ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಮತ್ತು ಸಹಚರರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ನಟ ಕಿಚ್ಚ ಸುದೀಪ್ ಅವರು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ” ನ್ಯಾಯವೇ” ಮುಖ್ಯ ಎಂದಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು,ಮುಖ್ಯಮಂತ್ರಿ ಸಿದ್ದರಾಮಯ್ಯ , ಮಾಧ್ಯಮಗಳು ಬಹಳ ಪ್ರಯತ್ನ ಹಾಕಿ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದೀರಿ.ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು , ಹೆಣ್ಣುಮಗುವಿಗೆ ನ್ಯಾಯ ಸಿಗಬೇಕು, ಹುಟ್ಟಬೇಕಾದ ಮಗುವಿಗೆ ನ್ಯಾಯ ಸಿಗಬೇಕು. ಕಾನೂನಿನ ಬಗ್ಗೆ ಎಲ್ಲರಿಗೂ ನ್ಯಾಯ ಹುಟ್ಟಬೇಕು.ಇದೆ ನಮ್ಮ ಆಶಯ” ಎಂದರು.
”ಚಿತ್ರರಂಗಕ್ಕೆ ನ್ಯಾಯ ಸಿಗಬೇಕು, ಚಿತ್ರರಂಗಕ್ಕೆ ಕ್ಲೀನ್ ಚಿಟ್ ಸಿಗಬೇಕು. ಜನ ಬಂದಿಲ್ಲ ಅಂದ್ರೆ ಚಿತ್ರ ರಂಗ, ಸಿನಿಮಾ ಗೆದ್ದಿಲ್ಲ ಅಂದರೆ ಚಿತ್ರ ರಂಗವನ್ನು ದೂರುವುದು. ಚಿತ್ರ ರಂಗ ಅಂದರೆ ಕೇವಲ ಒಬ್ಬರು ಇಬ್ಬರು ಅಲ್ಲ, ನಾವು ಯಾರು ಕಾನೂನು ಅಲ್ಲ,ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ನಮ್ಮ ಪದ ಅಲ್ಲ. ನ್ಯಾಯವೇ ಮುಖ್ಯ, ಮಾಧ್ಯಮಗಳು ಕೂಡ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬರೂ ಕೂಡ ಆ ಕುಟುಂಬಕ್ಕೆ ತಲುಪಬೇಕು” ಎಂದರು.
”ನಾನು ದೇವರಲ್ಲ, ಮಾಡುವುದೆಲ್ಲ ಸರಿಯೇ ಮಾಡಬೇಕು ಎಂಬ ಒತ್ತಡ ಹಾಕುವುದು ಸರಿಯಲ್ಲ. ನ್ಯಾಯ ದೊರಕಿಸುವ ಕೆಲಸ ಮುಖ್ಯವಾಗಿ ಮಾಡಬೇಕಾಗಿದೆ” ಎಂದರು.
‘ಯಾವ ಭಾಗದವನಿಗೆ ಅನ್ಯಾಯವಾಗಿದೆ ಎನ್ನುವುದು ಪ್ರಶ್ನೆಯಲ್ಲ, ಕರ್ನಾಟಕದ ಯಾವುದೇ ಮೂಲೆಯಲ್ಲಿ ಹುಟ್ಟಿದರೂ ಅವನು ಕನ್ನಡಿಗ’ ಎಂದರು.