Advertisement

ಸಿನಿಮಾ ಡಿಸ್ಟ್ರಿಬ್ಯೂಶನ್‌ಗೆ ರೆಡಿಯಾಗಿ ಬನ್ನಿ…

07:12 AM Mar 18, 2021 | Team Udayavani |

ಕನ್ನಡ ಚಿತ್ರರಂಗದಲ್ಲಿ ಇಡೀ ತಂಡ ಜೊತೆಯಾಗಿ, ಖುಷಿಯಾಗಿ ಸಿನಿಮಾವೊಂದರ ಸಕ್ಸಸ್‌ಮೀಟ್‌ ಅನ್ನು ಆಚರಿಸಿದೇ ಎರಡ್ಮೂರು ವರ್ಷಗಳೇ ಆಗಿತ್ತು. ಆದರೆ, ದರ್ಶನ್‌ ನಟನೆಯ “ರಾಬರ್ಟ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್‌ ಸಂಭ್ರಮ ಮತ್ತೆ ಮೂಡಿದೆ. “ರಾಬರ್ಟ್‌’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಖುಷಿಯನ್ನು ಇತ್ತೀಚೆಗೆ ಚಿತ್ರತಂಡದ ಎಲ್ಲಾ ಸದಸ್ಯರೊಂದಿಗೆ ತಂಡ ಆಚರಿಸಿತು. ಸಿನಿಮಾಕ್ಕೆ ದುಡಿದ ಪ್ರತಿಯೊಬ್ಬರನ್ನು ಚಿತ್ರತಂಡ ನೆನಪು ಮಾಡಿಕೊಂಡಿತು. ಇದೇ ಸಂದರ್ಭದಲ್ಲಿ ದರ್ಶನ್‌ ಮುಕ್ತವಾಗಿ ಮಾತನಾಡಿದರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿದರು. “ರಾಬರ್ಟ್‌’ ಸಕ್ಸಸ್‌ ಸಂಭ್ರಮದಲ್ಲಿನ ದರ್ಶನ್‌ ಮಾತುಗಳು ಇಲ್ಲಿವೆ…

Advertisement

  “ಇನ್ಮುಂದೆ, ನನ್ನ ಜೊತೆ ಸಿನಿಮಾ ಮಾಡಲು ಬರುವ ನಿರ್ಮಾಪಕರು ಮೊದಲು ಡಿಸ್ಟ್ರಿಬ್ಯೂಶನ್‌ (ವಿತರಣೆ) ಮಾಡಲು ರೆಡಿಯಾಗಿರಬೇಕು. ಜೊತೆಗೆ ಆ ಬಗ್ಗೆ ಚೆನ್ನಾಗಿ ಕಲಿತುಕೊಂಡು ಬನ್ನಿ. ಇಲ್ಲದಿದ್ದರೆ ನನ್ನ ಜೊತೆ ಸಿನಿಮಾ ಮಾಡಲು ಬರಬೇಡಿ. ಸುಮ್ಮನೆ ಹಣ ಹಾಕಿ, ಅದರಿಂದ ವಿತರಕರಿಗೆ ಮಾತ್ರ ಲಾಭ ಕೊಟ್ಟು, ನಿರ್ಮಾಪಕರು ಕೈಸುಟ್ಟುಕೊಳ್ಳುವಂತಾಗುವುದು ಬೇಡ. ಇದನ್ನ ರಿಕ್ವೆಸ್ಟ್‌ ಅಂತಾದ್ರೂ, ಅಂದ್ಕೊಳ್ಳಿ ವಾರ್ನಿಂಗ್‌ ಅಂತಾದ್ರೂ ಅಂದ್ಕೊಳ್ಳಿ…’

ಅಂದಹಾಗೆ ಈ ಮಾತನ್ನು ಹೇಳಿದ್ದು, ನಟ ಚಾಲೆಂ ಜಿಂಗ್‌ ಸ್ಟಾರ್‌ ದರ್ಶನ್‌. ಇಂಥ ದ್ದೊಂದು ಮಾತಿಗೆ ವೇದಿಕೆಯಾಗಿದ್ದು, “ರಾಬರ್ಟ್‌’ ಚಿತ್ರದ ಸಕ್ಸಸ್‌ ಮೀಟ್‌.

