ಅಲ್ಲಿ ಹಾರ ತುರಾಯಿಗಳಿರಲಿಲ್ಲ, ಕೇಕ್ ಕತ್ತರಿಸಬೇಕೆಂಬ ತುಡಿತವೂ ಇರಲಿಲ್ಲ. ಬದಲಾಗಿ ಒಂದಷ್ಟು ದವಸ ಧಾನ್ಯಗಳನ್ನು ಹಿಡಿದ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು. ಅವರೆಲ್ಲರ ಮುಖದಲ್ಲಿ ತಮ್ಮ ನೆಚ್ಚಿನ ನಟನ ಕೈ ಕುಲುಕಿ, ಹುಟ್ಟುಹಬ್ಬದ ಶುಭಾಶಯ ತಿಳಿಸುವ ಕಾತರ ಎದ್ದು ಕಾಣುತ್ತಿತ್ತು! ಈ ವಾತಾವರಣ ಕಂಡು ಬಂದಿದ್ದು, ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಮುಂದೆ. ನಟ ದರ್ಶನ್ ನಿನ್ನೆ (ಫೆ.16) ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬವೆಂದರೆ ಅಲ್ಲಿ ಕೇಕ್, ಹಾರ, ತುರಾಯಿಗಳನ್ನು ಹಿಡಿದು ಬರುತ್ತಿದ್ದ ಅಭಿಮಾನಿಗಳು ಈ ಬಾರಿ ಅವೆಲ್ಲವನ್ನು ಪಕ್ಕಕ್ಕಿಟ್ಟು ದವಸ ಧಾನ್ಯಗಳನ್ನು ತಂದಿದ್ದರು. ಅದಕ್ಕೆ ಕಾರಣ ದರ್ಶನ್ ನಿರ್ಧಾರ. ಮೊದಲನೇಯದಾಗಿ ಅಂಬರೀಶ್ ಅವರ ನಿಧನದ ಹಿನ್ನೆಲೆ ಹಾಗೂ ಪುಲ್ವಾಮದಲ್ಲಿ ನಡೆದ ಸೈನಿಕರ ಮೇಲಿನ ದಾಳಿಯಿಂದಾಗಿ ಈ ಬಾರಿ ಕೇಕ್ ಕಟ್ ಮಾಡದೇ, ಹಾರ ಹಾಕಿಸಿಕೊಳ್ಳದೇ ಸರಳವಾಗಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಲು ದರ್ಶನ್ ನಿರ್ಧರಿಸಿದ್ದು.
ಜೊತೆಗೆ ಶ್ರೀಸಿದ್ಧಗಂಗಾ ಮಠದ ದಾಸೋಹಕ್ಕೆ ಪ್ರತಿ ವರ್ಷ ತನ್ನ ಕೈಲಾದ ಸಹಾಯ ಮಾಡುತ್ತೇನೆಂದು ದರ್ಶನ್ ಹೇಳಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಈ ವರ್ಷ ಹಾರ, ಕೇಕ್ ಬದಲು ದವಸ ಧಾನ್ಯಗಳನ್ನು ನೀಡಲಾರಂಭಿಸಿದ್ದು. ಹೀಗಾಗಿ ಈ ವರ್ಷದ ಹುಟ್ಟುಹಬ್ಬವನ್ನು ಯಾವುದೇ ಆಚರಣೆ ಇಲ್ಲದೇ ಸರಳವಾಗಿ ಅಭಿಮಾನಿಗಳೊಂದಿಗೆ ಕಳೆದರು. ದೂರದ ಊರುಗಳಿಂದ ಬಂದಿದ್ದ ಅಭಿಮಾನಿಗಳ ಕೈ ಕುಲುಕುತ್ತಾ, ಅವರ ಸಂತೋಷಕ್ಕೆ ಕಾರಣರಾದರು. ಮಹಿಳೆಯರು, ಮಕ್ಕಳಿಗಾಗಿ ವಿಶೇಷ ಸಾಲುಗಳ ವ್ಯವಸ್ಥೆ ಮಾಡಲಾಗಿತ್ತು.
