Advertisement

ಅಪ್ಪನ ಜಗತ್ತಿನಲ್ಲೀಗ ಬರೀ ಕತ್ತಲೆ…

10:03 PM Aug 20, 2019 | mahesh |

ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು. ಆ ರೈತರಿಗೆ, ಬೇರೆಯವರಿಗೆ ಕೊಟ್ಟಷ್ಟೇ ಗೊತ್ತು. ಕೈಚಾಚಿ ಬೇಡಿದವರಲ್ಲ. ಈಗ ಪರಿಹಾರ ಅಂತ ತೆಗೆದುಕೊಳ್ಳುವಾಗಿನ ಅವರ ಮನಸ್ಥಿತಿಯನ್ನ ಊಹಿಸಲೂ ಸಾಧ್ಯವಿಲ್ಲ.

Advertisement

ಮಲೆನಾಡೆಂದರೆ ಹಾಗೇ. ಮೇ ತಿಂಗಳ ಉತ್ತರಾರ್ಧದಲ್ಲಿ ಧೋ ಎಂದು ಸುರಿಯಲು ಶುರುವಾದರೆ ಅದಕ್ಕೊಂದು ಪೂರ್ಣವಿರಾಮ ಸಿಗುವುದು ಗಣೇಶ ಚೌತಿ ಮುಗಿದ ನಂತರವೇ. ಆಗ ಇದ್ದಬದ್ದ ಹಳ್ಳ, ತೋಡು, ಬಾವಿ ಉಕ್ಕಿ ಹರಿಯುವುದ ನೋಡುವುದೇ ಒಂದು ಸಂಭ್ರಮ. ನೀರಾಟ, ಕೆಸರಾಟ ಆಡಿಕೊಂಡು, ಛತ್ರಿ ಇದ್ದರೂ ಮೈ ಕೈ ತೋಯಿಸಿಕೊಂಡು, ಒಬ್ಬರಿಗೊಬ್ಬರಿಗೆ ನೀರೆರಚಿಕೊಂಡು ಶಾಲೆಯಿಂದ ಮನೆಗೆ ಹೋಗುವುದೇ ಮಳೆಗಾಲದಲ್ಲಿ ನಮಗೊಂದು ಹಬ್ಬ. ಆ ಬಾಲ್ಯದ ಬಗ್ಗೆ ಬರೆದಷ್ಟೂ ಮುಗಿಯದ ಸೊಬಗಿದೆ.

ಆದರೆ, ಈಗೀಗ ಜೋರು ಮಳೆ ಗುಡುಗು ಬಂದರೆ ಸಾಕು, ಬೆಚ್ಚಿ ಬೀಳುತ್ತೇನೆ. ಅದರ ಸದ್ದು ಎದೆಯ ದಂಡೆಗೆ ಅಪ್ಪಳಿಸುವ ವೇಗಕ್ಕೆ ಊರಿನ ನೆನಪುಗಳು ತೇಲಿ ಬರುತ್ತವೆ. ಚಿಕ್ಕಂದಿನಲ್ಲಿ ಗುಡುಗು ಬಂದರೆ ಸಾಕು, ಅಮ್ಮನ ಸೆರಗೊಳಗೆ ಅಡಗಿಕೊಳ್ಳೋ ಗುಮ್ಮನಾಗಿದ್ದೆ. ಅಲ್ಲಿಗೆ ಗುಡುಗುಮ್ಮ ಬರುವುದಿಲ್ಲ ಎಂಬುದು ನಂಬಿಕೆ.ಅಜ್ಜಿ ಆಗಾಗ, ಗುಡುಗುಮ್ಮ ಬಂದ, ಹೆಡಿಗೆ ತಂದ, ಬತ್ತ ಬ್ಯಾಡ ಅಂದ, ಅಕ್ಕಿ ಬ್ಯಾಡ ಅಂದ, ನಮ್ಮನೆ ಪುಟ್ಟಿನೇ ಬೇಕೆಂದ’ ಅಂತ ಹೇಳಿದಾಗಲಂತೂ ಆ ಅಳು ತಾರಕಕ್ಕೆ ಏರುತ್ತಿತ್ತು.