ಇವತ್ತು “ರಾಬರ್ಟ್‌’ ಸಿನಿಮಾ ಇಷ್ಟು ದೊಡ್ಡ ಕಲೆಕ್ಷನ್‌ ಪಡೆದು, ಸಕ್ಸಸ್‌ ಆಗೋದಕ್ಕೆ ಕಾರಣ ಸಿನಿಮಾದ ಕಂಟೆಂಟ್‌ ಮತ್ತು ಡಿಸ್ಟ್ರಿಬ್ಯೂಶನ್‌ ಪ್ಲಾನಿಂಗ್‌. ನಿರ್ಮಾಪಕ ಉಮಾಪತಿ ಅವರೇ ಮುಂದೆ ನಿಂತು ಖುದ್ದಾಗಿ ಸಿನಿಮಾವನ್ನ ವಿತರಣೆ ಮಾಡಿರುವುದು. ಈ ಬಗ್ಗೆ ಮಾತನಾಡಿರುವ ದರ್ಶನ್‌, “ಸಿನಿಮಾದ ಡಿಸ್ಟ್ರಿಬ್ಯೂಟರ್ ಸಿನಿಮಾದ ಕಲೆಕ್ಷನ್‌ನಲ್ಲಿ ಯಾವುದೇ ರಿಸ್ಕ್ ಇಲ್ಲದೆ, ಬಹುಪಾಲು ಲಾಭ ಪಡೆದುಕೊಳ್ಳುತ್ತಿದ್ದಾರೆ. ಕೋಟಿಗಟ್ಟಲೆ ಬಂಡವಾಳ ಹಾಕಿ ಸಿನಿಮಾ ಮಾಡಿದ ನಿರ್ಮಾಪಕನಿಗೆ, ಥಿಯೇಟರ್‌ ಮಾಲೀಕರಿಗೆ ಸಿಗಬೇಕಾದ ಲಾಭ ಎಲ್ಲೋ ಎ.ಸಿ ರೂಮ್‌ನಲ್ಲಿ ಕೂತು ವ್ಯವಹಾರ ಮಾಡುವ ಡಿಸ್ಟ್ರಿಬ್ಯೂಟರ್ ಜೇಬು ಸೇರುತ್ತಿದೆ. ಅದಕ್ಕಾಗಿ ಈ ಬಾರಿ ನಮ್ಮ ನಿರ್ಮಾಪಕರೇ ಥಿಯೇಟರ್‌ ಮಾಲೀಕರ ಜೊತೆ ಒನ್‌ ಟು ಒನ್‌ ಮಾತುಕತೆ ನಡೆಸಿ ಡಿಸ್ಟ್ರಿಬ್ಯೂಶನ್‌ ಮಾಡಿದ ಪರಿಣಾಮ ಸಿನಿಮಾ ಇವತ್ತು ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್‌ ಪಡೆಯುತ್ತಿದೆ. ಇದಕ್ಕೊಂದು ಸಿಂಪಲ್‌ ಉದಾಹರಣೆ ಕೊಡುವುದಾದರೆ, ಮಂಗಳೂರು ಸೇರಿದಂತೆ ಕರಾವಳಿಯ ಕೆಲವೆಡೆ ನನ್ನ ಸಿನಿಮಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಓಡಲ್ಲ ಅಂತಿದ್ರು. ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಒಂದರಲ್ಲಿ ಹತ್ತು ಲಕ್ಷಕ್ಕೆ ಇಡೀ ಸಿನಿಮಾ ಕೇಳಿದ್ರು. ಕೊನೆಗೆ ನಾವೇ ಆಗಿದ್ದಾಗಲಿ, ಎಂದು ಮಲ್ಟಿಪ್ಲೆಕ್ಸ್‌ಗಳಲ್ಲಿ “ರಾಬರ್ಟ್‌’ ರಿಲೀಸ್‌ ಮಾಡಿದ್ದೆವು. ಕೇವಲ ನಾಲ್ಕೇ ದಿನದಲ್ಲಿ, ಅಲ್ಲಿ “ರಾಬರ್ಟ್‌’ 55 ಲಕ್ಷ ಕಲೆಕ್ಷನ್‌ ಮಾಡಿದೆ. ಸಿನಿಮಾ ಓಡದೇ ಹೋಗಿದ್ದರೆ, ಇಷ್ಟೊಂದು ಕಲೆಕ್ಷನ್‌ ಆಗೋದು ಸಾಧ್ಯನಾ?’ ಎಂದರು ದರ್ಶನ್‌.

