Advertisement

ರಾಜ್ಯದಲ್ಲಿ ಖತರ್ನಾಕ್‌ ಸ್ಥಿತಿ, ಕಾಂಗ್ರೆಸ್‌ ಬಗ್ಗೆ ಹುಷಾರಾಗಿರಿ: ಮೋದಿ ವಾಗ್ಧಾಳಿ!

12:43 AM Apr 21, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನ ಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಪರೋಕ್ಷವಾಗಿ ಪ್ರಸ್ತಾವಿಸಿರುವ ಪ್ರಧಾನಿ ಮೋದಿ ಅವುಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ರಾಜ್ಯದಲ್ಲಿ “ಖತರ್ನಾಕ್‌’ ಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್‌ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಕರೆ ನೀಡಿದ್ದಾರೆ. ಜತೆಗೆ ಕರ್ನಾಟಕಕ್ಕೂ ಬುಲೆಟ್‌ ರೈಲು ಸೇವೆ ಒದಗಿಸುವ ಕನಸು ಬಿತ್ತಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಬೃಹತ್‌ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಎರಡು ಘಟನೆಗಳು, ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾವಿಸಿ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಬೆಂಗಳೂರನ್ನು ಕಾಂಗ್ರೆಸ್‌ ಟ್ಯಾಂಕರ್‌ ಮಾಫಿಯಾದ ದವಡೆಗೆ ದೂಡಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಅನಂತರ ಖತರ್ನಾಕ್‌ ಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾಗುತ್ತಿದೆ. ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್‌ ಸ್ಫೋಟವಾಗುತ್ತಿದೆ. ಭಜನೆ, ಕೀರ್ತನೆಗಳನ್ನು ಕೇಳಿದರೆ ಹಲ್ಲೆ ನಡೆಸಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಕಾಂಗ್ರೆಸ್‌ ಸರಕಾರದ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬರ್ಥದಲ್ಲಿ ಟೀಕೆ ನಡೆಸಿದ್ದಾರೆ.

ಟೇಪ್‌ ರೆಕಾರ್ಡರ್‌, ಟ್ರ್ಯಾಕ್‌ ರೆಕಾರ್ಡ್‌
ಎನ್‌ಡಿಎ ಹಾಗೂ ಐಎನ್‌ಡಿಐಎ ಒಕ್ಕೂಟದ ಪ್ರಚಾರ ವೈಖರಿ ಬಗ್ಗೆ ಇದೇ ಸಂದರ್ಭದಲ್ಲಿ ಪ್ರಸ್ತಾವಿಸಿದ ಪ್ರಧಾನಿಯವರು, ಐಎನ್‌ಡಿಐಎ ಒಕ್ಕೂಟ ಹಳೆಯ ಟೇಪ್‌ ರೆಕಾರ್ಡರ್‌ ಹಿಡಿದುಕೊಂಡು ಪ್ರಚಾರ ನಡೆಸುತ್ತಿದ್ದರೆ, ನಾನು “ಟ್ರ್ಯಾಕ್‌ ರೆಕಾರ್ಡ್‌’ ಸಮೇತ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನೀವು ಎರಡೂ ಒಕ್ಕೂಟಗಳ ಪ್ರಚಾರ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿ; ಅವರು ಕೇವಲ ಮೋದಿ, ಮೋದಿ ಪರಿವಾರದ ವಿರುದ್ಧ ಆರೋಪ ನಡೆಸುತ್ತಿದ್ದಾರೆ. ಆದರೆ ನಾನು 21 ಶತಮಾನಕ್ಕೆ ತಕ್ಕಂತೆ ಭಾರತದ ವಿಕಾಸ, ಸಮೃದ್ಧಿಯ ಜತೆಗೆ ವಿಶ್ವಮಟ್ಟದಲ್ಲಿ ದೇಶದ ವರ್ಚಸ್ಸು ಹೆಚ್ಚಿಸುವುದು ಹೇಗೆಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಮೇರಾ ಭಾರತ್‌, ಮೇರಾ ಪರಿವಾರ್‌ (ನನ್ನ ಭಾರತ, ನನ್ನ ಪರಿವಾರ) ಎಂದು ವ್ಯಾಖ್ಯಾನಿಸಿದರು.

