Advertisement
ವಿವಿಧ ಚಲನಚಿತ್ರಗಳಿಗೆ ಸಹ ಕಲಾವಿದರನ್ನು ಪೂರೈಸುವ ಏಜೆಂಟ್ ಆಗಿರುವ ಶಿವಶಂಕರ್ ಹಲಕ್ಲೆಗೊಳಗಾದವರು. ವಿಶೇಷವೆಂದರೆ, ಚಿತ್ರೀಕರಣದ ದೃಶ್ಯವನ್ನು ವಿಡಿಯೋ ಮಾಡಿರುವುದು ದರ್ಶನ್‌ರಿಂದ ಏಟು ತಿಂದ ಶಿವಶಂಕರ್ ಕರೆತಂದಿದ್ದ ಸಹಕಲಾವಿದರು! ಆದರೆ ಚಾಲೆಂಜಿಂಗ್‌ಸ್ಟಾರ್ ಕೋಪಕ್ಕೆ ತುತ್ತಾಗಿದ್ದು ಮಾತ್ರ ಏನೂ ಮಾಡದ ಏಜೆಂಟ್ ಎಂದು ತಿಳಿದುಬಂದಿದೆ. ಮಾಗಡಿ ಸಮೀಪದ ಎಲೆಕೊಡುಗೇಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಚಿತ್ರೀಕರಣ ನಡೆಯುವಾಗ ಘಟನೆ ಸಂಭವಿಸಿದೆ.
Related Articles
Advertisement
ಇದೇ ವೇಳೆ ತಮ್ಮ ನೆಚ್ಚಿನ ನಟನ ವಿರುದ್ಧ ಪ್ರಕರಣ ದಾಖಲಿಸಲು ಬಂದಿದ್ದ ಶಿವಶಂಕರ್ ವಿರುದ್ಧ ದರ್ಶನ್ ಅಭಿಮಾನಿಗಳು ಠಾಣೆ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಬಳಿಕ ಅಭಿಮಾನಿಗಳ ಮನವೊಲಿಸಿ ವಾಪಸ್ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಾನೊತ್, “ಸಹಕಲಾವಿದರನ್ನು ಪೂರೈಸುವ ಏಜೆಂಟ್ ಮೇಲೆ ದರ್ಶನ್ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಇದುವರೆಗೂ ದೂರು ನೀಡಿಲ್ಲ. ಠಾಣೆಗೆ ಬಂದಿದ್ದ ದೂರುದಾರರು ಕೆಲ ಹೊತ್ತಿನ ಬಳಿಕ ದೂರು ನೀಡುವುದಿಲ್ಲ ಎಂದು ವಾಪಸ್ ತೆರಳಿದ್ದಾರೆ’ ಎಂದು ಮಾಹಿತಿ ನೀಡಿದರು.
ಕ್ಷಮೆ ಕೇಳಲು ಒತ್ತಾಯ: ಮತ್ತೂಂದೆಡೆ ಹಲ್ಲೆ ಪ್ರಕರಣ ಸಂಬಂಧ ನಟ ದರ್ಶನ್ ಕೂಡಲೇ ಕ್ಷಮೆ ಕೇಳಬೇಕು ಎಂದು ಸಹಕಲಾವಿದರ ಸಂಘ ಒತ್ತಾಯಿಸಿದೆ. ಒಂದು ವೇಳೆ ಹಲ್ಲೆಯಿಂದ ಶಿವಶಂಕರ್ ಗಂಭೀರವಾಗಿ ಗಾಯಗೊಂಡಿದ್ದರೆ ಇವರ ಕುಟುಂಬ ಸದಸ್ಯರನ್ನು ಯಾರು ನೋಡಿಕೊಳ್ಳುತ್ತಿದ್ದರು? ಹೀಗಾಗಿ ದರ್ಶನ್ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಹಕಲಾವಿದರ ಸಂಘದ ಗೌರವಾಧ್ಯಕ್ಷ ಗಂಗಾಧರ್, ಬೇರೆಯವರು ವಿಡಿಯೋ ಮಾಡಿದ್ದಕ್ಕೆ ಶಿವಶಂಕರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಶಿವಶಂಕರ್ ದೂರು ನೀಡಲು ಮುಂದಾಗಿದ್ದರು.
ಪ್ರಕರಣ ದಾಖಲಾಗುವುದರಿಂದ ನಿರ್ಮಾಪಕರು ಹಾಗೂ ಸಹಕಲಾವಿದರ ನಡುವೆ ವೈಮನಸ್ಸು ಉಂಟಾಗುತ್ತದೆ. ಹೀಗಾಗಿ ದೂರು ವಾಪಸ್ ಪಡೆಯುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಶಿವಶಂಕರ್ ಕೂಡ ಸ್ಪಂದಿಸಿದ್ದಾರೆ. ಶುಕ್ರವಾರ ಈ ವಿಚಾರ ಕುರಿತು ಸಂಬಂಧಿಸಿದವರ ಜತೆ ಚರ್ಚಿಸುವುದಾಗಿ ತಿಳಿಸಿದರು.
ದರ್ಶನ್ ಪತ್ನಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: “ವಿಕೃತ ಮನಸ್ಸಿನ ಕೆಲ ವ್ಯಕ್ತಿಗಳು ತನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಅವಹೇಳನಕಾರಿ ಫೋಸ್ಟ್ ಮಾಡಿದ್ದಾರೆ’ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ವಿಜಯಲಕ್ಷ್ಮೀ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಕಿಡಿಗೇಡಿಗಳು, ವಿಜಯಲಕ್ಷ್ಮಿ ಅವರ ಕುಟುಂಬದ ಸದಸ್ಯರ ಫೋಟೋಗಳನ್ನು ಹಾಕಿ ಅಸಲಿ ಖಾತೆ ಎಂಬಂತೆ ಬಿಂಬಿಸಿದ್ದಾರೆ. ಬಳಿಕ ಆ.18ರಂದು ವಿಜಯಲಕ್ಷ್ಮೀ ಅವರ ಭಾವಚಿತ್ರ ಅಪ್‌ಲೋಡ್ ಮಾಡಿ ಅಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ.
ಈ ರೀತಿ ನಕಲಿ ಖಾತೆ ತೆರೆದು ಅನುಚಿತವಾಗಿ ವರ್ತಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಜಯಲಕ್ಷ್ಮೀ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.