ಬಾಲ್ಯದಲ್ಲಿ ಜೋರು ಮಳೆ ಬಂದಾಗೆಲ್ಲ, ಮನೆಯಲ್ಲಿ ಕೂತು, “ಈ ವರ್ಷ ಪ್ರಳಯ ಆಗ್ತೀನ, ಹೋತು ಬಿಡು ತ್ವಾಟ ಮನೆ ಎಲ್ಲ ಮುಳುಗಿ ಹೋಗು¤’ ಅನ್ನುತ್ತಿದ್ದ ಅಪ್ಪನ ಮಾತು ಕಿವಿಯಲ್ಲಿ ರಿಂಗಣಿಸುತ್ತದೆ.ಅದು ಈಗ ಅಕ್ಷರಶಃ ನಿಜ ಆಗುತ್ತಿದೆಯೇ ಎಂಬ ಭೀತಿ ಕಾಡುತ್ತಿದೆ. ಬೆವರು ಹರಿಸಿ ಬದುಕು ಸವೆಸಿದ್ದು ಅದೇ ಮಣ್ಣಲ್ಲಲ್ಲವೇ.ಅದೇ ಅವನ ಬದುಕು. ಅದೇ ಅವನ ಉಸಿರು.ಉಸಿರು ನೀಡಿದ ಹಸಿರನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುವ ಅಪ್ಪನಿಗೆ ತೋಟದಲ್ಲಿ ಒಂದು ಎಲೆ ಉದುರಿದರೂ ಎದೆಯಲ್ಲಿ ನಡುಕ.ಅಮ್ಮನ ಮುಖದ್ಲಲೂ ಗಾಬರಿ.

ಚಿಕ್ಕಂದಿನಲ್ಲಿ ಅತ್ತು ಹಠ ಮಾಡಿದಾಗ, ಬಿದ್ದಾಗ, ಸೋತಾಗ, ಸಪ್ಪೆ ಮೋರೆ ಮಾಡಿಕೊಂಡಾಗ, ಯಾವುದೋ ಪೆಪ್ಪರ್‌ವೆುಂಟ್‌ ಆಗಲಿ, ಇನ್ನೇನೋ ಆಟದ ಸಾಮಾನಾಗಲಿ ಕೊಟ್ಟು ನನ್ನ ಸಮಾಧಾನ ಪಡಿಸಿದ ನೆನಪಿಲ್ಲ. ಬದಲಿಗೆ ತೋಟಕ್ಕೆ ಹೊತ್ಕೊಂಡು ಹೋಗಿ, “ಆ ಮರ ನೋಡು ಪುಟ್ಟಿ,ತೆಂಗಿನ ಮರ ನೋಡು, ಅಡಿಕೆ ಮರ ನೋಡು, ಲಿಂಬೆ ಹಣ್ಣು ಎಷ್ಟು ಬಿಟ್ಟಿದ್ದು ನೋಡು,ಮೂಸಂಬಿ ಹಣ್ಣು ಕಿತ್ತು ಕೊಡ್ಲಾ’ ಅಂತೆಲ್ಲ ಹೇಳಿ ಸಮಾಧಾನ ಮಾಡಿ, ಮತ್ತೆ ಮನೆಗೆ ಕರೆದುಕೊಂಡು ಬಂದು ಬಿಡ್ತಾ ಇದ್ದರು ನಮ್ಮಪ್ಪ.

