Advertisement

ಧಾರೇಶ್ವರ ಬಳಗದ ಯಕ್ಷ ಅಷ್ಟಾಹ ಸಂಪನ್ನ

06:00 AM Aug 10, 2018 | |

ಪಾರ್ಥಿಸುಬ್ಬನ ಸೀತಾ ಕಲ್ಯಾಣ, ಕವಿರತ್ನಕಾಳಿದಾಸ, ಕಂದಾವರ ರಘುರಾಮ ಶೆಟ್ಟರ ಶಿಖಂಡಿ ವಿವಾಹ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ದೇವವ್ರತ ಪ್ರತಿಜ್ಞೆ, ಬಬ್ರುವಾಹನ ಕಾಳಗ, ದೇವಿದಾಸ ಕವಿಯ ಭೀಷ್ಮಪರ್ವ, ಬಬ್ರುವಾಹನ ಕಾಳಗ, ವಿಠಲ ಕಾಮತ್‌ ಉಪ್ಪಿನಕುದ್ರು ಅವರ ಧನ್ವಂತರಿ ಮಹಿಮೆ ಯಕ್ಷಗಾನ ನಡೆಯಿತು.

Advertisement

ಎಂಟು ದಿನ, ಎಂಟು ಆಖ್ಯಾನಗಳು. ಎಲ್ಲವೂ ಕಾಲಮಿತಿ. ಅದೇ ಕಲಾವಿದರು, ವಿಭಿನ್ನ ಪಾತ್ರಗಳು. ಪ್ರತಿದಿನ ಹೊಸರೂಪದಿಂದ ಬರುತ್ತಿದ್ದ ಕೊಂಡದಕುಳಿ, ವಂಡಾರು, ತೀರ್ಥಹಳ್ಳಿ, ಕಾಸರಕೋಡು, ಸಿದ್ದಾಪುರ ಮೊದಲಾದವರು. ಎಲ್ಲಿಯೂ ಪುನರುಕ್ತಿ ಇಲ್ಲ, ದ್ವಿರುಕ್ತಿ ಇಲ್ಲ. ಧಾರೇಶ್ವರರ ಸಮರ್ಥ ನಿರ್ದೇಶನ. ರಾಜಾಂಗಣದಲ್ಲಿ ಜು.21ರಿಂದ 28ರವರೆಗೆ ನಡೆದ ಯಕ್ಷಗಾನ ಪ್ರದರ್ಶನಗಳು ಜನಸಂದೋಹದ ಮನಮುಟ್ಟುವಲ್ಲಿ ಯಶಸ್ವಿಯಾಯಿತು.ಪರ್ಯಾಯ ಪಲಿಮಾರು ಮಠ,ಶ್ರೀ ಕೃಷ್ಣ ಮಠ, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌, ಲಯನ್ಸ್‌ ಸಂಸ್ಥೆ ಸಹಯೋಗದಲ್ಲಿ ಧಾರೇಶ್ವರ ಯಕ್ಷಬಳಗ ಟ್ರಸ್ಟ್‌ ಕಿರಿಮಂಜೇಶ್ವರ ಸಂಯೋಜನೆಯಲ್ಲಿ  ಮೂರನೇ ವರ್ಷದ ಯಕ್ಷ ಅಷ್ಟಾಹ ಅಂಗವಾಗಿ ಎಂಟು ಪ್ರಸಂಗಗಳ ಆಯೋಜನೆ. 

