ಲಕ್ಷ್ಮೇಶ್ವರ: ಡಿಎಪಿ ಗೊಬ್ಬರಕ್ಕೆ ರೈತರ ನೂಕುನುಗ್ಗಲು ತಪ್ಪದಂತಾಗಿದ್ದು, ಶುಕ್ರವಾರ ಬೆಳ್ಳಂಬೆಳಗ್ಗೆ ನೂರಾರು ಸಂಖ್ಯೆ ರೈತರು ಕೊರೊನಾ ಭೀತಿ, ಮಾರ್ಗಸೂಚಿ ಮರೆತು ಮುಗಿಬಿದ್ದ ದೃಶ್ಯ ಕಂಡುಬಂತು. ಆದರೆ ಗುರುವಾರವೇ ಎಲ್ಲ ಅಂಗಡಿಗಳಲ್ಲಿನ ಡಿಎಪಿ ಗೊಬ್ಬರದ ದಾಸ್ತಾನು ಖಾಲಿ ಆಗಿದ್ದರಿಂದ ಸರದಿ ಸಾಲಿನಲ್ಲಿ ನಿಂತ ರೈತರು ನಿರಾಸೆಯಿಂದ ಮರಳಿ ಹೋದರು.
ಇನ್ನು ಕುಂದಗೋಳ, ಸವಣೂರ ಇತರೇ ತಾಲೂಕಿನ ರೈತರಿಗೆ ಏಕೆ ಗೊಬ್ಬರ ಕೊಡುವುದಿಲ್ಲ. ನಾವು ಎಪಿಎಂಸಿ, ದಿನಸಿ ಸೇರಿ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಪಟ್ಟಣಕ್ಕೆ ಬರುತ್ತೇವೆ. ಅನೇಕ ವರ್ಷದಿಂದ ಇಲ್ಲಿಯೇ ಗೊಬ್ಬರ, ಬೀಜ ಖರೀದಿಸುತ್ತಾ ಬಂದಿದ್ದೇವೆ. ರೈತರನ್ನು ವಿಭಜಿಸದೇ ಸಕಾಲಿಕ ಬೀಜ, ಗೊಬ್ಬರ ಕೊಡಬೇಕು ಎಂದು ಪಶುಪತಿಹಾಳ ಗ್ರಾಮದ ಅಶೋಕ ಕಟಗಿ, ಯರೇಬೂದಿಹಾಳದ ಗ್ರಾಮದ ರೈತರು ಆಗ್ರಹಿಸಿದರು. ಆದರೆ ಡಿಎಪಿ ಗೊಬ್ಬರವೇ ಇಲ್ಲದ್ದರಿಂದ ರೈತರು ವಾಪಸ್ ಹೋದರು.
ಗುರುವಾರ ಪಟ್ಟಣದ ಎಲ್ಲ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದ ಬಳಿಕ ವ್ಯಾಪಾರಸ್ಥರ ಸಭೆ ಮಾಡಿದ್ದರು. ಈ ವೇಳೆ ವ್ಯಾಪಾರಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹರಿಸುವಂತೆ ಮನವಿ ಮಾಡಿದ್ದರು. ಸಭೆಯ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಆಯಾ ತಾಲೂಕಿನ ಕೃಷಿ ಕ್ಷೇತ್ರ, ಸಾಮಾನ್ಯ ಬೇಡಿಕೆಗೆ ತಕ್ಕಂತೆ ಸಬ್ಸಿಡಿ ಗೊಬ್ಬರ ಸರಬರಾಜಾಗುತ್ತದೆ. ಕಾರಣ ಬರುವ ರೈತರಿಗೆ ತಮ್ಮದೇ ತಾಲೂಕಿನಲ್ಲಿ ಗೊಬ್ಬರ ಖರೀದಿಸುವಂತೆ ತಿಳಿಹೇಳಿ ಎಂದು ಸೂಚಿಸಿದ್ದರು. ಲೈಸನ್ಸ್ ರದ್ದು: ಒಂದೆಡೆ ಗೊಬ್ಬರಕ್ಕಾಗಿ ನೆರೆಯ ತಾಲೂಕಿನ ರೈತರು ಶುಕ್ರವಾರವೂ ಪರದಾಡಿದ್ದರೆ ಮತ್ತೂಂದೆಡೆ ಈ ಮೊದಲಿನಂತೆ ನೆರೆಯ ತಾಲೂಕಿನ ರೈತರಿಗೆ ಗೊಬ್ಬರ ಮಾರಾಟ ಮಾಡಿದ್ದರಿಂದ ತಾತ್ಕಾಲಿಕವಾಗಿ ವ್ಯಾಪಾರಸ್ಥರ ಲೈಸನ್ಸ್ ರದ್ದು ಮಾಡಲಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರಾದ ಟಿ.ಎಸ್. ರುದ್ರೇಶಪ್ಪ ಅವರು, ಬೇರೆ ಜಿಲ್ಲೆಯ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಮಾರಾಟ ಮಾಡಿದ ಲಕ್ಷ್ಮೇಶ್ವರದ 3 ಅಂಗಡಿಗಳ ಪರವಾನಗಿ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಗೊಬ್ಬರ ನಿಯಂತ್ರಣ ಆಜ್ಞೆ 1985 ಉಲ್ಲಂಘನೆ ಮಾಡಿರುವ ಅಂಗಡಿಯವರು ಮುಂದಿನ ಆದೇಶದವರೆಗೂ ರಸಗೊಬ್ಬರ ಮಾರಾಟ, ದಾಸ್ತಾನು ಮಾಡಬಾರದು ಎಂದು ಹೇಳಿದರು.