Advertisement

ಕಾಪು ಪೇಟೆಯಲ್ಲಿ ಅಪಾಯಕಾರಿಯಾಗಿ ಚಾಚಿರುವ ಬೃಹತ್‌ ಮರಗಳು

02:50 AM Jul 04, 2018 | Karthik A |

ಕಾಪು : ನೂರಾರು ವಾಣಿಜ್ಯ ಮಳಿಗೆಗಳು ಮತ್ತು ಹತ್ತಾರು ವಸತಿ ಸಂಕೀರ್ಣಗಳನ್ನು ಹೊಂದಿರುವ, ಸಾವಿರಾರು ವಾಹನಗಳು ಓಡಾಡುವ ಮತ್ತು ನಿರಂತರ ಜನ ಸಂಚಾರ ಇರುವ ಕಾಪು ಪೇಟೆಯಲ್ಲಿರುವ ನೂರಾರು ವರ್ಷಗಳಷ್ಟು ಹಿರಿದಾದ ಬೃಹತ್‌ ಮರಗಳು ಸಾರ್ವಜನಿಕರಲ್ಲಿ ಮತ್ತು ಪೇಟೆಯ ಜನರಲ್ಲಿ ಆತಂಕ ಮೂಡಿಸಿವೆ. ಕಾಪು ಪೇಟೆಯ ಸಿದ್ಧಣ್ಣ ಮಹಲ್‌ ನ ಬಳಿಯಿಂದ ಹಿಡಿದು ಅನಂತ ಮಹಲ್‌ ವರೆಗಿನ ಸುಮಾರು 250 ಮೀಟರ್‌ ಅಂತರದ ದೂರದಲ್ಲಿ ಬೃಹದಾಕಾರದ 15 ಮರಗಳಿವೆ. ಬ್ರಿಟಿಷರ ಕಾಲದ್ದು ಎನ್ನಲಾಗುತ್ತಿರುವ ಪ್ರತೀ ಮರಗಳು ಕೂಡಾ ರಕ್ಕಸ ಗಾತ್ರದಲ್ಲಿ ಬೆಳೆದು ನಿಂತಿದ್ದು ಮರದ ಗೆಲ್ಲುಗಳು ಕಾಪು ಪೇಟೆಗೆ ಸಂಪೂರ್ಣ ನೆರಳಿನ ಆಶ್ರಯವನ್ನು ನೀಡುತ್ತಿವೆ.

Advertisement

ಪೇಟೆಯಲ್ಲಿರುವ ಹದಿನೈದು ಮರಗಳ ಪೈಕಿ 12 ದೇವದಾರು ಮತ್ತು 3 ಅಶ್ವತ್ಥ ಮರಗಳಿದ್ದು, ಮರಗಳ ಬೃಹತ್‌ ಕೊಂಬೆಗಳು ಇಡೀ ಪೇಟೆಯನ್ನು ಆವರಿಸಿಕೊಂಡಿದೆ. ಗಾಳಿ, ಮಳೆಗೆ ಯಾವುದೇ ಸಮಯದಲ್ಲಿ ಮರದ ಗೆಲ್ಲುಗಳು ಮುರಿದು ಬೀಳುವ ಸಾಧ್ಯತೆಗಳಿದ್ದು, ಇದರಿಂದಾಗಿ ಜೀವ ಹಾನಿ ಅಥವಾ ಮರಗಳ ಕೆಳಗೆ ನಿಲ್ಲಿಸಲಾಗುವ ವಾಹನಗಳು ಜಖಂ ಆಗುವ ಸಂಭವ ಹೆಚ್ಚಾಗಿದೆ.

ಅಪಾಯ ಯಾರಿಗೆ ? 
ಕಾಪು ಪೇಟೆಯಲ್ಲಿ ಹಲವಾರು ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳಿವೆ. ಬಸ್‌ ನಿಲ್ದಾಣ ಸಹಿತವಾಗಿ ಪೇಟೆಯಲ್ಲೇ ಮೂರು ರಿಕ್ಷಾ ನಿಲ್ದಾಣ, ಟೆಂಪೋ, ಕಾರು, ಮ್ಯಾಕ್ಸಿಕ್ಯಾಬ್‌ ತಂಗುದಾಣಗಳಿವೆ. ಪೇಟೆಯುದ್ದಕ್ಕೂ ವಿದ್ಯುತ್‌ ಹೈಟೆನ್ಶನ್‌ ವಯರ್‌ ಗಳು, ಟ್ರಾನ್ಸ್‌ಫಾರ್ಮರ್‌ ಕಂಬಗಳಿದ್ದು, ಡ್ರೈನೇಜ್‌ ಪಿಟ್‌ ಗಳೂ ಪೇಟೆಯಲ್ಲೇ ಸಾಗಿ ಹೋಗುತ್ತಿವೆ. ಪೇಟೆಯ ಮಣ್ಣು ಅತ್ಯಂತ ನಯವಾಗಿದ್ದು, ಕನಿಷ್ಠ ಒಂದು ಮರ ಬುಡಸಮೇತ ಬಿದ್ದರೂ ಸಂಪೂರ್ಣ ಭೂ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಒಂದು ದೊಡ್ಡ ಗೆಲ್ಲು ಮುರಿದು ಬಿದ್ದರೂ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು, ಅಪಾರ ಸೊತ್ತುಹಾನಿ, ಜೀವ ಹಾನಿಯುಂಟಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಪೇಟೆಯ ಉದ್ಯಮಿಗಳು.

