Advertisement

ದುಡ್ಡು ಕೊಟ್ಟರೂ ಸಿಗಲ್ವಂತೆ ಡಿಎಪಿ ಗೊಬ್ಬರ!

04:05 PM Sep 01, 2022 | Team Udayavani |

ಸಿಂಧನೂರು: ಭತ್ತದ ಕಣಜ ಖ್ಯಾತಿಯ ತಾಲೂಕಿನಲ್ಲಿ ಬಹುಬೇಡಿಕೆ ಸೃಷ್ಟಿಸಿಕೊಂಡಿರುವ ಡಿಎಪಿ ರಸಗೊಬ್ಬರ ರೈತರ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಮರ್ಪಕವಾಗಿ ಇಲ್ಲದ ಪರಿಣಾಮ ದುಡ್ಡು ಕೊಟ್ಟರೂ ಡಿಎಪಿ ಗೊಬ್ಬರ ಸಿಗುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ವಿಎಸ್‌ಎಸ್‌ಎನ್‌, ಸಹಕಾರಿ ಸೊಸೈಟಿಗಳ ಮೂಲಕ ರಸಗೊಬ್ಬರ ಪೂರೈಕೆ ಮಾಡಲು ಬಹುತೇಕರು ಉತ್ಸುಕರಾಗಿದ್ದಾರೆ. ರೈತರ ಸೇವಾ ಸಹಕಾರಿ ನಿಯಮಿತಗಳಾಗಿರುವುದರಿಂದ ನೇರವಾಗಿ ರೈತರು ಸಂಪರ್ಕದಲ್ಲಿದ್ದು, ಇಲ್ಲಿ ಸಾರಿಗೆ ವೆಚ್ಚ ಮಾತ್ರ ಹೆಚ್ಚುವರಿಯಾಗಿ ಪಡೆದುಕೊಂಡು ರಸಗೊಬ್ಬರ ಕೊಟ್ಟು ಸೇವೆ ಸಲ್ಲಿಸಲು ಆಸಕ್ತಿ ತೋರಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ರಸಗೊಬ್ಬರ ದೊರೆಯದಾಗಿದೆ.

ಬಫರ್ಸ್ಟಾಕ್ಗೂ ಕೈ: ಸರ್ಕಾರಿ ಅಧಿಧೀನದ ಇಲ್ಲಿನ ಮಾರಾಟ ಮಂಡಳಿ (ಫೆಡರೇಶನ್‌) ಯಲ್ಲಿ ಬಫರ್‌ ಸ್ಟಾಕ್‌ ಕೂಡ ಖಾಲಿಯಾಗುತ್ತಿದೆ ಎಂಬ ಮಾಹಿತಿ ಒದಗಿಸಲಾಗುತ್ತಿದೆ. ಕಳೆದ ಏಪ್ರಿಲ್‌ನಿಂದ ಈವರೆಗೆ ಅಂದಾಜು 703 ಮೆಟ್ರಿಕ್‌ ಟನ್‌ ಡಿಎಪಿ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಸದ್ಯ ಬೇಡಿಕೆಯಿದ್ದರೂ ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಶಿಫಾರಸುಗಳಿಗೆ ಮಣೆ: ರೈತರು ಹಣ ಕೊಟ್ಟು ಖರೀದಿಸಬೇಕಾದ ರಸಗೊಬ್ಬರಕ್ಕೂ ಶಿಫಾರಸು ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಎಪಿ ರಸಗೊಬ್ಬರ ಎಲ್ಲಿದ್ದರೂ ಖರೀದಿಸಲು ಸಿದ್ಧವೆಂದು ವ್ಯಾಪಾರಿಗಳು, ಸಹಕಾರಿ ಸೊಸೈಟಿ ಆಡಳಿತ ಮಂಡಳಿಯವರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೂ, ಪೂರೈಕೆ ಮಾತ್ರ ಸಾಧ್ಯವಾಗುತ್ತಿಲ್ಲ. ಈ ನಡುವೆ ಡಿಎಪಿ ರಸಗೊಬ್ಬರ ಬೇಕಾದರೆ, ಶಿಫಾರಸುಗಳು ಇರಬೇಕು ಎಂಬ ಆರೋಪಗಳು ಹೆಚ್ಚಾಗಿವೆ. ರಸಗೊಬ್ಬರ ಬಯಸಿದ ರೈತರು ಇದಕ್ಕಾಗಿ ಯಾರ ಮನೆಗೆ ಅಲೆದು ಶಿಫಾರಸು ತರಬೇಕು ಎಂಬ ಗೊಂದಲ ಎದುರಿಸುವಂತಾಗಿದೆ.

