ಲಾಕ್ ಡೌನ್‌ನಿಂದಾಗಿ ಎಲ್ಲರೂ ಮನೆಯೊಳಗೆ ಕಳೆಯುವಂತಾಗಿದೆ. ಸದಾ ಬಿಝಿಲೈಫ್‌ನಲ್ಲಿದ್ದವರು ಕೂಡಾ ಎಲ್ಲವನ್ನು ಬದಿಗಿಟ್ಟು ನಾಲ್ಕು ಗೋಡೆಯ ಮಧ್ಯೆ ಕೂರುವಂತಾಗಿದೆ. ಇಲ್ಲಿ ಶ್ರೀಸಾಮಾನ್ಯ, ಸ್ಟಾರ್ ಎಂಬ ಯಾವುದೇ ಭೇದವಿಲ್ಲದೇ ಎಲ್ಲರೂ ಮನೆ ಸೇರಿದ್ದಾರೆ. ಅದೇನೇ ಆದರೂ ಅಭಿಮಾನಿಗಳಿಗೆ ಮಾತ್ರ ತಮ್ಮ ನೆಚ್ಚಿನ ನಟ ಏನು ಮಾಡುತ್ತಿರಬಹುದು ಎಂಬ ಕುತೂಹಲ ಸಹಜ. ಇದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕೂಡಾ ಹೊರತಲ್ಲ.
ತಮ್ಮ ನೆಚ್ಚಿನ ಡಿ ಬಾಸ್ ಏನು ಮಾಡುತ್ತಿರಬಹುದು, ಬೆಂಗಳೂರಿನಲ್ಲಿದ್ದಾರಾ. ಮೈಸೂರಿನಲ್ಲಿದ್ದಾರಾ ಎಂಬ ಕುತೂಹಲವಿರುತ್ತದೆ. ದರ್ಶನ್ ಸದ್ಯ ಬೆಂಗಳೂರಿನ ಮನೆಯಲ್ಲೇ ಇದ್ದಾರೆ. ಎಲ್ಲರಂತೆ ಅವರು ಕೂಡಾ ನಾಲ್ಕು ಗೋಡೆ ಮಧ್ಯೆ ಬಂಧಿಯಾಗಿದ್ದಾರೆ. ತಮ್ಮ ದಿನಚರಿ ಬಗ್ಗೆ ದರ್ಶನ್ ಉದಯವಾಣಿ ಜೊತೆ ಮಾತನಾಡಿದ್ದಾರೆ.
ಗೋಡೆ ಮಧ್ಯೆ ದಾಸ ವಾಸ… : ನಿಮಗೆ ಗೊತ್ತಿರುವಂತೆ ದರ್ಶನ್ ಸದಾ ಬಿಝಿಯಾಗಿ ಓಡಾಡಿಕೊಂಡಿದ್ದವರು. ಸಿನಿಮಾ ಚಿತ್ರೀಕರಣವಿಲ್ಲದ ಸಮಯದಲ್ಲಿ ದರ್ಶನ್ ತಮ್ಮ ಸ್ನೇಹಿತರ ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿ ಬೆಂಬಲಿಸುತ್ತಿದ್ದರು. ಅದು ಬಿಟ್ಟರೆ ಮೈಸೂರು. ತಮ್ಮ ತೋಟದ ಮನೆಯಲ್ಲಿ ಪ್ರಾಣಿ ಪಕ್ಷ, ಫ್ರೆಂಡ್ಸ್ ಎಂದು ಜಾಲಿಯಾಗಿರುತ್ತಿದ್ದ ದರ್ಶನ್ ಕೂಡಾ ಈಗ ಲಾಕ್ ಡೌನ್‌ನಿಂದ ಮನೆಯಲ್ಲೇ ಇರುವಂತಾಗಿದೆ. ಈ ಬಗ್ಗೆ ಮಾತನಾಡುವ ದರ್ಶನ್, ನಾನು ಕೂಡಾ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದೇನೆ. ಎದ್ದು ಗೋಡೆ ನೋಡುವುದರಲ್ಲೇ ಸಮಯ ಹೋಗುತ್ತಿದೆ. ಮನೆಯಲ್ಲೇ ಇದ್ದೇನೆ. ಇಡೀ ಪ್ರಪಂಚವೇ ಕೋವಿಡ್ 19 ವಿರುದ್ಧ ಹೋರಾಡುತ್ತಿದೆ. ನಾನು ಕೂಡಾ ಮನೆಯಲ್ಲೇ ಇದ್ದು, ಫೆ„ಟ್ ಮಾಡುತ್ತಿದ್ದೇನೆ. ಟೈಮ್ ಪಾಸ್‌ಗೆ ಸಿನಿಮಾ ನೋಡುತ್ತೇನೆ, ಕಾರ್ ವಾಶ್ ಮಾಡಿದೆ. ಎಲ್ಲೂ ಹೋಗಲಾಗುತ್ತಿಲ್ಲ ಎಂದು ನಾನು ಬೇಸರ ಮಾಡಿಕೊಂಡಿಲ್ಲ. ಏಕೆಂದರೆ ಇದು ನನಗೊಬ್ಬನಿಗೆ ಬಂದ ತೊಂದರೆಯಲ್ಲ. ಇಡೀ ದೇಶವೇ ಇದರ ವಿರುದ್ಧ ಹೋರಾಡುತ್ತಿದೆ. ಈ ಸಮಯದಲ್ಲಿ ನಾವು ಮನೆಯಲ್ಲಿದ್ದು, ನಮ್ಮ ಕರ್ತವ್ಯ ಮಾಡಬೇಕು ಅನ್ನೋದು ದರ್ಶನ್ ಮಾತು.
ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುವ ಸಮಯ ಇದಲ್ಲ : ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಇಷ್ಟೊತ್ತಿಗೆ ತೆರೆಕಾಣಬೇಕಿತ್ತು. ಏಪ್ರಿಲ್ 9ರಂದು ಚಿತ್ರ ತೆರೆಗೆ ಬರುವುದು ಬಹುತೇಕ ಪಕ್ಕಾ ಆಗಿತ್ತು. ಆದರೆ ಕೋವಿಡ್ 19ದಿಂದ ಚಿತ್ರ ಬಿಡುಗಡೆ ಅನಿರ್ದಿಷ್ಟಾವಧಿ ಮುಂದೆ ಹೋಗಿದೆ. ಲಾಕ್‌ಡೌನ್ ಸಂಪೂರ್ಣ ತೆರವಾಗಿ ಚಿತ್ರಪ್ರದರ್ಶನಕ್ಕೆ ಅವಕಾಶ ಸಿಗಬೇಕು. ಈ ಬಗ್ಗೆ ಮಾತನಾಡುವ ದರ್ಶನ್, ಇದು ಸಿನಿಮಾ ಬಗ್ಗೆ ಮಾತನಾಡುವ ಸಮಯವಲ್ಲ. ಲಾಕ್‌ಡೌನ್ ತೆರವಾಗಬೇಕು, ಸಿನಿಮಾ ಪ್ರದರ್ಶನ ಆರಂಭವಾಗಬೇಕು. ಮುಖ್ಯವಾಗಿ ಜನ ಟೆನ್ಷನ್ ಮರೆತು ಆರಾಮವಾಗಿ ಓಡಾಡುವಂತಾಗಬೇಕು. ನಾವು ಸಿನಿಮಾ ಮಾಡೋದು ಜನರಿಗಾಗಿ. ಹೀಗಿರುವಾಗ ಜನರ ಪರಿಸ್ಥಿತಿ ಸಂಪೂರ್ಣ ಸುಧಾರಿಸದೇ ಇರುವಾಗ ನಾವು ಚಿತ್ರ ಬಿಡುಗಡೆ ಮಾಡೋದು ಕೂಡಾ ಕಷ್ಟ. ಹಾಗಾಗಿ, ಸಿನಿಮಾ ಬಿಡುಗಡೆ ಬಗ್ಗೆ ಈಗ ಮಾತನಾಡುವಂತಿಲ್ಲ ಎನ್ನುವುದು ದರ್ಶನ್ ಮಾತು.
ತಡವಾಗಲಿದೆ ರಾಜವೀರ ಮದಕರಿನಾಯಕ : ಸದ್ಯ ದರ್ಶನ್ ರಾಬರ್ಟ್ ಮುಗಿಸಿಕೊಂಡು ರಾಜವೀರ ಮದಕರಿ ನಾಯಕ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಆದರೆ, ಈಗ ಲಾಕ್ ಡೌನ್‌ನಿಂದಾಗಿ ಚಿತ್ರೀಕರಣ ಮುಂದೋಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರವಷ್ಟೇ ಚಿತ್ರೀಕರಣ ಆರಂಭ. ಹೀಗಾಗಿ ಈ ವರ್ಷ ರಾಬರ್ಟ್ ನಂತರ ದರ್ಶನ್ ಸಿನಿಮಾ ಬಿಡುಗಡೆಯೂ ತಡವಾಗಲಿದೆ. ಹಾಗಾಗಿ ಸುದೀರ್ಘ ಗ್ಯಾಪ್ ತುಂಬಿಸಲು ರಾಬರ್ಟ್ ಸ್ವಲ್ಪ ತಡವಾಗಿ ಬಂದರೂ ಬರಬಹುದು. ಈ ಮೂಲಕ ದರ್ಶನ್ ಸಿನಿಮಾಗಳ ಬಿಡುಗಡೆ, ಚಿತ್ರೀಕರಣ ಎಲ್ಲದರಲ್ಲೂ ವ್ಯತ್ಯಯವಾಗಲಿದೆ.
-ರವಿ ರೈ