ಮರ ತೆರವು ಕೂಡಾ ಸವಾಲಿನ ಸಂಗತಿ 
2002ರಲ್ಲಿ ಕಾಪು ಪೇಟೆ ಅಭಿವೃದ್ಧಿಯಾಗುವಾಗ ಮತ್ತು ಪೇಟೆಯ ರಸ್ತೆ ವಿಸ್ತರಣೆಯಾಗುವಾಗ ಹಲವಾರು ಮರಗಳನ್ನು ಕಡಿದು ತೆಗೆಯಲಾಗಿತ್ತು. ಇನ್ನು ಕೆಲವು ಮರಗಳು ತಾವಾಗಿಯೇ ಸತ್ತು ಹೋಗಿದ್ದು, ಖಾಸಗಿ ಪ್ರದೇಶದಲ್ಲಿದ್ದ ಕೆಲವು ಮರಗಳನ್ನು ಅವರವರು ತಮ್ಮ ಕಟ್ಟಡ, ಸಂಕೀರ್ಣಗಳನ್ನು ವಿಸ್ತರಿಸುವಾಗ ಕಡಿದು ತೆಗೆದಿದ್ದರು. ಆದರೆ ಈಗ ಉಳಿದಿರುವ ಮರಗಳು ಬೃಹದಾಕಾರದಲ್ಲಿ ಬೆಳೆದು ನಿಂತಿದ್ದು, ಆ ಮರಗಳನ್ನು 
ಕಡಿದು ತೆಗೆಯುವುದೂ ದೊಡ್ಡ ಸವಾಲೇ ಆಗಿದೆ.

ಮರ ಕಡಿಯುವುದು ಬೇಡ; ಗೆಲ್ಲು ತೆರವುಗೊಳಿಸಿರಿ 
ಇಲ್ಲಿ ವಿಸ್ತಾರವಾಗಿ ಬೆಳೆದಿರುವ ಬೃಹದಾಕಾರದ ಮರಗಳನ್ನು ತೆರವುಗೊಳಿಸಲು ಜನ ಭಾರೀ ವಿರೋಧವಿದೆ. ಆದರೆ ಅಪಾಯಕಾರಿಯಾಗಿ ಚಾಚಿಕೊಂಡಿರುವ ಮರದ ಗೆಲ್ಲುಗಳನ್ನು, ಕೊಂಬೆಗಳನ್ನು ಕತ್ತರಿಸುವುದಕ್ಕೆ ಜನರಿಂದ ಬೆಂಬಲ ವ್ಯಕ್ತವಾಗಿದೆ. ಕನಿಷ್ಠ ಗೆಲ್ಲುಗಳನ್ನಾದರೂ ತೆರವುಗೊಳಿಸುವ ಪ್ರಕ್ರಿಯೆ ಅತೀ ಶೀಘ್ರದಲ್ಲಿ ನಡೆಯಲಿ ಎಂಬ ಬೇಡಿಕೆ ಪೇಟೆಯ ಜನರದ್ದಾಗಿದೆ.

Advertisement

ಅಂದು ಹೆಲ್ಮೆಟ್‌ ಜೀವ ಉಳಿಸಿತ್ತು…
ಕಾಪು ಪೇಟೆಯಲ್ಲಿ ಬೈಕ್‌ ನಲ್ಲಿ ತೆರಳುತ್ತಿದ್ದಾಗ ಮೊಬೈಲ್‌ ರಿಂಗಣಿಸಿದ ಕಾರಣ ಬೈಕ್‌ ನಿಲ್ಲಿಸಿ ಮಾತನಾಡಲು ಅಣಿಯಾಗುತ್ತಿದ್ದಂತೆಯೇ ಮರದ ಒಣಗಿದ ಕೊಂಬೆಯೊಂದು ಮುರಿದು ಬಿದ್ದಿತ್ತು. ತಲೆಯಲ್ಲಿ ಹೆಲ್ಮೆಟ್‌ ಇದ್ದಿದ್ದರಿಂದ ಜೀವ ಉಳಿಯುವಂತಾಗಿದೆ. ಇಲ್ಲದೇ ಹೋಗಿದ್ದಲ್ಲಿ ಸತ್ತೇ ಹೋಗಬೇಕಿತ್ತು. ಕುತ್ತಿಗೆ ಉಳುಕಿದಂತಾಗಿ ಅಪಾರ ನೋವು ಅನುಭವಿಸಿದ್ದೇನೆ. ಮರ ಕಡಿಯಿರಿ ಎಂದು ಒತ್ತಾಯಿಸುವುದಿಲ್ಲ. ಆದರೆ ಕನಿಷ್ಠ ಪಕ್ಷ ಅದರ ಕೊಂಬೆಗಳನ್ನಾದರೂ ಕಡಿದರೆ ಜನರ ಜೀವ ಮತ್ತು ಆಸ್ತಿ ಪಾಸ್ತಿಯನ್ನು ರಕ್ಷಿಸಬಹುದು ಎನ್ನುತ್ತಾರೆ ಕೆಲವು ತಿಂಗಳ ಹಿಂದೆ ಕೊಂಬೆ ಮುರಿದು ಬಿದ್ದ ಪರಿಣಾಮ ನೋವುಂಡ ಉದ್ಯಮಿ ಕಲೀಂ ಸಾಹೇಬ್‌.

