ಬೆಂಗಳೂರು: ಇನ್ನು ಮುಂದೆ ಹಿರಿಯ ನಾಗರಿಕರು ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಸರದಿ ಸಾಲಲ್ಲಿ ನಿಲ್ಲಬೇಕಾಗಿಲ್ಲ.
ಧರ್ಮಾದಾಯ ದತ್ತಿ ಇಲಾಖೆ ಅಡಿಯಲ್ಲಿ ಬರುವ ದೇಗುಲಗಳಲ್ಲಿ ಹಿರಿಯ ನಾಗರಿಕರಿಗೆ ನೇರ ಪ್ರವೇಶ ಸಿಗಲಿದೆ. ಆಧಾರ್ ಕಾರ್ಡ್ ಅಥವಾ ವಯಸ್ಸಿನ ದಾಖಲೆ ತೋರಿಸಿ ನೇರವಾಗಿ ಒಳ ಪ್ರವೇಶಿಸಿ, ದೇವರ ದರ್ಶನ ಪಡೆಯಲು ಸರಕಾರ ಅವಕಾಶ ನೀಡಿದೆ. ಈ ಬಗ್ಗೆ ಬುಧವಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಧರ್ಮಾದಾಯ ದತ್ತಿ ಇಲಾಖೆ ವ್ಯಾಪ್ತಿಯ “ಎ’ ವರ್ಗ ಮತ್ತು “ಬಿ’ ವರ್ಗಗಳ ಸಂಸೆœಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯರು ಸರದಿ ಸಾಲಿನಲ್ಲಿ ನಿಲ್ಲದೆ ದೇವರ ದರ್ಶನ ಮಾಡಬಹುದು ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಸಹಾಯ ಕೇಂದ್ರ ತೆರೆಯಲು ಸೂಚನೆ
ಹಿರಿಯರಿಗೆ ಸುಲಭವಾಗಿ ದರ್ಶನ ವ್ಯವಸ್ಥೆ ಕಲ್ಪಿಸುವಂತೆ ಹಿರಿಯ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ. ದೇವಾಲಯದಲ್ಲಿ ಸ್ಥಳಾವಕಾಶವಿದ್ದರೆ ಹಿರಿಯ ನಾಗರಿಕರಿಗೆಂದು ಪ್ರತ್ಯೇಕ ಸ್ಥಳ ಕಾದಿರಿಸಬೇಕು. ಜತೆಗೆ ಸಹಾಯ ಕೇಂದ್ರ ತೆರೆಯುವುದು ಸಹಿತ ಹಲವಾರು ಕ್ರಮಗಳನ್ನು ಕೈಗೊಳ್ಳÛಬೇಕು ಎಂದು ಸೂಚಿಸಿದ್ದಾರೆ.