ನಾನು ಸಿನಿಮಾ ಕಲಿತಿದ್ದು ಮೂರು ಜನರಿಂದ!
ಹಾಗಂತ ದೊಡ್ಡ ಪರದೆಯ ಮೇಲೆಯೇ ತೋರಿಸಿ ಬಿಟ್ಟರು ದಯಾಳ್. ಆ ಮೂವರ ಪೈಕಿ ಅಂದು ಉಪೇಂದ್ರ ಅವರನ್ನು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಕರೆದಿದ್ದರು ಅವರು. ತಮ್ಮ ಗುರುವಿನಿಂದ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಸಬೇಕು ಎಂಬುದು ಅವರ ಹಲವು ದಿನಗಳ ಆಸೆಯಂತೆ. ಅದು “ಆ ಕರಾಳ ರಾತ್ರಿ’ ಚಿತ್ರದ ಮೂಲಕ ಈಡೇರಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಈ ಚಿತ್ರ ಶುರುವಾಗಿತ್ತು. ಈಗ ಸಂಪೂರ್ಣಗೊಂಡು, ಹಾಡುಗಳ ಬಿಡುಗಡೆಯೂ ಆಗಿದೆ. ಮೂರ್‍ನಾಲ್ಕು ಅಮಾವಸ್ಯೆಗಳ ಒಳಗೆ ಚಿತ್ರ ಬಿಡುಗಡೆಯಾದರೆ ಅಚ್ಚರಿಯೇನಿಲ್ಲ.
“ಆ ಕರಾಳ ರಾತ್ರಿ’ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಕಲಾವಿದರ ಸಂಘದ ಹೊಸ ಕಟ್ಟಡದಲ್ಲಿ. ಅಂದು ಉಪೇಂದ್ರ ಜೊತೆಗೆ ಆರ್. ಚಂದ್ರು, ಪ್ರಥಮ್, ಕೆ. ಮಂಜು ಮುಂತಾದವರು ಇದ್ದರು. ಇವರೆಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾದವು. ಹಾಡುಗಳನ್ನು ಬಿಡುಗಡೆ ಮಾಡಿದ ಉಪೇಂದ್ರ, “ದಯಾಳ್ ಅವರು ಹಲವು ವರ್ಷಗಳ ಆತ್ಮೀಯ. “ಎಚ್‌ಟುಓ’ ಚಿತ್ರಕ್ಕೆ ಅವರು ಸಂಭಾಷಣೆಯಲ್ಲಿ ಸಹಾಯ ಮಾಡಿದ್ದರು. ಅಲ್ಲಿಂದ ಶುರುವಾಗಿದ್ದು, ಏನೇನೋ ಮಾಡುತ್ತಲೇ ಇರುತ್ತಾರೆ. ಯಾರದೋ ಮೇಲೆ ಕೇಸ್ ಹಾಕ್ತಾರೆ, ಪ್ರಶಸ್ತಿ ಪಡೀತಾರೆ, ಚಿತ್ರ ಮಾಡ್ತಾರೆ … ಹೀಗೆ ನಿರಂತರವಾಗಿ ಬಿಝಿ ಇರುತ್ತಾರೆ. ಇದೊಂದು ಒಳ್ಳೆಯ ಕಥೆ ಇರುವ ಸಿನಿಮಾ. ಬರೀ ಸಸ್ಪೆನ್ಸ್, ಹಾರರ್ ಅಷ್ಟೇ ಅಲ್ಲ, ಬೇರೆ ಏನೋ ಇದೆ’ ಎಂದು ಹೇಳುತ್ತಲೇ, ಎಲ್ಲರಿಗೂ ಹಾರೈಸಿ ತಮ್ಮ ಮಾತು ಮುಗಿಸಿದರು.
