“ದರ್ಶನ್ ಹತ್ತು ವರ್ಷ ಬಿಟ್ಟಾದರೂ ರಾಜಕೀಯಕ್ಕೆ ಬರಬೇಕೆಂಬ ಆಸೆ ನನಗಿದೆ. ಆ ಮೂಲಕ ಆತ ಜನ ಸೇವೆ ಮಾಡಬೇಕು …’ ಇದು ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರ ಮಾತು. ದರ್ಶನ್ ರಾಜಕೀಯಕ್ಕೆ ಬರುತ್ತಾರೆ, ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿಯ ಕುರಿತು ಪತ್ರಕರ್ತರು “ಲೈಫ್ ಜೊತೆ ಒಂದು ಸೆಲ್ಫಿ’ ಸಿನಿಮಾದ ಮುಹೂರ್ತಕ್ಕೆ ಆಗಮಿಸಿದ್ದ ಮೀನಾ ತೂಗುದೀಪ ಅವರನ್ನು ಕೇಳಿದಾಗ, “ರಾಜಕೀಯಕ್ಕೆ ಬರೋದು ಬಿಡೋದು ಅವರವರ ವೈಯಕ್ತಿಕ ವಿಚಾರ. ಆದರೆ, ಮುಂದೊಂದು ದಿನ ಆತ ಬರಬೇಕೆಂಬ ಆಸೆ ನನಗಿದೆ. ಅದು ಹತ್ತು ವರ್ಷ ಬಿಟ್ಟಾದರೂ …’ ಎಂದರು.
“ಸದ್ಯ ದರ್ಶನ್ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಲು ಸಾಕಷ್ಟು ಸಮಯಬೇಕಾಗಿದೆ. ಹಾಗಾಗಿ, ಆತ ರಾಜಕೀಯಕ್ಕೆ ಬರುವ ಬಗ್ಗೆ ನನಗೆ ಯಾವುದೇ ವಿಚಾರ ಗೊತ್ತಿಲ್ಲ. ಮಕ್ಕಳು ಬೆಳೆದಿದ್ದಾರೆ. ಯಾವುದನ್ನೂ ಆಯ್ಕೆ ಮಾಡಿಕೊಳ್ಳಬೇಕು, ಏನು ಮಾಡಬೇಕು ಎಂಬುದು ಅವರಿಗೆ ತಿಳಿದಿದೆ. ಹಾಗಾಗಿ, ಅವರವರ ವೈಯಕ್ತಿಕ ವಿಚಾರದ ಬಗ್ಗೆ ನಾನೇನು ಮಾತನಾಡುವುದಿಲ್ಲ’ ಎನ್ನುವುದು ಅವರ ಮಾತು.
ಕಾಂಗ್ರೆಸ್ ಜೊತೆಗೆ ಬೇರೆ ಬೇರೆ ಪಕ್ಷದಲ್ಲೂ ದರ್ಶನ್ ಹೆಸರು ಕೇಳಿಬರುತ್ತಿರುವ ಬಗ್ಗೆ ಮಾತನಾಡುವ ಅವರು, “ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಅದು ಅವರ ಪರ್ಸನಲ್. ನಾನಂತೂ ಕಾಂಗ್ರೆಸ್. ಕೊನೆವರೆಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಹುದ್ದೆಯ ಆಸೆಗಲ್ಲ. ಹಿಂದಿನಿಂದಲೂ ಕಾಂಗ್ರೆಸ್‌ನಲ್ಲೇ ಇದ್ದೆ. ಮುಂದೆಯೂ ಇರುತ್ತೇನೆ. ನನ್ನ ಒಂದು ವೋಟ್ ಅಂತೂ ಕಾಂಗ್ರೆಸ್‌ಗೆ ಯಾವತ್ತೂ ಇರುತ್ತದೆ’ ಎನ್ನುತ್ತಾರೆ. ದರ್ಶನ್ ಸಿನಿಮಾಕ್ಕೆ ಬರಬೇಕು, ಕಲಾವಿದನಾಗಿ ಬೆಳೆಯಬೇಕೆಂಬ ಆಸೆ ಮೀನಾ ತೂಗುದೀಪ ಅವರಿಗೆ ಇತ್ತು.
ಸಿನಿಮಾ ರಂಗಕ್ಕೆ ಬರಲು ಅವರು ದರ್ಶನ್‌ಗೆ ಸಾಥ್ ನೀಡಿದ್ದರು. ಈಗ ಮೀನಾ ತೂಗುದೀಪ ಅವರು ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ದರ್ಶನ್ ಅವರನ್ನು ರಾಜಕೀಯಕ್ಕೆ ಕರೆತರುವ ಆಸಕ್ತಿ ನಿಮಗಿಲ್ಲವೇ ಎಂದರೆ, “ನಾವು ಚಿತ್ರರಂಗದ ಅನ್ನ ತಿಂದಿದ್ದೇವೆ, ತಿನ್ನುತ್ತಿದ್ದೇವೆ. ಹಾಗಾಗಿ, ಮಗ ಸಿನಿಮಾಕ್ಕೆ ಬರಬೇಕು, ಇಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸೆ ಇತ್ತು. ಆದರೆ, ರಾಜಕೀಯ ಅವರ ವೈಯಕ್ತಿಕ. ಆ ಬಗ್ಗೆ ನಾನೇನು ಮಾತನಾಡಿಲ್ಲ. ಆತನ ಕೂಡಾ ನನ್ನಲ್ಲಿ ಆ ಬಗ್ಗೆ ಏನೂ ಮಾತನಾಡಿಲ್ಲ’ ಎನ್ನುತ್ತಾರೆ ಮೀನಾ ತೂಗುದೀಪ.