ಸಾಮಾನ್ಯವಾಗಿ ಸ್ಟಾರ್‌ಗಳ ಸಿನಿಮಾ ಅಂದ್ರೆ ದೊಡ್ಡ ಶೆಡ್ನೂಲ್. ಹೀರೋ ಡೇಟ್ಸ್ ನೂರು ದಿನ ಬೇಕು. ಉದ್ದಕ್ಕೆ ಚಿತ್ರೀಕರಣ ಮಾಡುತ್ತಲೇ ಇರಬೇಕೆಂಬ ಮೈಂಡ್‌ಸೆಟ್‌ನಿಂದಲೇ ಬರುವ ನಿರ್ಮಾಪಕ, ನಿರ್ದೇಶಕರಿದ್ದಾರೆ. ನಿರ್ಮಾಪಕ, ನಿರ್ದೇಶಕರ ಒತ್ತಾಯಕ್ಕೆ ಮಣಿದು ಸ್ಟಾರ್‌ಗಳು ಕೂಡಾ ನೂರು ದಿನ ಚಿತ್ರೀಕರಣ ಮಾಡಿದ ಉದಾಹರಣೆಗಳು ಸಾಕಷ್ಟಿವೆ.
ಒಂದು ವೇಳೆ ಸಿನಿಮಾ ಚೆನ್ನಾಗಿ ಓಡಿಲ್ಲದಿದ್ದರೆ ನೆಗೆಟಿವ್ ಅಂಶಗಳನ್ನೆಲ್ಲಾ ಹೀರೋ ಮೇಲೆ ಹಾಕುವ ಮೂಲಕ ಜವಾಬ್ದಾರಿಯಿಂದ ಜಾರಿ ಕೊಳ್ಳುವ ನಿರ್ಮಾಪಕ, ನಿರ್ದೇಶಕರನ್ನು ಗಾಂಧಿನಗರದಲ್ಲಿ ಸಿಗುತ್ತಾರೆ. ಈಗ ದರ್ಶನ್ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಏನದು ಪ್ಲಾನ್ ಎಂಬ ಕುತೂಹಲವಿದ್ದರೆ ಇಲ್ಲಿ ಕೇಳಿ. ಅದು ಯಾವುದೇ ಸಿನಿಮಾಕ್ಕಾದರೂ 65 ದಿನಕ್ಕಿಂತ ಹೆಚ್ಚು ಡೇಟ್ಸ್ ಕೊಡಲ್ಲ ಎಂದು. ಒಂದು ವೇಳೆ ಏನೋ ಹೆಚ್ಚು ಕಮ್ಮಿಯಾದರೆ 5 ದಿನ ಎಕ್ಸಟ್ರಾ. ಅಲ್ಲಿಗೆ 70 ದಿನ.
70 ದಿನದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಬೇಕು. ಆ ನಂತರವೂ ಡೇಟ್ಸ್ ಬೇಕು ಎಂದು ಕೇಳಿದರೆ ಅದನ್ನು ಯಾವ ತರಹ ಸಂಭಾಳಿಸಬೇಕೆಂಬ ಐಡಿಯಾವೂ ದರ್ಶನ್ ಅವರಲ್ಲಿದೆ. ದರ್ಶನ್ ಅವರ ಈ ಡೇಟ್ಸ್ ಪ್ಲ್ರಾನ್ “ತಾರಕ್’ ಮೂಲಕವೇ ಜಾರಿಯಾಗಿದೆ.ದರ್ಶನ್ ಕೊಟ್ಟ ಡೇಟ್ಸ್ ಅನ್ನು ನಿರ್ದೇಶಕ ಪ್ರಕಾಶ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ, “ತಾರಕ್’ ಕೇವಲ 64 ದಿನದಲ್ಲಿ ಶೂಟಿಂಗ್ ಮುಗಿಸಿದೆ. ಇದು ದರ್ಶನ್‌ಗೂ ಖುಷಿ ಕೊಟ್ಟಿದೆ.
