Advertisement

ಸಾಲು ಮರದ ಒಣರೆಂಬೆಗೆ 3ವರ್ಷದ ಮಗು ಬಲಿ

05:36 PM Feb 26, 2021 | Team Udayavani |

ಸಾಗರ: ಎರಡು ವರ್ಷಗಳ ಹಿಂದೆ “ಉದಯವಾಣಿ’ ಸಾಗರ ಆವಿನಹಳ್ಳಿ ರಸ್ತೆಯ ಸಾಲುಮರಗಳ ಒಣ ರೆಂಬೆಗಳ ಕುರಿತು ಎಚ್ಚರಿಕೆ ನೀಡಿದ್ದರೂ ತಾಲೂಕು ಆಡಳಿತ ಗಮನ ಹರಿಸದ ಹಿನ್ನೆಲೆಯಲ್ಲಿ, ರಸ್ತೆ ಪಕ್ಕದ ಮರದ ಒಣರೆಂಬೆಯೊಂದು ಮೂರು ವರ್ಷದ ಮಗುವಿನ ಸಾವಿಗೆ ಕಾರಣವಾದ ಘಟನೆ ಬುಧವಾರ ಸಂಜೆ ನಡೆದಿದೆ.

Advertisement

ಸಾಗರ ಸಿಗಂದೂರು ರಸ್ತೆಯಲ್ಲಿ ಸಂಜೆ ಆಟವಾಡುತ್ತಿದ್ದ ಮೂರು ವರ್ಷದ ಪ್ರತೀಕ್ಷಾ ಮೇಲೆ ಒಣರಂಬೆ ಬಿದ್ದು ಮುಖ, ತಲೆಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ಮಗುವಿಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಪ್ರಯೋಜನವಾಗಲಿಲ್ಲ. ಗಾರ್ಮೆಂಟ್‌ ಒಂದರಲ್ಲಿ ಕೆಲಸ ನಿರ್ವಹಿಸುವ ತಾಯಿ ಪ್ರೇಮಾ ಅವರು ಕೇವಲ ಆರು ತಿಂಗಳ ಹಿಂದೆ ತಮ್ಮ ಪತಿ ನಾಗರಾಜ ಅವರನ್ನು ಕೂಡ ಕಳೆದುಕೊಂಡಿದ್ದರು.

“ಉದಯವಾಣಿ’ 2019ರಲ್ಲಿಯೇ ಮೊದಲ ಬಾರಿಗೆ ಹಾಗೂ 2020ರ ಸೆ. 14ರಂದು ವಾಹನ ದಟ್ಟಣೆಯ  ಆವಿನಹಳ್ಳಿ- ಸಿಗಂದೂರು ರಸ್ತೆಯಲ್ಲಿ ಒಣ ಮರಗಳಿಂದ ಜೀವಕ್ಕೆ ಹಾನಿಯಾಗಬಹುದಾದ ಸಾಧ್ಯತೆಗಳ ಬಗ್ಗೆ ವರದಿ ಮಾಡಿತ್ತು. ಈ ವೇಳೆ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ಸೆ. 18ರಂದು ಕೆಲವು ಅಪಾಯಕಾರಿ ಮರಗಳನ್ನು ಉರುಳಿಸಿತ್ತು. ಆದರೆ 2019ರಲ್ಲಿ ತುಂಡಾದ ಮರದ ರೆಂಬೆ ಸೇರಿದಂತೆ ಹಸಿ  ಮರದಲ್ಲಿನ ಒಣ ರೆಂಬೆಗಳನ್ನು ತೆರವು ಮಾಡುವ ಕೆಲಸ ಮಾತ್ರ ನಡೆದಿರಲಿಲ್ಲ. ತುಂಡಾಗಿ ಜೋತಾಡುತ್ತಿರುವ ಒಣ ರೆಂಬೆ ಈಗಲೂ ಪುಡಿಪುಡಿಯಾಗಿ ಕೆಳಗೆ ಬೀಳುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಒಣ ರೆಂಬೆಗಳನ್ನು ನಿವಾರಿಸುವ ಕೆಲಸವನ್ನು ಮಾಡ ಲು ಮುಂದಾದರೆ ಅರಣ್ಯ ಇಲಾಖೆ ಅಧಿ ಕಾರಿಗಳು  ತಕರಾರು ಎತ್ತಿ ಲಂಚಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ಮಗುವಿನ ಜೀವ ತೆಗೆದ ರೆಂಬೆಯನ್ನು ತೆರವು ಮಾಡುವುದರಿಂದ ಅಲ್ಲಿನ ಜನ ಈ ಕಾರಣದಿಂದಲೇ ಹಿಂಜರಿದಿದ್ದಾರೆ. ಸ್ಥಳೀಯ ಕಲ್ಮನೆ ಗ್ರಾಪಂ, ತಾಪಂ, ಅರಣ್ಯ ಹಾಗೂ ಮೆಸ್ಕಾಂ ಈ ಬಗ್ಗೆ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಥಳೀಯ ರೋಹಿತ್‌ ಸಾಗರ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next