ಮೈಸೂರು: ಪುಸ್ತಕಗಳು ಜಗತ್ತಿನ ಸಾರವಾಗಿದ್ದು, ಸರ್ವೋದಯ ಪರಿಕಲ್ಪನೆಗೆ ಬುನಾದಿಯಾಗಿವೆ ಎಂದು ವಿದ್ವಾಂಸ ಡಾ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂವಹನ ಪ್ರಕಾಶನದ ಸಹಯೋಗದಲ್ಲಿ ನಗರ ಕಸಾಪ ಕಚೇರಿಯಲ್ಲಿ ಮಂಗಳವಾರ ನಡೆದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಕೃತಿಸ್ವಾಮ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನ ಸಾರ: ಪುಸ್ತಕ ಸಂಸ್ಕೃತಿ ಎನ್ನುವುದು ಒಂದು ದೊಡ್ಡ ಪರಂಪರೆ. ಓದುಗನಿಗೆ ಮಾಧುರ್ಯ, ಬೆಳಕು ಹಾಗೂ ಮಾರ್ಗದರ್ಶನವನ್ನು ಒಳ್ಳೆಯ ಪುಸ್ತಕಗಳು ನೀಡುತ್ತವೆ. ಜಗತ್ತಿನ ಸಾರ ಪುಸ್ತಕಗಳು ಎಂದು ಹೇಳಿದರೆ ತಪ್ಪಾಗಲಾರದು. ಮಹಾತ್ಮ ಗಾಂಧೀಜಿಯವರ ಸರ್ವೋದಯ ಪರಿಕಲ್ಪನೆಗೆ ಪುಸ್ತಕಗಳು ಬುನಾದಿಯಾಗಿದ್ದು, ಮನುಷ್ಯನನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತವೆ ಎಂದು ಹೇಳಿದರು.
ಸಮಾಜದ ಆತ್ಮ: ಪುಸ್ತಕ ದಿನಾಚರಣೆ ತುಂಬಾ ಮಹತ್ವ ಮತ್ತು ಮುಖ್ಯವಾದುದಾಗಿದ್ದು, ಪುಸ್ತಕವಿಲ್ಲದ ಸಮಾಜ ಆತ್ಮವಿಲ್ಲದ ಶರೀರದಂತೆ. ಒಂದು ಜೀವಿಗೆ ಜೀವಕ್ಕಿಂತ ಆತ್ಮ ಬಹಳ ಮುಖ್ಯ. ಆ ಪಾತ್ರವನ್ನು ಪುಸ್ತಕಗಳು ನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ ಪುಸ್ತಕಗಳನ್ನು ಸಮಾಜದ ಆತ್ಮ ಎನ್ನಬಹುದು ಎಂದರು.
ಕುವೆಂಪು ಅವರು ತಮ್ಮ ರಾಮಾಯಣದರ್ಶನಂ ಕಾವ್ಯದಲ್ಲಿ ರಾಮ ಒಬ್ಬ ಪುಸ್ತಕ ಪ್ರಿಯನಾಗಿದ್ದ ಎಂದು, ಹಾಗೂ ಆತ ಕಾಡಿನಲ್ಲಿರುವಾಗಲು ಪುಸ್ತಕಗಳನ್ನು ಓದುತ್ತಿದ್ದ ಎಂದು ಹೇಳಿದ್ದಾರೆ. ರಾಮರಾಜ್ಯದ ಬಹು ಮುಖ್ಯ ಅಂಗ ಎಂದರೆ ಅದು ಪುಸ್ತಕಗಳು. ಈ ಹಿನ್ನೆಲೆ ಪುಸ್ತಕ ಓದುವ ಸಂಸ್ಕೃತಿಯನ್ನು ನಾವುಗಳು ಬೆಳೆಸಿಕೊಳ್ಳಬೇಕು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಕೃತಿಚೌರ್ಯದಂತಹ ಕೆಲಸ ಹೆಚ್ಚಾಗಿ ನಡೆಯುತ್ತಿದೆ. ಕೃತಿಸ್ವಾಮ್ಯವನ್ನು ನಾವು ಸಂರಕ್ಷಿಸಬೇಕು ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಬದುಕಿನಲ್ಲಿ ಮೌಲ್ಯಯುತ ಕೊಡುಗೆ ಎಂದು ಭಾವಿಸುವುದಾದರೆ ಅದು ವಿವೇಕ. ಬದುಕಿನಲ್ಲಿ ವಿವೇಕ ಮೂಡಿದರೆ ಅದಕ್ಕಿಂತ ಮುಖ್ಯವಾವದ್ದು ಮತ್ತೂಂದಿಲ್ಲ. ಅದು ಸಂಕಟದ ಪರಿಸ್ಥಿತಿಯಲ್ಲಿ ಮತ್ತು ಪುಸ್ತಕ ಓದಿನಿಂದ ಬರುವಂತದ್ದು ಎಂದರು.
ಜಗತ್ತಿನ ಶ್ರೇಷ್ಠ ಕವಿಗಳು ಏ.23ರಂದು ಮೃತಪಟ್ಟ ಕಾರಣ ಯುನೆಸ್ಕೋ ಪ್ರತಿವರ್ಷ ಏ.23ರಂದು ಪುಸ್ತಕ ದಿನಾಚರಣೆಯನ್ನು ಆರಂಭಿಸಿದೆ. ಇದು ಸೂಕ್ಷ್ಮ ವಿಚಾರವನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್. ಲೋಕಪ್ಪ, ಜಿಲ್ಲಾ ಕಸಾಪಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮತ್ತಿತರರು ಹಾಜರಿದ್ದರು.