ಪ್ರಾಣಿ, ಪಕ್ಷಿಗಳನ್ನು ತುಂಬಾ ಇಷ್ಟಪಡುವ ದರ್ಶನ್‌ಗೆ ಅಭಿಮಾನಿಯೊಬ್ಬರು ಎರಡು ಮೊಲಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಬಂದ ಸಾವಿರಾರು ಅಭಿಮಾನಿಗಳಿಗೆ ಕೈ ಕುಲುಕಿ ಖುಷಿಪಡಿಸಿದ ದರ್ಶನ್, “ಅಭಿಮಾನಿಗಳ ಅಭಿಮಾನದ ಮುಂದೆ ನೋವೆಲ್ಲಾ ಏನೂ ಇಲ್ಲ. ದೂರದ ಊರುಗಳಿಂದ ಬಂದಿದ್ದಾರೆ. ಅದಕ್ಕೆ ಕಾರಣ ಅವರಿಟ್ಟಿರುವ ಪ್ರೀತಿ, ಅಭಿಮಾನ. ಕಳೆದ ವರ್ಷ ರಾಶಿ ರಾಶಿ ಹಾರ, ಕೇಕ್ ಬಂದು ಹಾಳಾಗುತ್ತಿತ್ತು.
ಹಾಗಾಗಿ, ಈ ಬಾರಿ ನನ್ನಿಂದ ಸಹಾಯ ಆಗಲಿ ಎಂದು ದವಸ, ಧಾನ್ಯಗಳನ್ನು ತರುವಂತೆ ವಿನಂತಿಸಿಕೊಂಡೆ. ಅಭಿಮಾನಿಗಳು ಪ್ರೀತಿಯಿಂದ ತಂದುಕೊಟ್ಟಿದ್ದಾರೆ. ಒಂದೆರಡು ದಿನದಲ್ಲೇ ಅದನ್ನು ಎಲ್ಲೆಲ್ಲಿಗೆ ತಲುಪಿಸಬೇಕೋ ತಲುಪಿಸುತ್ತೇವೆ’ ಎಂದ ದರ್ಶನ್, “ಚಿತ್ರರಂಗಕ್ಕೆ ಯಾರೇ ಹೊಸಬರು ಬಂದರೂ ಬೆಂಬಲಿಸುತ್ತೇನೆ. ಚಿತ್ರರಂಗ ಯಾರಪ್ಪನ ಆಸ್ತಿಯೂ ಅಲ್ಲ.
ಹೊಸಬರು ಚಿತ್ರರಂಗಕ್ಕೆ ಬಂದು ಬೆಳಿಬೇಕು ಅನ್ನೋದು ನನ್ನ ಆಸೆ’ ಎಂದರು.ಅಂದಹಾಗೆ, ಈ ವರ್ಷ ದರ್ಶನ್ ಅವರ ಮೂರು ಸಿನಿಮಾಗಳು ತೆರೆಕಾಣಲಿದೆ. “ಯಜಮಾನ’, “ಕುರುಕ್ಷೇತ್ರ’ ಹಾಗೂ “ಒಡೆಯ’ ಚಿತ್ರಗಳು ಈ ವರ್ಷ ತೆರೆಕಾಣಲಿವೆ. ಪುಲ್ವಾಮ ದಾಳಿ ಬಗ್ಗೆ ಮಾತನಾಡಿದ ದರ್ಶನ್, “ಮನಸಿಗೆ ತುಂಬಾ ನೋವಾಗುತ್ತಿದೆ. ಅವರೆಲ್ಲರೂ ನಮ್ಮ ಯೋಧರು. ಫೆ.14 ನ್ನು ಬ್ಲಾಕ್ ಡೇ ಎಂದು ಕರೆದರೂ ತಪ್ಪಿಲ್ಲ’ ಎಂದರು.
ಬರ್ತ್‌ಡೇಗಾಗಿ ಹಾಡು ಬಂತು: ದರ್ಶನ್ ಹುಟ್ಟುಹಬ್ಬಕ್ಕಾಗಿ ವಿ.ನಾಗೇಂದ್ರ ಪ್ರಸಾದ್ ಹಾಡೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ಚಂದನ್ ಶೆಟ್ಟಿ ಹಾಡಿರುವ ಈ ಹಾಡು ಬಜಾರ್ ಆಡಿಯೋ ಮೂಲಕ ಹೊರಬಂದಿದೆ. ಇನ್ನು, ರವಿಚಂದ್ರನ್ ನಾಯಕರಾಗಿರುವ “ದಶರಥ’ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ದರ್ಶನ್ ಹಾಡಿದ್ದು, ಹುಟ್ಟುಹಬ್ಬ ಪ್ರಯುಕ್ತ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಎಂ.ಎಸ್.ರಮೇಶ್ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.