಕೆ ಒಂದು ಟ್ವಿಸ್ಟ್ ಕೊಡುತ್ತೇನೆ. ಸಿನಿಮಾದ ಟೈಟಲ್ ಮುಂದೆ ಮದರ್ ಹಾಕಿದ್ರೆ ನಮ್ “ಮದರ್ ಇಂಡಿಯಾ’ ಆಗುತ್ತಾರೆ. ಇಂಗ್ಲೆಂಡ್ ಮುಂದೆ ಗರ್ಲ್ ಫ್ರೆಂಡ್ ಹಾಕಿದರೆ, “ಗರ್ಲ್ ಫ್ರೆಂಡ್ ಆಫ್ ಇಂಗ್ಲೆಂಡ್’ ಆಗುತ್ತದೆ. ಈ ಕಾರ್ಯಕ್ರಮದಲ್ಲಿ ನಮ್ಮ ಮದರ್ ಇಂಡಿಯಾ ಹಾಗೂ ಗರ್ಲ್ ಫ್ರೆಂಡ್ ಇಬ್ಬರೂ ಇದ್ದಾರೆ. ಸುಮಮ್ಮ ಮದರ್ ಇಂಡಿಯಾ ಆದ್ರೆ ಮಾನ್ವಿತಾ ಅವ್ರು ಅವರೇ ಗರ್ಲ್ ಫ್ರೆಂಡ್. ಇನ್ನು ಸಿನಿಮಾದ ಟೈಟಲ್ ನಲ್ಲಿ ಒಂದು ಡೈಮಂಡ್ ಇದ್ದು, ಅದು ವಸಿಷ್ಠ’ ಎಂದು ಚಿತ್ರದ ಟೈಟಲ್‌ಗೆ ಹೊಸ ವ್ಯಾಖ್ಯಾನ ನೀಡಿದರು.
ಇದೇ ವೇಳೆ ಮಾತನಾಡಿದ ನಟ ವಸಿಷ್ಠ ಸಿಂಹ, “ಒಮ್ಮೆ ದರ್ಶನ್ ಅವರು ಸಿನಿಮಾದ ಶೂಟಿಂಗ್‌ನಲ್ಲಿದ್ದಾಗ, ಭೇಟಿ ಮಾಡಿ, ನಮ್ಮ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿಕೊಡಬೇಕೆಂದು ಮನವಿ ಮಾಡಿದೆ. ನಮ್ಮ ಆಹ್ವಾನಕ್ಕೆ ಸ್ಪಂದಿಸಿದ ದರ್ಶನ್ ಈಗ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಬದುಕಿದರೆ ದರ್ಶನ್ ಅವರ ಥರ ಬದುಕಬೇಕು. ನಾನು ಹೇಗೆ ಬದುಕಬೇಕು ಎಂದು ಕನಸು ಕಟ್ಟಿದ್ದೆನೋ, ಅದೇ ತರ ದರ್ಶನ್ ಅವರ ಬದುಕು ಇದೆ. ಒಬ್ಬ ನಟ ಹೀಗೂ ಇರಬಹುದು ಎಂದು ದರ್ಶನ್ ತೋರಿಕೊಟ್ಟಿದ್ದಾರೆ. ಕುದುರೆ ಓಡಿಸುವುದು, ತೋಟಗಾರಿಕೆ ಮಾಡುವುದು, ಹಸುಗಳನ್ನು ಮೇಯಿಸುವುದು, ಹಾಲು ಕರೆಯುವುದು, ಕಾರ್, ಬೈಕ್ ಪ್ಯಾಷನ್ ಇದೆಲ್ಲ ನೋಡಿ ತುಂಬ ಖುಷಿ ಆಗುತ್ತದೆ. ಈ ಕಾರಣಕ್ಕೆ ದರ್ಶನ್ ತುಂಬ ಇಷ್ಟ ಆಗ್ತಾರೆ. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಗ ಹುಟ್ಟಿಕೊಂಡ ನಾಟಕದ ಗೀಳು ಹೆಚ್ಚಾಯಿತು. ಆ ನಂತರ ಆ ಗೀಳು ಒಬ್ಬ ನಟನಾಗಿ ಕೆರಿಯರ್ ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಿತು. ಈಗ ನಟನೆ ಇಷ್ಟು ದೂರ ತಂದು ನಿಲ್ಲಿಸಿದೆ. ಹೀಗೆಲ್ಲ ಆಗುತ್ತದೆ ಅಂತ ಕನಸು ಕೂಡ ಕಂಡಿರಲಿಲ್ಲ. ನಾನು ಹೀರೋ ಆಗ್ತಿàನಿ. ಮುಂದೊಂದು ದಿನ ಹೀಗೆ ಆಗುತ್ತೆ ಅಂತ ಯಾವತ್ತೂ ಗೊತ್ತಿರಲಿಲ್ಲ’ ಎಂದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಚಿತ್ರದ ಕಥಾಹಂದರ, ವಿಶೇಷತೆಗಳು, ಚಿತ್ರೀಕರಣದ ಅನುಭವಗಳು ಮತ್ತು ಬಿಡುಗಡೆಯ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಹಾಜರಿದ್ದ ನಾಯಕ ನಟಿ ಮಾನ್ವಿತಾ ಹರೀಶ್, ಹಿರಿಯ ನಟಿ ಸುಮಲತಾ ಅಂಬರೀಶ್ ಚಿತ್ರದ ಬಗ್ಗೆ ಮಾತನಾಡಿದರು. ‘ ಇದೇ ಜನವರಿ 24ಕ್ಕೆ ತೆರೆಗೆ ಬರುತ್ತಿದೆ.