“ನಿರ್ದೇಶಕ ಪ್ರಕಾಶ್ ಅವರು ಮಾಡಿಕೊಂಡ ಸಿದ್ಧತೆಯನ್ನು ಮೆಚ್ಚಲೇಬೇಕು. ಪಕ್ಕಾ ಪೂರ್ವತಯಾರಿಯೊಂದಿಗೆ ಅಂದುಕೊಂಡಂತೆ ಚಿತ್ರೀಕರಣ ಮಾಡಿದ್ದಾರೆ. 23 ದಿನ ಯುರೋಪ್‌ನಲ್ಲಿ ಶೂಟಿಂಗ್ ಮಾಡಿದೆವು. ಮೂರೂವರೆ ಸಾವಿರ ಕಿಲೋಮೀಟರ್‌ನ ಸುತ್ತಾಡಿ, ಹಾಡು, ಫೈಟು ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿಕೊಂಡೆವು. ಪ್ರಕಾಶ್ ಅಷ್ಟೊಂದು ಸಿದ್ಧತೆ ಮಾಡಿಕೊಂಡಿದ್ದರು’ ಎನ್ನುವ ಮೂಲಕ ಪ್ರಕಾಶ್ ಮಾಡಿಕೊಂಡಿರುವ ತಯಾರಿ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ ದರ್ಶನ್.
ಅಂದಹಾಗೆ, “ತಾರಕ್’ ತಾತ ಹಾಗೂ ಮೊಮ್ಮಗನ ನಡುವಿನ ಬಾಂಧವ್ಯದ ಒಂದು ಕಥೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ.”ಪ್ರಕಾಶ್ ಸಿನಿಮಾ ಮಾಡುತ್ತೇನೆ ಎಂದು ನನ್ನ ಬಳಿಗೆ ಬಂದಾಗ, ನಿಮ್ಮ ಶೈಲಿ ಏನಿದೆ ಅದಕ್ಕೆ ತಕ್ಕಂತೆ ನೀವು ಸಿನಿಮಾ ಮಾಡಿ. ನಾನು ಅದರಲ್ಲಿ ನಟಿಸುತ್ತೇನೆ. ನನ್ನ ಶೈಲಿಗೆ, ನನ್ನನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಬೇಡಿ. ಈ ಬಾರಿ ನಿಮ್ಮ ಕೋರ್ಟ್‌ಗೆ ನಾನು ಬರುತ್ತೇನೆ. ನನಗಾಗಿ ಯಾವ ಅಂಶವನ್ನು ಸೇರಿಸಬೇಡಿ ಅಂದೆ.
ಅದರಂತೆ ಸಿನಿಮಾ ಮಾಡಿದ್ದಾರೆ. ಇಲ್ಲಿ ನೀವು ತಾತ ಹಾಗೂ ಮೊಮ್ಮಗನ ನಡುವಿನ ಪ್ರೀತಿ, ತಮಾಷೆ ಎಲ್ಲವನ್ನು ನೋಡಬಹುದು. ಸಿನಿಮಾ ನೋಡಿದವರಿಗೆ ನಮಗೆ ಈ ತರಹದ ತಾತ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸೆಯಾಗುತ್ತದೆ. ಆ ತರಹದ ಒಂದು ಪಾತ್ರವನ್ನು ದೇವರಾಜ್ ಅವರು ಮಾಡಿದ್ದಾರೆ. ಸಿನಿಮಾದ ನಿಜವಾದ ಹೀರೋ ಎಂದರೆ ನಿರ್ದೇಶಕ ಪ್ರಕಾಶ್ ಹಾಗೂ ದೇವರಾಜ್. ನಾನು ಇಡೀ ಸಿನಿಮಾದಲ್ಲಿ ಅಲ್ಲಲ್ಲಿ ಬಂದು ಹೋಗುತ್ತೇನೆ’ ಎನ್ನುವ ಮೂಲಕ ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎನ್ನುತ್ತಾರೆ ದರ್ಶನ್.