ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್, ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದರು.
ನಗರದ ಹೆಬ್ಟಾಳು ರಿಂಗ್ ರಸ್ತೆಯಲ್ಲಿ ಸೆ.23ರಂದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಅವರ ಬಲಗೈ ಮೂಳೆ ಮುರಿದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು, ಕಳೆದ ನಾಲ್ಕೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದರು. ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸಾcರ್ಜ್ ಮಾಡಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, “ಅಂದು ನನ್ನ ಸ್ನೇಹಿತನ ಹುಟ್ಟುಹಬ್ಬದ ಸಮಾರಂಭದಲ್ಲಿ ಊಟ ಮಾಡಿಕೊಂಡು ತೆರಳುತ್ತಿದ್ದ ವೇಳೆ ರಿಂಗ್ ರಸ್ತೆಯಲ್ಲಿ ಅಪಘಾತವಾಯಿತು. ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿತು. ಆ ಸ್ಥಳ ನೋಡಿದರೆ ನಿಮಗೇ ತಿಳಿಯಲಿದೆ. ನನ್ನ ಕಾರು ಡಿಕ್ಕಿಯಿಂದ ವಿದ್ಯುತ್ ಕಂಬ ಬಿದ್ದಿಲ್ಲ. ಅಪಘಾತಕ್ಕೂ ಮೊದಲೇ ಕಂಬ ಬಿದ್ದಿತ್ತು. ಸಾಮಾನ್ಯವಾಗಿ ಲಕ್ಷ್ಮಣ್ ಡ್ರೈವ್ ಮಾಡುತ್ತಿದ್ದರು. ಆದರೆ, ಅಪಘಾತ ಸಂಭವಿಸಿದ ದಿನ ರಾಯ್ ಕಾರು ಓಡಿಸುತ್ತಿದ್ದರು. ಇದರಲ್ಲಿ ಅವರ ತಪ್ಪೇನೂ ಇಲ್ಲ. ನನ್ನ ಕಾರಿನಲ್ಲಿ ಕೇವಲ ಐವರು ಮಾತ್ರ ಕೂರಲು ಸಾಧ್ಯ. ಹಾಗಾಗಿ, ಕಾರಿನಲ್ಲಿ ಐವರು ಮಾತ್ರ ಇದ್ದೆವು. ನಮ್ಮೊಂದಿಗೆ ಯಾವುದೇ ಮಹಿಳೆ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದರು.
ಅಪಘಾತದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬಂದಿದ್ದು, ಎಲ್ಲವೂ ಶುದ್ಧ ಸುಳ್ಳು. ಮಾಧ್ಯಮಗಳು ಸ್ವಲ್ಪ ಆತುರವಾಗಿ ವರ್ತಿಸಿದವು. ಈಗ ನಾನು ಆರಾಮವಾಗಿದ್ದೇನೆ. ಸಣ್ಣ ಪುಟ್ಟ ವೈದ್ಯಕೀಯ ಪರೀಕ್ಷೆ ಇರುವ ಕಾರಣ ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ. ಒಂದು ತಿಂಗಳು ವಿಶ್ರಾಂತಿ ತೆಗೆದುಕೊಂಡರೆ ಸಾಕು, ಒಂದು ವರ್ಷ ಬೇಕಿಲ್ಲ ಎಂದರು.
ತಮ್ಮ ನೆಚ್ಚಿನ ನಟ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ವಿಷಯ ತಿಳಿದ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಸ್ಪತ್ರೆ ಎದುರು ಜಮಾಯಿಸಿದ್ದರು. ಅಭಿಮಾನಿಗಳತ್ತ ಕೈ ಬೀಸಿದ ದರ್ಶನ್, ಬಳಿಕ ಕಾರಿನಲ್ಲಿ ಮನೆಗೆ ತೆರಳಿದರು. ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ದರ್ಶನ್ ಅವರ ಕುಟುಂಬಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.