ಅಂತೂ ಇಂತೂ “ಮದಗಜ’ ಶೀರ್ಷಿಕೆ ಗೊಂದಲಕ್ಕೆ ತೆರೆಬಿದ್ದಿದೆ. ಹೌದು, ಶ್ರೀಮುರುಳಿ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿ ಹೇಳಿಕೆ ನೀಡಿದ್ದ ನಿರ್ದೇಶಕ ಮಹೇಶ್ ಅವರು, ಆ ಚಿತ್ರಕ್ಕೆ “ಮದಗಜ’ ಎಂದು ನಾಮಕರಣ ಮಾಡಿದ ಬಗ್ಗೆ ಘೋಷಣೆ ಮಾಡಿದ್ದರು. ಹಾಗೆ ಹೇಳುತ್ತಿದ್ದಂತೆಯೇ, ಅತ್ತ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಅವರು, ಆ ಶೀರ್ಷಿಕೆ ನಮ್ಮ ಬ್ಯಾನರ್‌ನಲ್ಲಿ ನೋಂದಣಿಯಾಗಿದ್ದು, ದರ್ಶನ್ ಅಭಿನಯದಲ್ಲಿ “ಮದಗಜ’ ಚಿತ್ರ ನಿರ್ಮಿಸುವುದಾಗಿ ಹೇಳಿದ್ದರು.
ಆಗ ಶೀರ್ಷಿಕೆ ವಿಷಯದಲ್ಲಿ ಗೊಂದಲ ಉಂಟಾಗಿತ್ತು. ಕೊನೆಗೆ “ಶ್ರೀಮುರುಳಿ ಮದಗಜ’ ಎಂಬ ಶೀರ್ಷಿಕೆ ಇಟ್ಟು ಚಿತ್ರ ಮಾಡುವುದಾಗಿ ನಿರ್ದೇಶಕ ಮಹೇಶ್ ಹೇಳಿದ್ದರು. ಕೊನೆಗೆ ಶೀರ್ಷಿಕೆ ವಿವಾದ ಇನ್ನಷ್ಟು ಗೊಂದಲ ಎಬ್ಬಿಸಿತ್ತು. ಈಗ ಸ್ವತಃ ದರ್ಶನ್ ಅವರೇ ಆ ಗೊಂದಲ ಬಗೆಹರಿಸಿದ್ದಾರೆ. ದರ್ಶನ್ ಅವರಿಗೆ “ಮದಗಜ’ ಚಿತ್ರದ ಶೀರ್ಷಿಕೆ ವಿಷಯ ತಿಳಿಯುತ್ತಿದ್ದಂತೆಯೇ, ಪ್ರೀತಿಯಿಂದಲೇ ಆ ಶೀರ್ಷಿಕೆಯನ್ನು ಬಿಟ್ಟುಕೊಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಅಷ್ಟೇ ಅಲ್ಲ, ಡಿ.17ರಂದು ದರ್ಶನ್ ಅವರಿಂದಲೇ “ಮದಗಜ’ ಚಿತ್ರದ ಟೈಟಲ್ ಹಾಗೂ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಲಿದೆ. “ಉದಯವಾಣಿ’ ಜೊತೆ “ಮದಗಜ’ ಶೀರ್ಷಿಕೆ ಕುರಿತು ಹೇಳಿಕೊಂಡ ನಿರ್ದೇಶಕ ಮಹೇಶ್, “ಆರಂಭದಲ್ಲಿ “ಮದಗಜ’ ಶೀರ್ಷಿಕೆ ಗೊಂದಲ ಉಂಟುಮಾಡಿದ್ದು ನಿಜ. ಆದರೆ, ದರ್ಶನ್ ಅವರು ಆ ಸಮಸ್ಯೆ ಬಗೆಹರಿಸಿದ್ದಾರೆ. ಅವರೇ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಅವರ ಜೊತೆ ಚರ್ಚಿಸಿ, ಪ್ರೀತಿಯಿಂದಲೇ “ಮದಗಜ’ ಶೀರ್ಷಿಕೆಯನ್ನು ಬಿಟ್ಟುಕೊಟ್ಟಿದ್ದಾರೆ.
ಶೀರ್ಷಿಕೆ ಇಟ್ಟುಕೊಂಡು ಆ ಚಿತ್ರವನ್ನು ಯಾರು ಮಾಡಿದರೇನು, ಎಲ್ಲರೂ ಕಲಾವಿದರೇ ಎಂದು ಹೇಳಿದ್ದಲ್ಲದೆ, ಆ ಚಿತ್ರ ಮಾಡುತ್ತಿರೋದು ನಮ್ಮ ಮುರುಳಿ ತಾನೇ, ಸಿನಿಮಾ ಚೆನ್ನಾಗಿ ಮಾಡು. ಟೈಟಲ್‌ಗೆ ತಕ್ಕಂತೆ ಸಿನಿಮಾ ಮೂಡಿಬರಲಿ. ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದ್ದಾರೆ’ ಎಂದು ವಿವರಿಸುತ್ತಾರೆ ಮಹೇಶ್. ಅಂದು “ಮದಗಜ’ ಶೀರ್ಷಿಕೆ ಬಿಡುಗಡೆ ವೇಳೆ, ನಿರ್ಮಾಪಕ ಎಂ.ಜಿ.ರಾಮಮೂರ್ತಿ ಅವರೂ ಆಗಮಿಸಲಿದ್ದಾರೆ. “ಮದಗಜ’ ಟೈಟಲ್ ಸಮಸ್ಯೆ ಈಗ ಸುಖಾಂತ್ಯ ಕಂಡಿದೆ. “ದರ್ಶನ್ ಅವರದು ನಿಜಕ್ಕೂ ದೊಡ್ಡ ಗುಣ.
ಅಂಥದ್ದೊಂದು ಮಾಸ್ ಟೈಟಲ್ ಅನ್ನು ಪ್ರೀತಿಯಿಂದಲೇ ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಶತಕೋಟಿ ಧನ್ಯವಾದ ಅರ್ಪಿಸುತ್ತೇನೆ. ಅವರ ಅಭಿಮಾನಿಗಳಿಗೂ ಧನ್ಯವಾದ ಹೇಳುತ್ತೇನೆ. ನಿರ್ಮಾಪಕ ಎಂ.ಜಿ.ರಾಮಮೂರ್ತಿ ಅವರಿಗೂ ನಮ್ಮ ಚಿತ್ರತಂಡದಿಂದ ಥ್ಯಾಂಕ್ಸ್ ಹೇಳುತ್ತೇನೆ’ ಎನ್ನುತ್ತಾರೆ ಮಹೇಶ್. ಅದೇನೆ ಇರಲಿ, “ಮದಗಜ’ ಈಗ ಶ್ರೀಮುರಳಿ ಪಾಲಾಗಿದೆ. ಸದ್ಯ ಅವರೀಗ “ಭರಾಟೆ’ ಜಪದಲ್ಲಿದ್ದಾರೆ. ಆ ಚಿತ್ರ ಮುಗಿದ ಬಳಿಕ “ಮದಗಜ’ ಶುರುವಾಗುತ್ತೋ ಅಥವಾ ಬೇರೆ ಚಿತ್ರಕ್ಕೆ ಗ್ರೀನ್‌ಸಿಗ್ನಲ್ ಕೊಡುತ್ತಾರೋ ಕಾದು ನೋಡಬೇಕು.