Advertisement

Darshan; ಅದ್ಧೂರಿ ಕಾರ್ಯಕ್ರಮದಲ್ಲಿ ದರ್ಶನ್‌ @ 25 ಮೆಲುಕು

11:46 AM Feb 19, 2024 | Team Udayavani |

ನಟ ದರ್ಶನ್‌ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶ್ರೀರಂಗ  ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಡಿ-25 ಬೆಳ್ಳಿ ಪರ್ವ ಸಂಭ್ರಮದಲ್ಲಿ ಕಲಾವಿದರು, ವಿವಿಧ ಗಣ್ಯರು ಭಾಗಿಯಾಗಿದ್ದರು. ನಟ ದರ್ಶನ್‌ ಅವರ ಸಾಧನೆ, ವ್ಯಕ್ತಿತ್ವದ ಬಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕನ್ನಡ ಚಿತ್ರರಂಗದ ಕಲಾವಿದರು, ಸುತ್ತೂರು ಮಠ, ಆದಿಚುಂಚನಗಿರಿ, ಗೌರಿಗದ್ದೆ ಆಶ್ರಮ ಸೇರಿದಂತೆ ವಿವಿಧ ಸ್ವಾಮೀಜಿಗಳು ದರ್ಶನ್‌ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.

Advertisement

ಆದಿಚುಂಚನಗಿರಿ ಮಠದ ಪೀಠದ ಶ್ರೀ ನಿರ್ಮಲಾನಂದನಾಥಸ್ವಾಮಿ ಮಾತನಾಡಿ, ಕಲೆಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕತೆ ಬೆರೆತರೆ ಮತ್ತಷ್ಟು ಮೆರುಗು ಬರಲಿದೆ ಎಂದು ಹೇಳಿದರು. ಬದುಕಿಗೆ ಕಲೆ ಮುಖ್ಯ. ಸಾಹಿತ್ಯ, ಸಂಗೀತ, ಕಲೆ ಮನುಷ್ಯನಿಗೆ ಅಗತ್ಯ. ಕಲೆಗೆ ತನ್ನದೇ ಆದ ಶಕ್ತಿ ಇದ್ದು, ಅದರಲ್ಲಿ ಬದುಕನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಅಂಥವರಲ್ಲಿ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌, ಶಂಕರ್‌ನಾಗ್‌ ಸೇರಿದಂತೆ ಅನೇಕ ನಟರು ಅಂತಹ ಸಾಲಿನಲ್ಲಿ ನಿಲ್ಲುತ್ತಾರೆ. ಅದರಲ್ಲಿ ತೂಗುದೀಪ ಶ್ರೀನಿವಾಸ್‌ ಒಬ್ಬರಾಗಿದ್ದಾರೆ. ಮಗ ದರ್ಶನ್‌ ತಂದೆಯನ್ನೇ ಮೀರಿಸಿದವರಾಗಿದ್ದಾರೆಂದು ಶ್ಲಾಘಿಸಿದರು.

ನಟರಾದ ಶರಣ್‌, ನೆನಪಿರಲಿ ಪ್ರೇಮ್‌, ಪ್ರಜ್ವಲ್‌ ದೇವರಾಜ್‌, ಪ್ರಣವ್‌ ದೇವರಾಜ್‌, ವಿನೋದ್‌ ಪ್ರಭಾಕರ್‌, ವಿನೋದ್‌ ರಾಜ್‌, ನೀನಾಸಂ ಸತೀಶ್‌, ಚಿಕ್ಕಣ್ಣ ಸೇರಿದಂತೆ ವಿವಿಧ ನಟರು ದರ್ಶನ್‌ ಅವರ ವ್ಯಕ್ತಿತ್ವ ಹಾಗೂ ಸ್ನೇಹದ ಬಗ್ಗೆ ಗುಣಗಾನ ಮಾಡಿದರು.

ಯಾವುದೇ ಕ್ಷೇತ್ರವಾದರೂ ಆರಂಭದಲ್ಲಿ ಅವಮಾನಗಳನ್ನು ಎದುರಿಸಲೇಬೇಕು. ಅದು ಚಿತ್ರರಂಗ, ರಾಜಕೀಯ, ಬ್ಯುಸಿನೆಸ್‌ ಯಾವುದೇ ಆಗಿರಲಿ.. ಮುಖ್ಯವಾಗಿ ನಮ್ಮ ಶ್ರಮ ಬೇಕೇ ಬೇಕು. ಆರಂಭದ ಅವಮಾನ ಮುಂದಿನ ಸನ್ಮಾನಕ್ಕೆ ದಾರಿ. ಚಪ್ಪಲಿಯಲ್ಲಿ ಹೊಡೆದರೆ ಹೊಡೀರಿ, ಹಾರ ಹಾಕಿಸಿಕೊಳ್ಳುವುದಕ್ಕೆ ಮಾತ್ರ ರೆಡಿ ಇದ್ದರೆ ಸಾಲದು, ಚಪ್ಪಲಿ ಬಿದ್ದಾಗ ಅದನ್ನೂ ಸ್ವೀಕರಿಸಬೇಕು. ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಂಡಿಲ್ಲ. ಹೌದು, ನಾನು ಬ್ಯಾಡ್‌ ಬಾಯ್. ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತದೆ ಎಂದು ದರ್ಶನ್ ಹೇಳಿದರು.

ಸಮಾರಂಭಕ್ಕೆ ಬಂದಿದ್ದ ಎಲ್ಲ ಸ್ವಾಮೀಜಿಗಳು ನಟ ದರ್ಶನ್‌ ಅವರನ್ನು ಅಭಿನಂದಿಸಿದರು. ಅದಕ್ಕೆ ಪ್ರತಿಯಾಗಿ ನಟ ದರ್ಶನ್‌ ಕೂಡ ಸ್ವಾಮೀಜಿ ಅವರನ್ನು ಅಭಿನಂದಿಸಿ ಆಶೀರ್ವಾದ ಪಡೆದರು. ನಂತರ ಚಿತ್ರರಂಗದ ವಿವಿಧ ನಟ ನಟಿಯರಿಂದ ನೃತ್ಯ ಪ್ರದರ್ಶನ ನಡೆಯಿತು. 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು, ಸಾರ್ವಜನಿಕರು ಸೇರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next