ಸಹಜವಾಗಿಯೇ ತಾಲೂಕಿನಲ್ಲಿ ಡಿಎಪಿ ರಸಗೊಬ್ಬರವನ್ನು ಬ್ಲಾಕ್‌ ಮಾರ್ಕೆಟ್‌ನಲ್ಲಿ ಖರೀದಿಸಬೇಕಾದ ಸ್ಥಿತಿ ಎದುರಾಗಿದ್ದು, ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಎದ್ದಿದೆ.

Advertisement

ಸೊಸೈಟಿಗಳಿಗೆ ಪೂರೈಕೆಯಾಗುತ್ತಿಲ್ಲ

ಇಫ್ಕೋ ಸಂಸ್ಥೆಯು ತಾಲೂಕಿನ ತಿಡಿಗೋಳ, ವಲ್ಕಂದಿನ್ನಿ, ಅರಳಹಳ್ಳಿ, ಆರ್‌.ಎಚ್‌ ಕಾಲೋನಿ 2, ಮಲ್ಲಾಪುರ, ಬಾದರ್ಲಿ, ಗಾಂಧಿ ನಗರದ ಶ್ರೀ ಸಾಯಿ ಎಂಟರ್‌ಪ್ರೈಸಸ್‌ಗೆ ಮಾತ್ರ ಗೊಬ್ಬರ ಪೂರೈಸಿದಿದ್ದು, 99.5 ಮೆಟ್ರಿಕ್‌ ಒದಗಿಸಲಾಗಿದೆ ಎನ್ನುತ್ತವೆ ಫೆಡರೇಶನ್‌ ಮೂಲಗಳು. ಇನ್ನು ಕ್ರಿಬ್ಕೋ, ಆರ್‌ಸಿಎಫ್‌, ಸಿಐಎಲ್‌ ಕಂಪನಿಗಳಿಂದಲೂ ಆಯ್ದ ಸೊಸೈಟಿಗಳಿಗೆ ಡಿಎಪಿ ರಸಗೊಬ್ಬರ ಪೂರೈಕೆಯಾಗಿದೆ. ಆದರೆ, ತಾಲೂಕಿನ ಎಲ್ಲ ಸೊಸೈಟಿಗಳಿಗೂ ಸಮಾನ ರೀತಿಯಲ್ಲಿ ಬೇಡಿಕೆ ಅನ್ವಯ ರಸಗೊಬ್ಬರ ಒದಗಿಸಲು ಫೆಡರೇಶನ್‌ ಮೂಲಕ ಸಾಧ್ಯವಾಗಿಲ್ಲ ಎನ್ನುವ ದೂರು ಕೇಳಿ ಬಂದಿದೆ.

ಡಿಎಪಿ ರಸಗೊಬ್ಬರಕ್ಕಾಗಿ ಬೇಡಿಕೆ ಇಟ್ಟರೂ ನಮಗೆ ಸಮರ್ಪಕವಾಗಿ ಪೂರೈಕೆಯಾಗಿಲ್ಲ. ರೈತರು ನಿತ್ಯವೂ ಬಂದು ಸಹಕಾರಿ ಸೊಸೈಟಿ ಬಳಿ ಕೇಳುತ್ತಿದ್ದಾರೆ. ಫೆಡರೇಶನ್‌ನವರು ರೈತರ ಬೇಡಿಕೆ ಆಲಿಸಬೇಕು.ಅಮರೇಶ ಅಂಗಡಿ, ಅಧ್ಯಕ್ಷರು ವಿಎಸ್ಎಸ್ಎನ್‌, ಸಿಂಧನೂರು

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next