ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ಸಬ್ಬಕೆರೆ ಗ್ರಾಮದ ಪಟ್ಟಲದಮ್ಮ -ಹುಚ್ಚಮ್ಮ ದೇವಾಲಯದಲ್ಲಿ ಪೂಜಾ ಸಮಯದಲ್ಲಿ ಘಟ ಸರ್ಪವೊಂದು ಕಾಣಿಸಿಕೊಂಡಿದ್ದು, ದೇವಾಲಯದ ಅರ್ಚಕರು ಅದನ್ನು ಶುಭ ಸೂಚಕ ಎಂದಿದ್ದಾರೆ.
ಪಟ್ಟಲದಮ್ಮ-ಹುಚ್ಚಮ್ಮ ಎಂಬ ದೇವಾಲಯ ನೂರಾರು ವರ್ಷಗಳ ಹಿಂದೆ ಕಲ್ಲಿನ ಮಂಟಪದಲ್ಲಿ ಸ್ಥಾಪಿಸಲಾಗಿದೆ. ಪಟ್ಟಲದಮ್ಮ ಮತ್ತು ಹುಚ್ಚಮ್ಮ ಎರಡು ದೇವರುಗಳನ್ನು ಪೂಜಿಸಿಕೊಂಡು ಬರಲಾಗುತ್ತಿದೆ.
ಪ್ರತೀ ಭಾನುವಾರ, ಮಂಗಳವಾರ, ಶುಕ್ರವಾರಗಳಂದು ಕಲ್ಲಿನ ಮಂಟಪದ ಒಳಗಿರುವ ಹುತ್ತಕ್ಕೆ ಶ್ರದ್ಧಾ ಭಕ್ತಿಯಿಂದ ಪೂಜೆ ನಡೆಸಲಾಗುತ್ತಿದೆ. ಆದರೆ, ಯಾವದಿನವೂ ಸರ್ಪ ಕಾಣಿಸಿಕೊಂಡಿರಲಿಲ್ಲ. ದೇವಾಲಯ ಶಿಥಿಲವಾಗುತ್ತಿರುವ ಕಾರಣ ಗ್ರಾಮಸ್ಥರು ಹಳೇ ದೇವಾಲಯವನ್ನು ಕೆಡವಿ ನೂತನ ದೇವಾಲಯ ಕಟ್ಟಲು ನಿರ್ಧರಿಸಿ ಕಳೆದ ಭಾನುವಾರ ಹೋಮ, ಹವನ ನಡೆಸುತ್ತಿದ್ದ ವೇಳೆ ಘಟ ಸರ್ಪ ಹೆಡೆ ಎತ್ತಿ ಕಾಣಿಸಿಕೊಂಡಿದೆ. ಗಲಿಬಿಲಿಯಾದ ಗ್ರಾಮಸ್ಥರು ದೂರ ಸರಿದರು. ನಂತರ ಸರ್ಪ ಹುತ್ತದ ಮೇಲೆ ಬಂದಿದೆ. ಗ್ರಾಮಸ್ಥರು ಗಲಿಬಿಲಿ ನಿವಾರಿಸಿಕೊಂಡು ಕೈಮುಗಿದು ಪ್ರಾರ್ಥಿಸಿದರು.
ಸರ್ಪ ಕಾಣಿಸಿಕೊಂಡಿದ್ದು ಶುಭ ಸೂಚಕ, ದೇವಾಲಯ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲ. ಇದು ಶಕ್ತಿ ಸ್ಥಳ ಎಂದು ಅರ್ಚಕರು ದೂರದಿಂದಲೇ ಸರ್ಪಕ್ಕೆ ಆರತಿ ಬೆಳಗಿದರು. ನಂತರ ಸರ್ಪ ಹುತ್ತದೊಳಗೆ ಹೊರಟು ಹೋಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.