ಅಪಾಯದ ಸ್ಥಿತಿ ಕಡಿಮೆ; ಗೆಲ್ಲು ತೆರವಿಗೆ ಜಂಟಿ ಕಾರ್ಯಾಚರಣೆ 
ಕಾಪು ಪೇಟೆಯಲ್ಲಿ ಇರುವ ದೇವದಾರು ಮರಗಳು ಬೃಹದಾಕಾರದಲ್ಲಿ ಬೆಳೆದು ನಿಂತಿದ್ದು, ಅವುಗಳು ಬೀಳುವ ಸ್ಥಿತಿ ಕಡಿಮೆ. ರಿಕ್ಷಾ ನಿಲ್ದಾಣಗಳ ಮೇಲೆ ಸಣ್ಣಪುಟ್ಟ ಗೆಲ್ಲುಗಳು ಬಿದ್ದು ಹಾನಿಗೊಳಗಾದ ಬಗ್ಗೆ ದೂರುಗಳಿದ್ದವು. ಇದರಿಂದ ಹಾನಿಯುಂಟಾಗುತ್ತಿರುವ ಬಗ್ಗೆ ಅಧಿಕೃತವಾಗಿ ಯಾರೂ ಕೂಡಾ ದೂರು ನೀಡಿಲ್ಲ. ದೂರು ಬಂದರೂ ಮರ ಕಡಿಯಲು ಅದರದ್ದೇ ಆದ ಕಾನೂನುಗಳಿವೆ. ಜನರಿಗೆ ಇದರಿಂದಾಗಿ ತೊಂದರೆಯಾಗುತ್ತಿದ್ದರೆ, ಭಯ ನಿವಾರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಪುರಸಭೆ ಮತ್ತು ಮೆಸ್ಕಾಂ ಜೊತೆಗೂಡಿ ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸಲು ಪ್ರಯತ್ನಿಸಲಾಗುವುದು .
– ನಾಗೇಶ್‌ ಬಿಲ್ಲವ, ಅರಣ್ಯಾಧಿಕಾರಿ

ಕೊಂಬೆ ಕಡಿದು ಅಪಾಯ ತಪ್ಪಿಸಿ 
ಕರಾವಳಿಯ ವಿವಿಧೆಡೆ ಇತ್ತೀಚಿನ ದಿನಗಳಲ್ಲಿ ಗಾಳಿ, ಮಳೆಗೆ ಮರಗಳು ಬಿದ್ದು ಅಪಾರ ಹಾನಿಯುಂಟಾದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದ್ದರಿಂದ ಕಾಪು ಪುರಸಭೆ ಮತ್ತು ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ ಕಾಪು ಪೇಟೆಯಲ್ಲಿರುವ ಬೃಹತ್‌ ಮರಗಳ ಕೊಂಬೆಗಳನ್ನು ಕಡಿದು ಸಾರ್ವಜನಿಕರ ಆಸ್ತಿ, ಪಾಸ್ತಿ, ಜೀವ ಹಾನಿಯಾಗುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು.
-ಅಕ್ಬರ್‌ ಅಲಿ, ನಿವೃತ್ತ ಸರ್ವೆ ಅಧಿಕಾರಿ

ಜನರಿಂದ ವಿರೋಧ ಸಾಧ್ಯತೆ 
ಕಾಪು ಪೇಟೆಯಲ್ಲಿ ನೆರಳಿನಾಶ್ರಯ ನೀಡುವ ಮರಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದು ಅಸಾಧ್ಯ. ಬೃಹತ್‌ ಮರಗಳ ಒಂದೆರಡು ಗೆಲ್ಲುಗಳನ್ನು ತೆರವುಗೊಳಿಸಬೇಕಿದ್ದರೂ ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿದೆ. ಅದರ ಜೊತೆಗೆ ಪುರಸಭೆ ವತಿಯಿಂದ ಮರ ಕಡಿಯಲು ಮುಂದಾದಲ್ಲಿ ಸಾರ್ವಜನಿಕರಿಂದಲೂ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಯೋಚಿಸಿ, ನಿರ್ಧಾರ ತೆಗೆದುಕೊಳ್ಳಬೇಕಿದೆ. 
– ರಾಯಪ್ಪ, ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next