ಇತ್ತೀಚೆಗೆ ದರ್ಶನ್ ಲಂಡನ್‌ಗೆ ತೆರಳಿ ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ “ಗ್ಲೋಬಲ್ ಇಂಟಿರ್ಗಿಟಿ’ ಪ್ರಶಸ್ತಿ ಸ್ವೀಕರಿಸಿ ಬಂದಿರೋದು ನಿಮಗೆ ಗೊತ್ತೇ ಇದೆ. ದರ್ಶನ್‌ಗೆ ಪ್ರಶಸ್ತಿ ಬಂದಿದ್ದರಿಂದ ಖುಷಿಯಾದ ಅಭಿಮಾನಿಗಳು, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ನಂತರ ಬ್ರಿಟಿಷ್ ಪಾರ್ಲಿಮೆಂಟ್ ದರ್ಶನ್‌ಗೆ ಪ್ರಶಸ್ತಿ ಕೊಡುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಳ್ಳುತ್ತಿದ್ದರು. ಇದರ ಜೊತೆಗೆ ಈ ಪ್ರಶಸ್ತಿ ಬಗ್ಗೆ ಸಾಕಷ್ಟು ಗೊಂದಲಗಳು ಕೂಡಾ ಹುಟ್ಟಿಕೊಂಡವು.
ದರ್ಶನ್‌ಗೆ ಕೊಟ್ಟಿರುವ ಪ್ರಶಸ್ತಿಗೂ ಅಮಿತಾಬ್, ಸಲ್ಮಾನ್‌ಗೆ ಕೊಟ್ಟಿರುವ ಪ್ರಶಸ್ತಿಗೂ ಸಂಬಂಧವಿಲ್ಲ, ಜೊತೆಗೆ ಇದು ಬ್ರಿಟಿಷ್ ಪಾರ್ಲಿಮೆಂಟ್ ಕೊಡುವ ಪ್ರಶಸ್ತಿಯೂ ಅಲ್ಲ ಎಂಬ ಮಾತುಗಳು ಜೋರಾಗಿ ಕೇಳಿಬಂದವು. ಸೋಶಿಯಲ್ ಮೀಡಿಯಾಗಳಲ್ಲಂತೂ ಈ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಈಗ ಅದಕ್ಕೆ ಲಂಡನ್‌ನ ಯುಕೆ ಕರ್ನಾಟಕ ಬಿಝಿನೆಸ್ ಚೇಂಬರ್‌ನ ಚೇರ್‌ಮ್ಯಾನ್ ಮಂಜುನಾಥ್ ವಿಶ್ವಕರ್ಮ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ದರ್ಶನ್‌ಗೆ ಕೊಟ್ಟಿರೋದು ಗ್ಲೋಬಲ್ ಇಂಟಿರ್ಗಿಟಿ ಪ್ರಶಸ್ತಿಯೇ ಹೊರತು ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಯಲ್ಲ. ಜೊತೆಗೆ ಇದು ಬ್ರಿಟಿಷ್ ಪಾರ್ಲಿಮೆಂಟ್ ಕೊಡುವ ಪ್ರಶಸ್ತಿಯೂ ಅಲ್ಲ, ಬದಲಿಗೆ ಯುಕೆ ಕರ್ನಾಟಕ ಬಿಝಿನೆಸ್ ಚೇಂಬರ್ ಕೊಡುವ ಪ್ರಶಸ್ತಿ ಎಂದು ಮಂಜುನಾಥ್ ವಿಶ್ವಕರ್ಮ ಸ್ಪಷ್ಟಪಡಿಸಿದ್ದಾರೆ. “ದರ್ಶನ್‌ಗೆ ಕೊಟ್ಟಿರೋದು ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಅಲ್ಲ, ಅದು ಗ್ಲೋಬಲ್ ಇಂಟಿರ್ಗಿಟಿ ಪ್ರಶಸ್ತಿ.