ಸೋಷಿಯಲ್‌, ಫಿಸಿಕಲ್‌, ಡಿಜಿಟಲ್‌
ತಮ್ಮ ಅಭಿವೃದ್ಧಿಯ ವಿಧಾನವನ್ನು, “ಸೋಷಿಯಲ್‌, ಫಿಸಿಕಲ್‌, ಡಿಜಿಟಲ್‌’ ಎಂದು ವರ್ಗೀಕರಿಸಿದ ಮೋದಿ, ಕಳೆದ ಹತ್ತು ವರ್ಷಗಳ ಸಾಧನೆಯನ್ನು ಜನತೆಯ ಮುಂದಿಟ್ಟರು. 2014, 2019ರಲ್ಲಿ ನೀವು ನೀಡಿದ ಒಂದೊಂದು ಮತದಿಂದ ದೇಶವನ್ನು ಸದೃಢವಾಗಿ ಕಟ್ಟಿದ್ದೇನೆ. ದೇಶಕ್ಕಾಗಿ ಇಷ್ಟೆಲ್ಲ ಮಾಡಿದ್ದು ಮೋದಿಯಲ್ಲ, ನೀವು. 2004ರ ಸುಮಾರಿಗೆ ವಿಶ್ವದ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತವನ್ನು ಈಗ ವಿಶ್ವದ ಐದು ಪ್ರಭಾವಿ ಆರ್ಥಿಕತೆಯುಳ್ಳ ದೇಶಗಳ ಸಾಲಿಗೆ ತಂದು ನಿಲ್ಲಿಸಲಾಗಿದೆ. 2014ಕ್ಕೆ ಹಿಂದೆ ರಾಷ್ಟ್ರದ ಬ್ಯಾಂಕ್‌ಗಳು ಸಂಕಷ್ಟದಲ್ಲಿದ್ದವು. ಇಂದು ದೇಶದೊಂದಿಗೆ ಮೈತ್ರಿ ಬಾಂಧವ್ಯ ಹೆಚ್ಚಿಸಿಕೊಳ್ಳಲು ವಿದೇಶಗಳು ಹಪಹಪಿಸುತ್ತಿವೆ. ಬೃಹತ್‌ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದು ಬರುತ್ತಿದೆ. ರಫ್ತು ಮತ್ತು ಉತ್ಪಾದನೆಯಲ್ಲೂ ಮುಂದಿದ್ದೇವೆ. ಈಗ ಭಾರತ ಯಾರನ್ನೂ ಅನುಸರಿಸುವ ದೇಶವಲ್ಲ; ಮುನ್ನಡೆಸುವ ದೇಶ ಎಂದರು.