ಕಂದಾವರ ರಘುರಾಮ ಶೆಟ್ಟರು ಬರೆದ “ವಸು ವರಾಂಗಿ’ ಪ್ರಸಂಗದ ಒಂದು ಭಾಗ ಶಿಖಂಡಿ ವಿವಾಹ. ಇದರಲ್ಲಿ ಶಿಖಂಡಿಯಾಗಿ ಸಿದ್ಧಾಪುರ ಅಶೋಕ ಭಟ್ಟರ ಸಮರ್ಥ, ಶ್ರೀಧರ ಭಟ್‌ ಕಾಸರಕೋಡು ಅವರ ಅಡುಗೆ ಭಟ್ಟ, ಉದಯ ಹೆಗಡೆ ಮಾಳ್ಕೊàಡು ಅವರ ಹಿರಣ್ಯವರ್ಮ, ಕೊಂಡದಕುಳಿಯವರ ದ್ರುಪದ, ವಸಂತ್‌ ಚಿಕ್ಕೊಳ್ಳಿಯವರ ಕೌಸವಿ, ವಂಡಾರು ಅವರ ರಾಜಕುಮಾರಿ, ತೀರ್ಥಹಳ್ಳಿಯವರ ಸ್ಥೂಲಕರ್ಣನ ಪಾತ್ರಗಾರಿಕೆ. ಮಗಳಾಗಿ ಜನಿಸಿದರೂ ಮಗನೆಂದೇ ಮುದ್ದಿಸಿ ಬೆಳೆಸಿದ ರಾಜ. ದಿನಗಳೆದಂತೆ ಯುವಕರ ಮೇಲೆ ಆಸಕ್ತಿ ಬೆಳೆಸಿಕೊಂಡ ರಾಜಕುಮಾರ. ರಾಜಕುಮಾರಿ ಜತೆ ವಿವಾಹ ಮಾಡಿ ಸಂಸಾರ ಮಾಡಲಾಗದೇ ಆಗುವ ತೊಳಲಾಟ. ಹೆಂಡತಿಗೆ ಮದುವೆಯಾದದ್ದು ಶಿಖಂಡಿಯನ್ನು ಎಂದು ತಿಳಿದಾಗ ಆಕೆಯ ತಂದೆಗೆ ದೂರು. ಯುದ್ಧಭೀತಿಯಿಂದ ಮನೆಬಿಟ್ಟು ಆತ್ಮಹತ್ಯೆಗೈಯಲು ಹೋಗುವ  ಶಿಖಂಡಿಯನ್ನು ರಕ್ಷಿಸುವ ಸ್ಥೂಲಕರ್ಣ ಎಂಬ ಗಂಧರ್ವ. ನಂತರ ಶಾಪವಿಮೋಚನೆ ಮೂಲಕ ಸುಖಾಂತ್ಯ. ರಾಜಕುಮಾರಿಯು ಶಿಖಂಡಿಯನ್ನು ವಿವಾಹವಾದಾಗ ಆಗುವ ತಳಮಳ, ಪತಿಯಿಂದ ಸುಖವಿಹೀನೆಯಾಗುವ ದುಃಖ, ಹೆಣ್ಣೊಬ್ಬಳ ತುಮುಲ, ಪತಿ ಮನೆಯವರಿಂದ ವಂಚನೆಯಾಗಿದೆ ಎಂದು ತಿಳಿಯುವಾಗ ಆಗುವ ಆಘಾತ ಇದೆಲ್ಲವನ್ನೂ ವಂಡಾರು ಮಾರ್ಮಿಕವಾಗಿ ಅಭಿನಯಿಸಿದರು.  ನೋಡುವಾಗ ಗಂಡಾಗಿದ್ದು ಒಳಗಿನಿಂದ ಹೆಣ್ಣಾಗಿದ್ದು ಕಾಮನೆಗಳನ್ನು ಹೇಳಿಕೊಳ್ಳಲಾಗದೆ , ಪ್ರದರ್ಶಿಸಲೂ ಆಗದ ಸಂದಿಗ್ಧವನ್ನು ಅಶೋಕ್‌ ಭಟ್‌ ಚೆನ್ನಾಗಿ ಅಭಿನಯಿಸಿದರು. ಇವರಿಬ್ಬರ ಭಾವಭರಿತ ಅಭಿನಯವೇ ಒಟ್ಟು ಪ್ರಸಂಗದ ಹೈಲೈಟ್‌ ಆಗಿ ಕಂಡಿತು.   