ಹಿಂದಿನ ಸಿನಿಮಾಗಳ ಬಾಕಿ ಇನ್ನೂ ಬಂದಿಲ್ಲ :

Advertisement

ದರ್ಶನ್‌ ಸಿನಿಮಾ ಮಾಡಿದ ಕೆಲವರಿಗೆ ಲಾಸ್‌ ಆಗಿದೆ ಅಂತಾರೆ. ಆದ್ರೆ ಅದು ಹೇಗೆ ಅನ್ನೋದನ್ನ ಯಾರೂ ಹೇಳ್ಳೋದಿಲ್ಲ. ನನ್ನ ಹಿಂದಿನ “ಯಜಮಾನ’ ಮತ್ತು “ಒಡೆಯ’ ಸಿನಿಮಾ ಗಳಿಂದ ಬರಬೇಕಾದ ಬ್ಯಾಲೆನ್ಸ್‌ ಅಮೌಂಟ್‌ ಡಿಸ್ಟ್ರಿಬ್ಯೂಟರ್ ಕಡೆಯಿಂದ ಇನ್ನೂ ಬಂದಿಲ್ಲ. ಗಾಂಧಿನಗರದ ದೊಡ್ಡ ವಿತರಕರೊಬ್ಬರು “ಒಡೆಯ’ ಸಿನಿಮಾದ ನಾಲ್ಕು ಕೋಟಿ ಹಣವನ್ನು ನಮ್ಮ ನಿರ್ಮಾಪಕ ಸಂದೇಶ್‌ ನಾಗರಾಜ್‌ಗೆ ನೀಡಬೇಕು. ಇವತ್ತಿಗೂ ಅದನ್ನು ವಾಪಸ್‌ ಪಡೆಯಲು ಆಗಿಲ್ಲ. ಇನ್ನು “ಯಜಮಾನ’ ಸಿನಿಮಾದಲ್ಲಿ ನಮ್ಮನ್ನು ಎಷ್ಟು ಯಾಮಾರಿಸಿದ್ದಾರೆ ಎಂಬುದು ಅನ್ನೋದು ನಮಗಷ್ಟೇ ಗೊತ್ತಿದೆ. ಏನಿಲ್ಲ ಅಂದ್ರೂ “ಯಜಮಾನ’ ಸಿನಿಮಾದಿಂದ ಸುಮಾರು 8 ಕೋಟಿಯಷ್ಟು ಹಣ ಬರಬೇಕು. ಅದೂ ಕೂಡ ಬಂದಿಲ್ಲ.ಕೂತಲ್ಲೇ ಕೋಟಿ ಮಾಡ್ತಾರೆ…

