Advertisement

ಡ್ಯಾನಿ ಎಂಬ ಕಾಳಿಂಗ

10:32 AM Jun 26, 2017 | Team Udayavani |

ದ್ವಾರಕಾ ಹೋಟೆಲ್‌ನ ಖಾಲಿ ದೋಸೆ-ಪಲ್ಯ ತಿನ್ನುತ್ತಾ ಕುಳಿತಿದ್ದರು ಡ್ಯಾನಿ ಸಪಾನಿ. ದೋಸೆ ಮುರಿಯುತ್ತಾ, ಅದನ್ನು ಚಟ್ನಿಯಲ್ಲಿ ಅದ್ದಿ ಸವಿಯುತ್ತಿದ್ದರು ಅವರು. ಹುಟ್ಟಿದ್ದು ಲಂಡನ್‌ನಲ್ಲಿ. ಅಭಿನಯಿಸಿದ್ದು ಹೆಚ್ಚಾಗಿ ಇಂಗ್ಲೀಷ್‌ ಚಿತ್ರಗಳಲ್ಲಿ. ಇಂತಹ ಡ್ಯಾನಿ ಹೇಗಿರಬಹುದೋ ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ, ಡ್ಯಾನಿ ಮಾತ್ರ ಅತ್ಯಂತ ಸರಳವಾಗಿ ಒಂದು ಟ್ರ್ಯಾಕ್‌ ಪ್ಯಾಂಟ್‌-ಟೀ ಶರ್ಟ್‌ ತೊಟ್ಟು, ದೋಸೆ ತಿನ್ನುತ್ತಾ ಚಿತ್ರೀಕರಣ ತಯಾರಿಗಳನ್ನು ನೋಡುತ್ತಾ ಕುಳಿತಿದ್ದರು.

Advertisement

ಹೇಗಿದೆ ದೋಸೆ ಎಂದರೆ, ವೆರಿ ಗುಡ್‌ ಎಂಬ ಉತ್ತರ ಅವರಿಂದ ಬಂತು. ಅವರು ಹುಟ್ಟಿದ್ದು ಲಂಡನ್‌ನಲ್ಲಾದರೂ, ಮೂಲತಃ ಘಾನಾದವರಂತೆ. “ನಮ್ಮ ಕಡೆಯಲೆಲ್ಲಾ ಕೈಯಲ್ಲಿ ತಿಂದು ಅಭ್ಯಾಸವಿದೆ’ ಎಂದರು. ಅದೇ ಕಾರಣಕ್ಕೆ ಸ್ಪೂನು, ಪೋರ್ಕು ಎಸೆದು ಅವರು ಕೈಯಲ್ಲೇ ದೋಸೆ ತಿನ್ನುತ್ತಿದ್ದರು ಅವರು. “ತಾರಕಾಸುರ’ ಚಿತ್ರದ ಚಿತ್ರೀಕರಣಕ್ಕೆ ಡ್ಯಾನಿ ಬಂದು 15 ದಿನಗಳೇ ಆಗಿವೆ. ಮೊದಲ ಕೆಲವು ದಿನಗಳ ಚಿತ್ರೀಕರಣ ತಲಕಾಡಿನಲ್ಲಿ ನಡೆದಿದೆ.

ಈಗ ಚಿತ್ರತಂಡವು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಹೀಗೆ ಸತತವಾಗಿ ಚಿತ್ರೀಕರಣವಿರುವುದರಿಂದ ಡ್ಯಾನಿಗೆ ಬೆಂಗಳೂರು ನೋಡಲಾಗಲಿಲ್ಲವಂತೆ. “ತಲಕಾಡಿನಲ್ಲಿ ಚಿತ್ರೀಕರಣ ನಡೆಯುವಾಗ ಮೈಸೂರು ಅರಮನೆ ನೋಡಿಕೊಂಡು ಬಂದೆ. ಇಲ್ಲಿ ಏನೂ ನೋಡೋಕೆ ಆಗಿಲ್ಲ. ಕಂಟಿನ್ಯೂಸ್‌ ಶೂಟಿಂಗ್‌ ಇದೆ. ಹೋಟೆಲ್‌ನಿಂದ ಸ್ಪಾಟ್‌ಗೆ ಬರುವಾಗ ಸುತ್ತಮುತ್ತ ನೋಡೋದಷ್ಟೇ’ ಎಂದು ಇಂಗ್ಲೀಷ್‌ನಲ್ಲಿ ಹೇಳಿದರು ಡ್ಯಾನಿ.