ದೇವವ್ರತ ಪ್ರತಿಜ್ಞೆಯಲ್ಲಿ ವಂಡಾರು ಅವರ ಸತ್ಯವತಿ (ಯೋಜನಗಂಧಿ) ಹಾಗೂ ಕೊಂಡದಕುಳಿಯವರ ಶಂತನು, ತೀರ್ಥಹಳ್ಳಿಯವರ ದೇವವ್ರತ, ಮಂತ್ರಿ ಸುಧೀಚಿ ಅಶೋಕ್‌ ಭಟ್‌ ಸಿದ್ದಾಪುರ, ದಾಶರಾಜ ಕಂಧರ ಶ್ರೀಧರ ಕಾಸರಕೋಡು ಅವರು ನಿರ್ವಹಿಸಿದರು. ಕಾಸರಕೋಡು ಅವರು ಪ್ರತಿದಿನ ಹೊಸತನದ ಹಾಸ್ಯರೂಪಕಗಳ ಮೂಲಕ ಹಾಸ್ಯವೆಂದರೆ ಕೇವಲ ಮಂಗಾಟವಲ್ಲ ಎಂದು ನಿರೂಪಿಸಿದರು. ಬಿಟ್ಟು ಹೋದ ಗಂಗೆಯ ಚಿಂತೆಯಲ್ಲಿ ಯೋಜನಗಂಧಿಯನ್ನು ಕಂಡು ಮೋಹಕ್ಕೊಳಗಾಗುವ ಶಂತನು, ದಾಶರಾಜನಿಂದ ಬಂದ ಮೊಮ್ಮಗುವಿಗೆ ಹಸ್ತಿನೆಯ ಸಿಂಹಾಸನದ ಬೇಡಿಕೆಯನ್ನು ಕೇಳಿ ದುಃಖ ಗೃಹವನ್ನು ಸೇರಿಕೊಳ್ಳುವ ಅಭಿನಯ ಕೊಂಡದಕುಳಿಯವರಿಂದ ವ್ಯಕ್ತವಾದರೆ, ದೇವವ್ರತ ವಿದ್ಯಾಭ್ಯಾಸ ಮುಗಿಸಿ ಬಂದಾಗ ಬಿಕೋ ಎನ್ನುವ ಅರಮನೆ ಬೀದಿ, ತಳಿರು ತೋರಣಗಳಿಲ್ಲದ ಬಣಗುಟ್ಟುವ ಸ್ವಾಗತ, ಸಿಂಹಾಸನವೇರದೇ ಅದೆಷ್ಟೋ ದಿನವಾದಂತೆ ಕಾಣುವ ರಾಜಚಾವಡಿ ಇದೆಲ್ಲ ಕಂಡು ವ್ಯಾಕುಲನಾಗಿ ಅಪ್ಪನ ಚಿಂತೆಗೆ ಕಾರಣ ತಿಳಿದುಕೊಂಡು ಸತ್ಯವತಿಯ ಮನವೊಲಿಸಿ ಅಪ್ಪನಿಗೆ ಮದುವೆ ಮಾಡಿಸಿ ಪಟ್ಟ ಬೇಡ ಎಂದು ಪ್ರತಿಜ್ಞೆ ಮಾಡುವ ಆ ಮೂಲಕ ಭೀಷ್ಮ ಎಂದು ಕರೆಸಿಕೊಳ್ಳಲ್ಪಡುವವನ ಪಾತ್ರಾಭಿನಯ ತೀರ್ಥಹಳ್ಳಿಯವರಿಂದ ಮೂಡಿಬಂತು. ವೀರಮಣಿ ಕಾಳಗದಲ್ಲಿ ಕೊಂಡದಕುಳಿ ಅವರ ಹನುಮಂತ, ಉಪ್ಪುಂದ ನಾಗೇಂದ್ರ ರಾವ್‌ ಅವರ ವೀರಮಣಿ ಉತ್ತಮವಾಗಿತ್ತು. ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕುವ ವೀರಮಣಿಯ ಮಕ್ಕಳ ಪಾತ್ರವನ್ನು ತೀರ್ಥಹಳ್ಳಿಯವರು ಮಾಡಿದ್ದರು. 

ಸುಬ್ರಹ್ಮಣ್ಯಧಾರೇಶ್ವರ, ಚಂದ್ರಕಾಂತ ಮೂಡುಬೆಳ್ಳೆ, ಗಜಾನನ ಬೊಳ್ಗೆರೆ, ಕೋಟ ಶಿವಾನಂದ ಹಾಗೂ ಕಾರ್ತಿಕ್‌ ಧಾರೇಶ್ವರ ಅವರ ಹಿಮ್ಮೇಳ ಸೊಗಸಾಗಿತ್ತು.

Advertisement

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next