ಸಿನಿಮಾದಲ್ಲಿ ಯಾರೂ ಪುಗಸಟ್ಟೆಯಾಗಿ ಡಿಸ್ಟ್ರಿಬ್ಯೂಶನ್‌ ಮಾಡೋದಿಲ್ಲ. ಅದಕ್ಕೆ ಕಮೀಷನ್‌ ತಗೋಳ್ತಾರೆ. ನಾವು ಇಲ್ಲಿ ಪ್ರೊಡಕ್ಷನ್‌ ಖರ್ಚು ಅದು-ಇದು, ಅಂಥ ಸಣ್ಣ-ಪುಟ್ಟದಕ್ಕೆ ಲೆಕ್ಕಹಾಕಿ ಒದ್ದಾಡಿ ಸಿನಿಮಾ ಮಾಡ್ತಿರುತ್ತೀವಿ. ಆದ್ರೆ ಅವರು ಕೂತಲ್ಲೇ ಕೋಟಿಗಟ್ಟಲೆ ಹೊಡೆದುಕೊಂಡು ಹೋಗ್ತಾರೆ. ಅದು ನಮಗೆ ಗೊತ್ತೇ ಆಗೊಲ್ಲ. ಇಲ್ಲಿರುವ ಕೆಲವು ಡಿಸ್ಟ್ರಿಬ್ಯೂಟರ್‌ ಗಳಿಂದ ನಮಗೆ ಹಣ ವಾಪಸ್ಸು ಪಡೆಯೋದಕ್ಕೆ ಬರುವುದಿಲ್ಲ. ಎಚ್ಚರಿಕೆ, ಕೇಸ್‌ ಯಾವುದಕ್ಕೂ ಅವರು ಬಗ್ಗುವುದಿಲ್ಲ. ಸಿನಿಮಾ ರಿಲೀಸ್‌ ಅನೌನ್ಸ್‌ ಮಾಡಿದ ಮೇಲೆ, ಡಿಸ್ಟ್ರಿಬ್ಯೂಟರ್ ಬರ್ತಾರೆ ಏನೋ ಮಾತಾಡಿ ಸಿನಿಮಾ ತಗೊಂಡು ಹೋಗ್ತಾರೆ. ಥಿಯೇಟರ್‌ನವರ ಹತ್ರ ಹತ್ತು ರೂಪಾಯಿ ಬಾಡಿಗೆ ಮಾತಾಡಿ, ನಮ್ಮ ಹತ್ರ ಇಪ್ಪತ್ತು ರೂಪಾಯಿ ಬಾಡಿಗೆ ಎಂದು ಲೆಕ್ಕ ಹೇಳುತ್ತಾರೆ. ಮಧ್ಯದಲ್ಲಿ ಅವರು ಹತ್ತು ರೂಪಾಯಿ ಹೊಡೆಯುತ್ತಾರೆ.

ಈಗ ಸಿನಿಮಾ ವ್ಯವಹಾರ ಅರ್ಥ ಆಗ್ತಿದೆ…

ಇಷ್ಟು ವರ್ಷವಾದ್ರೂ ಡಿಸ್ಟ್ರಿಬ್ಯೂಷನ್‌ ವ್ಯವಹಾರವೇ ನಮಗೆ ಅರ್ಥವಾಗಿರ ಲಿಲ್ಲ. ಆದ್ರೆ ಈಗ ಎಲ್ಲ ಒಂದೊಂದಾಗಿ ಅರ್ಥವಾಗ್ತಿದೆ. ಅದರಲ್ಲೂ “ಯಜಮಾನ’, “ಒಡೆಯ’ ಇನ್ನೂ ಕೆಲವು ಸಿನಿಮಾಗಳಿಂದ ನಾನು ಡಿಸ್ಟ್ರಿಬ್ಯೂಷನ್‌ ಬ್ಯುಸಿನೆಸ್‌ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಎಷ್ಟೋ ಸಿನಿಮಾಗಳಲ್ಲಿ ಲೈಟ್‌ ಬಾಯ್ಸಗೆ 500 ರೂಪಾಯಿ ಕೊಡೋದಕ್ಕೂ ಒದ್ದಾಡುತ್ತಿರುತ್ತೇವೆ. ಆದ್ರೆ ಎಲ್ಲೋ ಎ.ಸಿ ರೂಮ್‌ನಲ್ಲಿ ಕೂತು ಏನೂ ರಿಸ್ಕ್ ಇಲ್ಲದೆ, ಬಂಡವಾಳ ಹಾಕದೆ ಡಿಸ್ಟ್ರಿಬ್ಯೂಟರ್‌ಗಳು ಕೋಟಿ-ಕೋಟಿ ಲಾಭ ಮಾಡಿಕೊಳ್ತಾರೆ.