ದಯಾಳ್ ಭಾವುಕರಾಗಿದ್ದರು. ಚಿತ್ರ ಚೆನ್ನಾಗಿ ಮೂಡಿಬಂದಿರುವುದು ಒಂದು ಕಾರಣವಾದರೆ, ಇನ್ನೊಂದು ಉಪೇಂದ್ರ ಅವರ ಹಾಜರಿ. “ಇವತ್ತು ನಾನೇನಾದರೂ ಸ್ವಲ್ಪ ಹೆಸರು ಮಾಡಿದ್ದೀನಿ ಅಂದರೆ ಅದಕ್ಕೆ ಅವರೇ ಕಾರಣ. ನನ್ನ ಯೋಚನೆಗೆ ಇಂಬು ಕೊಟ್ಟಿದ್ದು ಅವರೇ. ನಾನು ಕೇಳಿಸಿಕೊಳ್ಳುವುದನ್ನು ಕಲಿತಿದ್ದೇ ಅವರಿಂದ. ಬರೀ ನಾವು ಮಾತನಾಡುವುದಲ್ಲ, ಬೇರೆಯವರು ಮಾತಾಡಿದ್ದನ್ನು ಕೇಳಿಸಿಕೊಳ್ಳಬೇಕು ಅಂತ ತಿಳಿದಿದ್ದೇ ಅವರಿಂದ’ ಎಂದರು ದಯಾಳ್. ಇನ್ನು ಚಿತ್ರದ ಬಗ್ಗೆ ಮಾತನಾಡಿದ ಅವರು, “ಸುಮಾರು ಒಂದೂವರೆ ವರ್ಷಗಳ ಹಿಂದೆ ಈ ಕಥೆ ನನಗೆ ಸಿಕ್ಕಿತು. ಮೋಹನ್ ಹಬ್ಬು ಅವರು ಬರೆದ ನಾಟಕ ಇದು. ಆ ಸಂದರ್ಭದಲ್ಲಿ ನನ್ನ ಹತ್ತಿರ ಹಕ್ಕುಗಳನ್ನು ಕೊಳ್ಳುವುದಕ್ಕೆ ದುಡ್ಡಿರಲಿಲ್ಲ. ಅದನ್ನು ಅವರಿಗೆ ಹೇಳಿದ್ದೆ. ಒಪ್ಪಿ ನನಗೇ ಆ ಹಕ್ಕುಗಳನ್ನು ಕೊಟ್ಟರು. ನನ್ನ ಅಷ್ಟೂ ದುಡಿಮೆಯನ್ನು ಸುರಿದು ಈ ಚಿತ್ರ ಮಾಡಿದ್ದೇನೆ. ಈ ಚಿತ್ರದಿಂದ ದುಡ್ಡು ಕಳೆದುಕೊಂಡರೂ, ಬೇಸರ ಪಡಬೇಡಿ ಅಂತ ಮನೆಯವರಿಗೆ ಹೇಳಿದ್ದೇನೆ. ಏಕೆಂದರೆ, ಒಂದು ಒಳ್ಳೆಯ ಚಿತ್ರ ಮಾಡಿದ ಖುಷಿ ಇದೆ. ಇದು ನನ್ನ ಕೆರಿಯರ್‌ನ ಬೆಸ್ಟ್ ಚಿತ್ರವಾಗಲಿದೆ’ ಎಂದರು.
ಅಂದು ವೇದಿಕೆಯ ಮೇಲೆ ಜೆಕೆ, ಅನುಪಮ ಗೌಡ, ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್, ಛಾಯಾಗ್ರಾಹಕ ಪಿ.ಕೆ.ಎಚ್. ದಾಸ್, ಸಂಕಲನಕಾರ ಶ್ರೀ, ಸಂಭಾಷಣೆ ಬರೆದಿರುವ ನವೀನ್ ಕೃಷ್ಣ, ಹಾಡುಗಳನ್ನು ಬರೆದಿರುವ “ತಂಗಾಳಿ’ ನಾಗರಾಜ್, ನಾಟಕಕಾರ ಮೋಹನ್ ಹಬ್ಬು ಸೇರಿದಂತೆ ಹಲವರು ಇದ್ದರು. ಎಲ್ಲರೂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜೆಕೆ ಮತ್ತು ಅನುಪಮ ಇಬ್ಬರೂ, ಈ ಚಿತ್ರದಲ್ಲಿ ನಾಯಕ ಅಥವಾ ನಾಯಕಿ ಇಲ್ಲ, ಕಥೆಯೇ ಎಲ್ಲ ಎಂದು ಹೇಳಿದರು.
ಚೇತನ್ ನಾಡಿಗೇರ್