Advertisement

ಮಲ್ಲಾರು –ಪಕೀರಣಕಟ್ಟೆ ವಾರ್ಡ್‌ ಟ್ಯಾಂಕ್‌ ಕುಸಿಯುವ ಭೀತಿ

12:50 AM Jan 22, 2019 | Harsha Rao |

ಕಾಪು: ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು – ಪಕೀರಣಕಟ್ಟೆಯಲ್ಲಿ ನೂರಾರು ಮನೆಗಳಿಗೆ ನೀರುಣಿಸುವ ನೀರಿನ ಟ್ಯಾಂಕ್‌ನ ಬೀಮ್‌ ಶಿಥಿಲಗೊಂಡಿದ್ದು, ಇದರೊಂದಿಗೆ ಕಬ್ಬಿಣದ ಏಣಿ ತುಂಡಾಗಿ ನೇತಾಡುತ್ತಿರುವುದರಿಂದ ಗ್ರಾಮಸ್ಥರಲ್ಲಿ ಅಪಾಯದ ಆತಂಕ ಮೂಡಿಸಿದೆ.

Advertisement

ಬಿರುಕು ಬಿಟ್ಟಿದೆ ನೀರಿನ ಟ್ಯಾಂಕ್‌ 
  ಸಾವಿರಾರು ಲೀಟರ್‌ ನೀರನ್ನು ತುಂಬಿಸಿಕೊಂಡು, ಸುಮಾರು 120ಕ್ಕೂ ಅಧಿಕ ಮನೆಗಳಿಗೆ ವರ್ಷಪೂರ್ತಿ ನೀರುಣಿಸುವ  ಟ್ಯಾಂಕ್‌ನ ಅಡಿ ಭಾಗದ ಪಿಲ್ಲರ್‌ಗಳಲ್ಲಿ  ಅಲ್ಲಲ್ಲಿ ಸಿಮೆಂಟ್‌ ಕಳಚಿ, ರಾಡ್‌ಗಳು ತೋರುತ್ತಿವೆ. ಮಾತ್ರವಲ್ಲದೇ ಟ್ಯಾಂಕ್‌ ಸೋರಿಕೆಯಾಗುತ್ತಿರುವುದನ್ನೂ ಗ್ರಾಮಸ್ಥರು ಗಮನಿಸಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಟ್ಯಾಂಕ್‌ನ ಗುಣಮಟ್ಟ ಪರಿಶೀಲನೆ ನಡೆಯಬೇಕು ಎನ್ನುವ ಆಗ್ರಹ ಸ್ಥಳೀಯರದ್ದಾಗಿದೆ. 

ತುಂಡಾದ ಏಣಿ 
ಈ ಬೃಹದಾಕಾರದ ಟ್ಯಾಂಕ್‌ಗೆ ಭೂಮಿಯಿಂದ ತುದಿಯವರೆಗೆ ತೆರಳಲು ನಿರ್ಮಿಸಲಾಗಿದ್ದ ಕಬ್ಬಿಣದ ಮೆಟ್ಟಿಲುಗಳು ತುಕ್ಕು ಹಿಡಿದ ಪರಿಣಾಮ ಕಳೆದ ಮಳೆಗಾಲದಲ್ಲಿ ತುಂಡಾಗಿ ಬಿದ್ದಿತ್ತು. ತುಂಡಾಗಿ ಬಿದ್ದ ಕಬ್ಬಿಣದ ಮೆಟ್ಟಿಲುಗಳು ಕಳೆದ ಏಳು ತಿಂಗಳುಗಳಿಂದ ಗಾಳಿಯಲ್ಲಿ ನೇತಾಡುತ್ತಿದ್ದು, ಇಂದೋ ನಾಳೆಯೋ ಮುರಿದು ಬೀಳುವ ಲಕ್ಷಣಗಳು ಗೋಚರಿಸುತ್ತಿವೆ.