ಜೊತೆಗೆ ನಾವು ಎಲ್ಲೂ ಇದು ಬ್ರಿಟಿಷ್ ಪಾರ್ಲಿಮೆಂಟ್ ಕೊಡುವ ಪ್ರಶಸ್ತಿ ಎಂದು ಹೇಳಿಲ್ಲ. ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಕೊಡಲಾಗುತ್ತದೆ ಎಂದಷ್ಟೇ ಹೇಳಿದ್ದೆವು. ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಯನ್ನು ಕೀಟ್ ವಾಗ್ ಎಂಬ ಎಂಪಿ ಕೊಡುತ್ತಾ ಬಂದಿದ್ದಾರೆ. ಅವರು ಈಗಾಗಲೇ ಆ ಪ್ರಶಸ್ತಿಯಲ್ಲಿ ಅನೇಕರನ್ನು ಸನ್ಮಾನಿಸಿದ್ದಾರೆ. ಆದರೆ, ಗ್ಲೋಬಲ್ ಇಂಟಿರ್ಗಿಟಿ ಪ್ರಶಸ್ತಿಯನ್ನು ವೀರೇಂದ್ರ ಶರ್ಮಾ ಎಂಬ ಮತ್ತೂಬ್ಬ ಎಂಪಿ ಕೊಡುತ್ತಿರೋದು.
ಪಾರ್ಲಿಮೆಂಟ್‌ನಲ್ಲಿ ಜಾಗ ತಗೊಂಡು ಕೊಡುತ್ತಿದ್ದಾರೆ. ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ’ ಎಂದು ಮಂಜುನಾಥ್ ಹೇಳಿದರು. ಯುಕೆ ಕರ್ನಾಟಕ ಬಿಝಿನೆಸ್ ಚೇಂಬರ್ ಬಗ್ಗೆ ಮಾತನಾಡುವ ಅವರು, ಇಲ್ಲಿನ ಸಂಸ್ಕೃತಿಯನ್ನು ಅಲ್ಲಿ ಬಿಂಬಿಸುವ ಸಲುವಾಗಿ ಹಾಗೂ ಅಲ್ಲಿನ ಬಿಝಿನೆಸ್ ಅನ್ನು ಇಲ್ಲಿ ಪ್ರಮೋಟ್ ಮಾಡುವ ಸಲುವಾಗಿ ಈ ಸಂಸ್ಥೆ ಹುಟ್ಟಿಕೊಂಡಿದೆ.
ವೀರೇಂದ್ರ ಶರ್ಮಾ ಅವರು ಕೂಡಾ ಈ ಸಂಸ್ಥೆಯ ಮಾರ್ಗದರ್ಶಕರು. ಸಂಸ್ಥೆಯನ್ನು ಜನಪ್ರಿಯ ಮಾಡುವ ಜೊತೆಗೆ ಸಾಧನೆ ಮಾಡಿದ ಕನ್ನಡಿಗನಿಗೆ ಪ್ರಶಸ್ತಿ ಕೊಡುವುದನ್ನು ರೂಢಿಸುತ್ತಾ ಬಂದೆವು. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಸನ್ಮಾನಿಸಲಾಗಿದೆ. ಅದರಂತೆ ದರ್ಶನ್ ಅವರ ಸಾಧನೆಯನ್ನು ಪರಿಗಣಿಸಿ ಈ ಬಾರಿ ಅವರನ್ನು ಸನ್ಮಾನಿಸಿದ್ದೇವೆ ಎಂದರು.
ದರ್ಶನ್ ಜೊತೆ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಲಂಡನ್‌ಗೆ ತೆರಳಿದ್ದ ದರ್ಶನ್ ಆಪ್ತ ಮಲ್ಲಿಕಾರ್ಜುನ್ ಮಾತನಾಡಿ, ಪ್ರಶಸ್ತಿ ಸ್ವೀಕರಿಸಿ ಬರುವವರೆಗೂ ಇದನ್ನು ಸುದ್ದಿ ಮಾಡಬಾರದೆಂದ್ದೆವು. ಆದರೆ, ಆಗಲೇ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ನಾವು ಪ್ರಶಸ್ತಿ ವಿಚಾರದಲ್ಲಿ ದಾರಿ ತಪ್ಪಿಸಿಲ್ಲ, ಸುಳ್ಳು ಹೇಳಿಲ್ಲ. ಇದು ಗ್ಲೋಬಲ್ ಇಂಟಿರ್ಗಿಟಿ ಅವಾರ್ಡ್. ಪ್ರಶಸ್ತಿ ಯಾವುದೇ ಆದರೂ ಕನ್ನಡಿಗನಿಗೆ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿಪಡಬೇಕು ಎಂದರು.