 “ತಾರಕಾಸುರ’ ಚಿತ್ರದಲ್ಲಿ ಡ್ಯಾನಿ, ಕಾಳಿಂಗ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ನೋಡೋಕೆ ರಾಕ್ಷಸನ ತರಹ ಕಾಣಿಸಬೇಕು ಎಂದು ಚಿತ್ರತಂಡದವರು ಹುಡುಕುತ್ತಿದ್ದಾಗ, ಸಿಕ್ಕಿದ್ದೇ ಡ್ಯಾನಿ. “ನಾನು ಇದಕ್ಕೂ ಮುನ್ನ “ಸಿಂಗಂ 2′ ಚಿತ್ರದಲ್ಲಿ ಅಭಿನಯಿಸಿದ್ದೆ. ಬೇರೆ ದೇಶಗಳಲ್ಲೂ ಜನ ಆ ಪಾತ್ರ ನೋಡಿ ಗುರುತಿಸುತ್ತಾರೆ. ಇಲ್ಲಿ ಜನರ ಪ್ರೀತಿ ನೋಡಿ ಖುಷಿಯಾಯಿತು. ಇನ್ನೊಂದು ಭಾರತೀಯ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಅಷ್ಟರಲ್ಲಿ ಈ ತಂಡದಿಂದ ಕರೆ ಬಂತು.

ಈ ಚಿತ್ರದಲ್ಲಿ ಏನೋ ಹೊಸ ತರಹದ ಪ್ರಯೋಗ ಮಾಡುವುದಕ್ಕೆ ಹೊರಟಿದ್ದಾರೆ. ಎಲ್ಲಾ ಚೌಕಟ್ಟುಗಳನ್ನು ಮುರಿದು ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಒಳ್ಳೆಯ ಪಾತ್ರವಿದೆ’ ಎನ್ನುತ್ತಾರೆ ಅವರು. ಈ ಚಿತ್ರದಲ್ಲಿ ಆಫ‌ರ್‌ ಬಂದಾಗ, ಸ್ಕ್ರಿಪ್ಟ್ ನೋಡಿ, ಪ್ರಯತ್ನಪಟ್ಟು ಒಂದಿಷ್ಟು ಡೈಲಾಗ್‌ಗಳನ್ನು ರೆಕಾರ್ಡ್‌ ಮಾಡಿ ಕಳುಹಿಸಿದರಂತೆ. ಇದನ್ನು ಹೇಳಿದ್ದು ಡ್ಯಾನಿನಾ ಎಂದು ಚಿತ್ರತಂಡದವರಿಗೂ ಡೌಟ್‌ ಆಗಿದೆ. ಆದರೆ, ಆಮೇಲೆ ಅವರೇ ಹೇಳಿದ್ದು ಎಂದು ನೋಡಿ ಖುಷಿಯಾಗಿದೆ.

Advertisement

 ಭಾಷೆ, ನಟನೆ ಎಲ್ಲವೂ ವಿಭಿನ್ನ, ಹಾಗಿರುವಾಗ ಎಷ್ಟು ಕಷ್ಟವಾಯಿತು ಎಂದರೆ, “ನಟನೆ ಅನ್ನೋದು ಯೂನಿವರ್ಸಕಲ್‌’ ಎನ್ನುತ್ತಾರೆ ಡ್ಯಾನಿ. “ನಟನೆ ಅನ್ನೋದು ಯೂನಿವರ್ಸಲ್‌. ಅದಕ್ಕೆ ಭಾಷೆ ಇಲ್ಲ. ಇಲ್ಲಿ ನಾನು ಗಮನಿಸಿರುವಂತೆ, ಎಲ್ಲಾ ಲಾರ್ಜರ್‌ ದ್ಯಾನ್‌ ಲೈಫ್ ಪಾತ್ರಗಳು. ಅದನ್ನು ನಮ್ಮ ಭಾವನೆಗಳ ಮೂಲಕ  ತರಬಹುದು. ಆ ಪ್ರಯತ್ನವನ್ನು ಮಾಡಿದ್ದೀನಿ. ಜನ ಹೇಗೆ ಸ್ವೀಕರಿಸುತ್ತಾರೋ ನೋಡಬೇಕು’ ಎನ್ನುತ್ತಾರೆ ಅವರು.

ಇನ್ನು ಮುಂದೆ ಅವಕಾಶಗಳು ಬಂದರೆ, ಇನ್ನಷ್ಟು ಚಿತ್ರಗಳಲ್ಲಿ ನಟಿಸುತ್ತಾರಾ? ಖಂಡಿತಾ ಎಂಬ ಉತ್ತರ ಬರುತ್ತದೆ ಅವರಿಂದ. “ನಾನು ಅದೆಲ್ಲಿಂದಲೋ ಬಂದು, ಇಲ್ಲಿ ಸಿನಿಮಾ ಮಾಡುತ್ತೀನಿ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಅಂಥದ್ದೊಂದು ಅವಕಾಶ ಈಗ ಸಿಕ್ಕಿದೆ. ಅವಕಾಶಗಳು ಇನ್ನಷ್ಟು ಸಿಕ್ಕಿದರೆ, ಖಂಡಿತಾ ಬರುತ್ತೇನೆ’ ಎನ್ನುತ್ತಾರೆ ಅವರು. 

Advertisement

Udayavani is now on Telegram. Click here to join our channel and stay updated with the latest news.

Next