ಅಪಾಯಕ್ಕೆ ಆಹ್ವಾನ 
ಕಬ್ಬಿಣದ ಏಣಿ ಸಂಪೂರ್ಣ ಮುರಿದು ಬಿದ್ದರೆ ಟ್ಯಾಂಕ್‌ನ ಹತ್ತಿರದಲ್ಲೇ ಇರುವ ಹತ್ತಾರು ಮನೆಗಳಿಗೆ ಭಾರೀ ಅಪಾಯವುಂಟಾಗುವ ಸಾಧ್ಯತೆಗಳಿವೆ. ತುಂಡಾಗಿ ನೇತಾಡುವ ಏಣಿಯ ಅಡಿಯಲ್ಲೇ ಹೈಟೆನ್ಶನ್‌ ವಿದ್ಯುತ್‌ ವಯರ್‌ ಕೂಡಾ ಹಾದು ಹೋಗಿದ್ದು, ಕೆಳಕ್ಕೆ ಬಿದ್ದರೆ ಇದು ಮತ್ತಷ್ಟು ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ. ನೀರಿನ ಟ್ಯಾಂಕ್‌ನ ಕಬ್ಬಿಣದ ಏಣಿ ತುಂಡಾದ  ವಿಚಾರವನ್ನು ಈಗಾಗಲೇ ಸ್ಥಳೀಯರು ಪುರಸಭೆಯ ಮುಖ್ಯಾಧಿಕಾರಿ, ವಾರ್ಡ್‌ ಸದಸ್ಯರು ಸಹಿತ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಘಟನೆ ಸಂಭವಿಸಿ ಏಳು ತಿಂಗಳಾದರೂ ಪುರಸಭೆ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ಯಾಂಕ್‌ ಶುಚಿಯಾಗಿಲ್ಲ 
ಬೃಹತ್‌ ನೀರಿನ ಟ್ಯಾಂಕ್‌ನ ಮೇಲುಸ್ತುವಾರಿಗಾಗಿ ಒಬ್ಬರನ್ನು ನಿಯೋಜಿಸಿ, ಅವರ ಮೂಲಕ ಯಾವತ್ತಾದರೂ ಒಮ್ಮೆ ಟ್ಯಾಂಕ್‌ನ್ನು ಶುಚಿಗೊಳಿಸುವ ಪ್ರಕ್ರಿಯೆ ನಡೆಸುವುದು ವಾಡಿಕೆ. ಆದರೆ ಇಲ್ಲಿನ ಟ್ಯಾಂಕ್‌ನ ಮೇಲೆ ಹತ್ತುವ ಕಬ್ಬಿಣದ ಏಣಿ ತುಕ್ಕು ಹಿಡಿದು, ಗಾಳಿ ಮಳೆಗೆ ತುಂಡಾಗಿ ಬಿದ್ದು ಏಳು ತಿಂಗಳು ಕಳೆದಿದ್ದು, ಮೇಲೆ ಹೋಗಿ ಶುಚಿಗೊಳಿಸಲು ಸಾಧ್ಯವಿಲ್ಲದಂತಾಗಿದೆ. 
ಆ ಕಾರಣದಿಂದಾಗಿ ಟ್ಯಾಂಕ್‌ನ ಒಳಗಡೆಯೂ ಶುಚಿತ್ವ ಇಲ್ಲದಂತಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

Advertisement

ಸಮಸ್ಯೆ ಗಂಭೀರವಾಗಿ ಪರಿಗಣಿಸಿಲ್ಲ
 ಬೃಹತ್‌ ವಾಟರ್‌ ಟ್ಯಾಂಕ್‌ನ ಮೇಲೇರುವ ಏಣಿ ತುಂಡಾಗಿ ಬಿದ್ದು ಏಳು ತಿಂಗಳು ಕಳೆದಿದ್ದು, ತುಂಡಾಗಿ ನೇತಾಡುತ್ತಿರುವ ಬಗ್ಗೆ ಪುರಸಭೆಯ ವಾರ್ಡ್‌ ಸದಸ್ಯರ ಗಮಕ್ಕೆ ತರಲಾಗಿದ್ದರೂ ಈ ಸಮಸ್ಯೆಯನ್ನು ಯಾರೂ ಕೂಡಾ ಗಂಭೀರವಾಗಿ ತೆಗೆದುಕೊಂಡಿಲ್ಲ. ಪುರಸಭೆಯ ಅಧಿಕಾರಿಗಳ ಗಮನಕ್ಕೂ ಇದನ್ನು ತರಲಾಗಿದೆ. ಇದರಿಂದ ಸುತ್ತಮುತ್ತಲಿನ ಮನೆಯವರಲ್ಲಿ ಆತಂಕವಿದೆ. ಯಾವಾಗ ಮುರಿದು ಬೀಳುತ್ತದೆಯೋ ಎಂಬ ಹೆದರಿಕೆ ಜನರನ್ನು ಕಾಡುತ್ತಿದೆ. 
-ಹಮೀದ್‌, ಪಕೀರಣಕಟ್ಟೆ

ತೆರವು ಮಾಡುತ್ತೇವೆ
ನೀರಿನ ಟ್ಯಾಂಕ್‌ನ ಕಬ್ಬಿಣದ ಏಣಿ ತುಂಡಾಗಿ ನೇತಾಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ತೆರವು ಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಏಣಿಯನ್ನು ಟ್ಯಾಂಕ್‌ಗೆ ಹಾನಿಯಾಗದಂತೆ, ಆಧುನಿಕ ತಂತ್ರಜ್ಞಾನದ ನೆರವಿನಿಂದ ತೆರವುಗೊಳಿಸಿ ಜನರ ಆತಂಕವನ್ನು ದೂರ ಮಾಡಲು ಪ್ರಯತ್ನಿಸುತ್ತೇವೆ.
-ರಾಯಪ್ಪ, ಮುಖ್ಯಾಧಿಕಾರಿ, ಕಾಪು ಪುರಸಭೆ

– ರಾಕೇಶ್ ಕುಂಜೂರು 

Advertisement

Udayavani is now on Telegram. Click here to join our channel and stay updated with the latest news.

Next