ಕಂಟೆಂಟ್‌ ಇಲ್ಲದಿದ್ರೆ ಫ್ರೀ ಕೊಟ್ರೂ ನೋಡಲ್ಲ…

“ರಾಬರ್ಟ್‌’ ಪೈರಸಿ ಆಗಿದೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಅದು ನಿಜ ಕೂಡ. ಈ ಹಿಂದೆ ನನ್ನದೇ ಸಿನಿಮಾ “ಕುರುಕ್ಷೇತ್ರ’ ಕೂಡ ಪೈರಸಿ ಆಗಿತ್ತು. “ಯಜಮಾನ’ ಸಿನಿಮಾ ಕೂಡ ಫ‌ಸ್ಟ್‌ ಡೇನೆ ಪೈರಸಿ ಆಗಿತ್ತು. ಆವತ್ತು ಯಾರೂ ಏನು ಮಾತನಾಡಿರಲಿಲ್ಲ. ಆದರೂ “ಯಜಮಾನ’ ಸಿನಿಮಾ 140 ದಿನ ಓಡ್ತು. ಸಿನಿಮಾ ಚೆನ್ನಾಗಿದ್ರೆ, ಜನ ಏನೇ ಪೈರಸಿ ಆಗಿದ್ರೂ ಬಂದು ನೋಡ್ತಾರೆ. ಇಲ್ಲಂದ್ರೆ, ನಾವೇ ಫ್ರೀ ಆಗಿ ಕೊಟ್ರಾ ನೋಡಲ್ಲ. ಸಿನಿಮಾದಲ್ಲಿ ಧಮ್‌ ಇದ್ರೆ ಓಡುತ್ತೆ. ಅದನ್ನ ನಿಲ್ಲಿಸಕ್ಕೆ ಆಗಲ್ಲ. “ರಾಬರ್ಟ್‌’ ಸಿನಿಮಾದಲ್ಲಿ ಸುಮಾರು ಒಂದೂವರೆ ಸಾವಿರದಷ್ಟು ಪೈರಸಿ ಲಿಂಕ್‌ ತೆಗೆಸಿದ್ದೀವಿ. ಇಷ್ಟೆಲ್ಲ ಆದ್ರೂ ಜನ ನೋಡುತ್ತಿದ್ದಾರೆ. ನಮಗೆ ಈಗ ಪೈರಸಿ ಮಾಡಿದವರು ತುಂಬಾ ಜನ ಸಿಕ್ಕಿಬಿದ್ದಿದ್ದಾರೆ. ಒಬ್ಬ ಲಿಂಕ್‌ ಅನ್ನು ಶೇರ್‌ ಮಾಡಿದ್ದ. ಆತನನ್ನು ಕರೆದು ಬುದ್ದಿ ಹೇಳಿ, ಬೇಲ್‌ ಕೊಟ್ಟು ಕಳುಹಿಸಿದ್ವಿ. ಆದರೆ ಇದೇ ನಮ್ಮ ಹುಡುಗ ಮಾಡಿದ್ದಕ್ಕೆ ಆತನನ್ನು ಕರೆದುಕೊಂಡು ಹೋಗಿ ಸ್ಟೇಷನ್‌ನಲ್ಲಿ ಕೂರಿಸಿದ್ರು. ಇದನ್ನು ಯಾರ್‌ ಹತ್ರ ಹೇಳಲಿ.

Advertisement

Udayavani is now on Telegram. Click here to join our channel and stay updated with the latest news.

Next