ಬೆಂಗಳೂರು: ಖಾಸಗಿ ಸಹಭಾಗಿತ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಯನಗರದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಪಾದಚಾರಿ ಮೇಲ್ಸೇತುವೆಯನ್ನು ಮಂಗಳವಾರ ಲೋಕಾರ್ಪಣೆ ಮಾಡಲಾಯಿತು.
ಜಯನಗರ 3ನೇ ಬ್ಲಾಕ್ ದ.ರಾ. ಬೇಂದ್ರೆ ವೃತ್ತದಲ್ಲಿ ಪ್ರಕಾಶ್ ಆರ್ಟ್ಸ್ ಸಂಸ್ಥೆ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಈ ಪಾದಚಾರಿ ಮೇಲ್ಸೇತುವೆ ನಿರ್ಮಿಸಿದ್ದು, ಶಾಸಕ ಆರ್. ಅಶೋಕ್ ಮತ್ತು ಮೇಯರ್ ಜಿ. ಪದ್ಮಾವತಿ ಲೋಕಾರ್ಪಣೆಗೊಳಿಸಿದರು. ವರಕವಿ ಬೇಂದ್ರೆ ಜನ್ಮದಿನೋತ್ಸವದ ಅಂಗವಾಗಿ ನಿರ್ಮಿಸಿದ ಈ ಮೇಲ್ಸೇತುವೆಗೆ ಬೇಂದ್ರೆ ಹೆಸರು ಇಡಲಾಗಿದೆ.
ಜಯನಗರದ 22ನೇ ಅಡ್ಡರಸ್ತೆ, ಆನೆಬಂಡೆ ರಸ್ತೆ, 9ನೇ ಮುಖ್ಯರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಈ ಪಾದಚಾರಿ ಮಾರ್ಗದ ಎರಡೂ ಬದಿಯಲ್ಲಿ ಒಟ್ಟಾರೆ ಮೂರು ಲಿಫ್ಟ್ಗಳನ್ನು ಅಳವಡಿಸಲಾಗಿದ್ದು, ನಿತ್ಯ ಸರಾಸರಿ ಎರಡು ಸಾವಿರ ಪಾದಚಾರಿಗಳು ಇದನ್ನು ಬಳಕೆ ಮಾಡಲಿದ್ದಾರೆ. ಪ್ರಕಾಶ್ ಆರ್ಟ್ಸ್ ಸಂಸ್ಥೆಯು ಈ ಪಾದಚಾರಿ ಮೇಲ್ಸೇತುವೆ ಮೇಲಿನ ಜಾಹೀರಾತು ಶುಲ್ಕ ವಾರ್ಷಿಕ 3.20 ಲಕ್ಷ ಹಾಗೂ ನೆಲ ಬಾಡಿಗೆ ರೂಪದಲ್ಲಿ 10.80 ಲಕ್ಷ ರೂ. ಪಾಲಿಕೆಗೆ ಪಾವತಿಸಲಿದೆ.
ಪಾದಚಾರಿ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದ ಮೇಯರ್ ಪದ್ಮಾವತಿ, “”ಸಾರ್ವಜನಿಕರಿಗೆ ನಿರಾತಂಕವಾಗಿ, ಸರಾಗವಾಗಿ ರಸ್ತೆ ದಾಟಲು ಈ ರೀತಿಯ ಪಾದಚಾರಿ ಮೇಲ್ಸೇತುವೆ ತುಂಬಾ ಅನುಕೂಲ. ಇದರಿಂದ ಪಾದಚಾರಿಗಳಿಗೂ ಅನುಕೂಲ ಹಾಗೂ ಪಾಲಿಕೆಗೂ ಆದಾಯ ಬರುತ್ತದೆ. ಖಾಸಗಿ ಸಹಭಾಗಿತ್ವದಲ್ಲಿ ಇನ್ನಷ್ಟು ಪಾದಚಾರಿ ಮೇಲ್ಸೇತುವೆಗಳು ನಗರದಲ್ಲಿ ತಲೆಯೆತ್ತಲಿವೆ,” ಎಂದರು.
ಶಾಸಕ ಆರ್. ಅಶೋಕ್ ಮಾತನಾಡಿ, “ಹೆಚ್ಚುತ್ತಿರುವ ವಾಹನದಟ್ಟಣೆ ನಡುವೆ ಪಾದಚಾರಿಗಳು ನಿರಾತಂಕವಾಗಿ ರಸ್ತೆ ದಾಟಲು ಈ ರೀತಿಯ ಮೇಲ್ಸೇತುವೆ ಅತ್ಯವಶ್ಯಕ. ಪದ್ಮನಾಭನಗರದ ಬನಶಂಕರಿ ದೇವಸ್ಥಾನ ಬಳಿ ಕೂಡ ಇದೇ ಮಾದರಿಯ ಮೇಲ್ಸೇತುವೆ ಸಿದ್ಧವಾಗಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ಲಿಫ್ಟ್ಗಳ ಸೌಲಭ್ಯ ಇರುವುದರಿಂದ ಮಹಿಳೆಯರು, ವೃದ್ಧರಿಗೆ ಅನುಕೂಲ ಆಗಲಿದೆ,” ಎಂದರು.
ಕಸ ಪ್ರತ್ಯೇಕ ಕಡ್ಡಾಯ; ಪಾಲಿಕೆ ಸಜ್ಜು
ನಗರದ ವ್ಯಾಪ್ತಿಯಲ್ಲಿ ಹಸಿ ಮತ್ತು ಒಣತ್ಯಾಜ್ಯ ಪ್ರತ್ಯೇಕಗೊಳಿಸುವುದು ಕಡ್ಡಾಯವಾಗಿದ್ದು, ಬುಧವಾರ ದಿಂದ ಈ ಸಂಬಂಧ ಪಾಲಿಕೆ ವತಿಯಿಂದ ನಗರದಾದ್ಯಂತ ಅಭಿಯಾನ ಆರಂಭಿಸಲಾಗು ವುದು ಎಂದು ಮೇಯರ್ ಜಿ. ಪದ್ಮಾವತಿ ತಿಳಿಸಿದರು. ಜಯನಗರದಲ್ಲಿ ಮಂಗಳವಾರ ಪಾದಚಾರಿ ಮೇಲ್ಸೇತುವೆಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹಸಿ ಮತ್ತು ಒಣತ್ಯಾಜ್ಯ ಸಂಗ್ರಹಕ್ಕೆ ಪಾಲಿಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅಭಿಯಾನಕ್ಕಾಗಿ ಎಲ್ಲ ಸದಸ್ಯರು, ಸರ್ಕಾರೇತರ ಸಂಘ-ಸಂಸ್ಥೆಗಳ ನೆರವು ಪಡೆಯಲಾಗಿದೆ ಎಂದರು.