Advertisement

ಅಪ್ಪನ ಕೆಲಸ ಬೆಳಗ್ಗೆ ಐದು ಗಂಟೆಗೆ ಶುರುವಾದರೆ ರಾತ್ರಿ ಎಂಟಾದರೂ ಮುಗಿಯುವುದಿಲ್ಲ. ಕೊಟ್ಟಿಗೆ ಕೆಲಸ, ಹಸು-ಕರು, ಎಮ್ಮೆ, ಅದಕ್ಕೆ ಹುಲ್ಲು, ತೋಟ ಅಂತ ಆತ ಒಮ್ಮೆ ಆ ಕೆಲಸದೊಳಗೆ ಮುಳುಗಿಬಿಟ್ಟರೆ, ಮನೆಗೆ ಬರುವುದು ಏನಿದ್ದರೂ ತಿಂಡಿ, ಕಾಫಿ, ಊಟಕ್ಕಷ್ಟೇ. ಯಾವತ್ತೂ ತನ್ನ ಬಗ್ಗೆ ಯೋಚಿಸಿದವನಲ್ಲ. ಹಸು ಎಮ್ಮೆ ಕರುವಿಗೆ ಆರೋಗ್ಯದಲ್ಲಿ ಚೂರು ವ್ಯತ್ಯಾಸ ಆದರೂ ಸಾಕು; ಊಟ ತಿಂಡಿ ಮಾಡದೇ ಅದರ ಮುಂದೆಯೇ ಉಪಚಾರ ಮಾಡುತ್ತಾ ಕುಳಿತು ಬಿಡುತ್ತಾರೆ.

“ಅಪ್ಪಾ, ಇಲ್ಲಿಗೆ ಬನ್ನಿ. ನಾಲ್ಕು ದಿನ ಆರಾಮಾಗಿದ್ದುಕೊಂಡು ಹೋಗಿ’ ಅಂತ ಕರೆದಾಗೆಲ್ಲ, “ಅಯ್ಯೋ, ಈಗ ತೋಟದಲ್ಲಿ ಕಳೆ ತೆಗೆಯುವ ಸಮಯ, ಕೊನೆ ಕೊಯ್ಲು, ಹಸು ಕರು ಹಾಕೋ ಸಮಯ’ ಹೀಗೆ… ಹತ್ತಾರು ನೆಪ ಹೇಳಿ “ನೀವೇ ಬನ್ನಿ’ ಅಂತ ತಪ್ಪಿಸಿಕೊಳ್ಳುತ್ತಾರೆ. ಎಲ್ಲಿಗೇ ಹೋಗಲಿ, ಬೆಳಗ್ಗೆ ಹೋದರೆ ಸಂಜೆ ಮನೆಗೆ ಬರಲೇಬೇಕು. ಅಪ್ಪ ಮನೆಯಲ್ಲಿಲ್ಲ ಅಂದ ದಿನವೇ ನನಗೆ ನೆನಪಿಲ್ಲ. ಅಷ್ಟು ಅನಿವಾರ್ಯ ಆದಾಗಷ್ಟೇ ಹೋಗುವುದು.

ಇತ್ತೀಚಿಗೆ ಅಮ್ಮನ ಕರೆದರೂ, “ಪುಟ್ಟಿ ಅಪ್ಪಂಗೆ ಒಬ್ರಿಗೆ ಕಷ್ಟ ಆಗ್ತೀ, ವಯಸ್ಸಾತಲೇ, ಬಿಟ್ಟಿಕ್ಕಿ ಬರದು ಕಷ್ಟ. ನೀವೇ ಬನ್ನಿ’ ಅನ್ನುವ ಮಾತು ಶುರುವಾಗಿದೆ. ಅಕಸ್ಮಾತ್‌ ಬಂದರೂ ಬೆಳಗ್ಗೆ ಏಳುವಷ್ಟರಲ್ಲಿ ಅವರ ಚಡಪಡಿಕೆ ನೋಡಲಾಗದು. ಹಸು ಹಾಲು ಕೊಡ್ತಾ ಏನೋ, ತಿಂಡಿ ತಿಂತಾ ಇಲ್ವೋ, ನಾಯಿ ಸರಿಯಾಗಿ ಕಟ್ಟಿದ್ದಾರೋ ಇಲ್ಲವೋ, ತೋಟದಲ್ಲಿ ಏನಾಯಿತೋ, ಏನೋ ಹೀಗೆ ಹತ್ತಾರು ಪ್ರಶ್ನೆಗಳು ಅವರ ಮುಖದಲ್ಲಿ. ಯಾವಾಗಲೂ ಮನೆ, ತೋಟ, ಕೊಟ್ಟಿಗೆ ಇದಿಷ್ಟೇ.

ಶರಾವತಿಯ ಹಿನ್ನೀರಿನ ಪ್ರದೇಶದಲ್ಲಿ ಇರುವ ನನ್ನೂರು ಯಾವಾಗಲೂ ಕತ್ತಲೆಯಲ್ಲೇ ಇದ್ದದ್ದು. ಪಕ್ಕದಲ್ಲೇ ಜೋಗ ಜಲಪಾತ ಇದ್ದೂ,ನೂರಾರು ಊರಿಗೆ ಬೆಳಕು ನೀಡಿದರೂ ಈ ಊರಲ್ಲಿ ಮಾತ್ರ ಕತ್ತಲೆ. ದೀಪದ ಬುಡದಲ್ಲಿ ಕತ್ತಲಿದ್ದಂತೆ. ಹತ್ತಿರದಲ್ಲಿ ಒಂದು ಆಸ್ಪತ್ರೆಯಿಲ್ಲ. ಸಮಯಕ್ಕೆ ಸರಿಯಾಗಿ ಬಸ್ಸು ವ್ಯವಸ್ಥೆ ಇಲ್ಲ. ಫೋನ್‌, ಟಿವಿ ಇದ್ಯಾವುದನ್ನೂ ಕೇಳಲೇಬೇಡಿ. ಆದರೂ ಈ ಊರಿನ ಜನಗಳು ಯಾವತ್ತೂ ಗೊಣಗಿದ್ದು ನೋಡಿಲ್ಲ. ಅಷ್ಟು ಸಮಾಧಾನ ಸಂತೃಪ್ತಿ ಅವರಲ್ಲಿ.

ಊರಿಗೆ ಊರೇ ಕೊಚ್ಚಿಕೊಂಡು ಹೋಗುವಷ್ಟು ಮಹಾಮಳೆ ಈ ಊರಲ್ಲಿ. ತೋಟಗಳೆಲ್ಲ ನೀರಲ್ಲಿ ಮುಳುಗಿವೆ. 30-40 ವರುಷಗಳಿಂದ ಕಷ್ಟಪಟ್ಟು ಕಟ್ಟಿಕೊಂಡ ಬದುಕು ನೀರಲ್ಲಿ ತೇಲುತಿದೆ. ಕಹಿಯನ್ನೂ, ಸಿಹಿಯನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಅವರಿಗೆ ಇದೆ.ಆದರೂ ಜಾಸ್ತಿ ಉಂಡದ್ದು ಕಹಿಯೇ.

ಇದು ಕೇವಲ ನಮ್ಮಮನೆಯೊಂದರ ಕತೆಯಲ್ಲ.ಭಾಗಶಃ ನೀರಲ್ಲಿ ಮುಳುಗಿ ಕಂಗಾಲಾಗಿರುವ ಉತ್ತರಕನ್ನಡ, ಉತ್ತರ ಕರ್ನಾಟಕ, ಚಿಕ್ಕಮಗಳೂರು, ಕೊಡಗು,ಇನ್ನೂ ಹಲವಾರು ಪ್ರದೇಶದ ಜನರ ಸ್ಥಿತಿ.

ನಾನು ಪ್ರಾರ್ಥಿಸುವುದಿಷ್ಟೇ, “ದೇವರೇ ಬೇವು ಸ್ವಲ್ಪವೇ ಕೊಡು,ಆ ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನಗಳಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು.ಆ ನಿನ್ನ ಮಕ್ಕಳಿಗೆ ಬೇರೆಯವರಿಗೆ ಕೊಟ್ಟಷ್ಟೇ ಗೊತ್ತಿದೆಯೇ ಹೊರತು ಕೈಚಾಚಿ ಬೇಡಿ ಗೊತ್ತಿಲ್ಲ. ಈಗ ಪರಿಹಾರ ಅಂತ ತೆಗೆದುಕೊಳ್ಳುವಾಗಿನ ಅವರ ಮನಸ್ಥಿತಿಯನ್ನ ನನ್ನಿಂದ ಊಹಿಸಲೂ ಸಾಧ್ಯವಾಗುತ್ತಿಲ್ಲ.ಈ ಕಷ್ಟದಿಂದ ಆದಷ್ಟು ಬೇಗ ಪಾರು ಮಾಡು’.

-ಸವಿತಾ ಗುರುಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next