Advertisement

ನಾನು ಸಣ್ಣ ಹಳ್ಳಿಯ ಬಡ ಕುಟುಂಬದಿಂದ ಬಂದವನು. ಬದುಕಿನ ಬವಣೆಗಳ ಬಗ್ಗೆ ಅರಿತವನು. ಹೀಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಜೀವನಮಟ್ಟವನ್ನು ಸುಧಾರಿಸಲು ಈ ಅವಧಿಯಲ್ಲಿ ಆದ್ಯತೆ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ವಸತಿ ಸೌಕರ್ಯವನ್ನು ವೃದ್ಧಿಸಲಾಗಿದೆ. ದೇಶದಲ್ಲಿ ಒಂದು ಕೋಟಿ ಬಡವರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದ್ದು, ಬೆಂಗಳೂರಿನಲ್ಲಿ 84 ಸಾವಿರ ಮನೆ ನಿರ್ಮಿಸಿ ಕೊಡಲಾಗಿದೆ. ಮನೆ ನಿರ್ಮಾಣದ ಸಾಲಕ್ಕೆ, ಬಡ್ಡಿ ಸಹಾಯಧನ ನೀಡಿದ್ದರಿಂದ ದೇಶಾದ್ಯಂತ ಮಧ್ಯಮ ವರ್ಗದ ಕುಟುಂಬಗಳಿಗೆ 60 ಸಾವಿರ ಕೋಟಿ ರೂ. ಉಳಿತಾಯ ಮಾಡಿ ಕೊಡಲಾಗಿದೆ. ಮಧ್ಯಮ ವರ್ಗದ ಕನಸು ಹಾಳಾಗಬಾರದು. ಇದಕ್ಕಾಗಿ ಸಶಕ್ತ ರೆರಾ ಕಾಯಿದೆ ಜಾರಿಗೆ ತರಲಾಗಿದ್ದು, ಬೆಂಗಳೂರಿನಲ್ಲಿ ರೆರಾ ಅಡಿ 3 ಸಾವಿರ ಮನೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ಗ್ರಾಹಕರ ಶೋಷಣೆಯನ್ನು ತಪ್ಪಿಸಲಾಗಿದೆ ಎಂದು ವಿವರಿಸಿದರು.

ಸೌರ ಯೋಜನೆಯಿಂದ ವಿದ್ಯುತ್‌ ಬಿಲ್‌ ಶೂನ್ಯ
ಕಾಂಗ್ರೆಸ್‌ ಕಾಲದಲ್ಲಿ ಆಗುತ್ತಿದ್ದ ತೆರಿಗೆ ಶೋಷಣೆ ಬಗ್ಗೆ ಪ್ರಸ್ತಾವಿಸಿದ ಮೋದಿಯವರು, ಹಿಂದೆ ಕೇವಲ 2 ಲಕ್ಷ ರೂ.ವರೆಗೆ ಇದ್ದ ಆದಾಯ ತೆರಿಗೆ ವಿನಾಯಿತಿಯನ್ನು ಈಗ 7 ಲಕ್ಷ ರೂ.ವರೆಗೆ ವಿಸ್ತರಿಸಲಾಗಿದೆ. 2014ಕ್ಕೆ ಮುನ್ನ ಬೇರೆ ಬೇರೆ ರೀತಿಯಲ್ಲಿ ತೆರಿಗೆ ನೀಡಬೇಕಿತ್ತು. ಜಿಎಸ್‌ಟಿ ಬಂದ ಬಳಿಕ ಪರೋಕ್ಷ ತೆರಿಗೆ ಇಲ್ಲ. 400 ರೂ. ಇದ್ದ ಎಲ್‌ಇಡಿ ಬಲ್ಬ್ 40 ರೂ.ಗಳಿಗೆ ಇಳಿಕೆಯಾಗಿದೆ. ನಾವು ಸಂಕಲ್ಪ ಪತ್ರದಲ್ಲಿ ಹೇಳಿರುವ ಸೌರಯೋಜನೆ ಅಳವಡಿಸಿಕೊಂಡರೆ ವಿದ್ಯುತ್‌ ಬಿಲ್‌ ಶೂನ್ಯ ಪ್ರಮಾಣಕ್ಕೆ ಇಳಿಕೆಯಾಗುತ್ತದೆ. ನಿಮ್ಮ ವಿದ್ಯುತ್‌ ವಾಹನಗಳಿಗೂ ರೀಚಾರ್ಜ್‌ ಮಾಡಿಕೊಳ್ಳಬಹುದು, ಜತೆಗೆ ವಿದ್ಯುತ್‌ ಮಾರಾಟ ಮಾಡಬಹುದು ಎಂದಿದ್ದಾರೆ.

ಬಡ, ಮಧ್ಯಮವರ್ಗದ ಆರೋಗ್ಯ ವೆಚ್ಚ ತಗ್ಗಿಸಲು ತಂದ ಆಯುಷ್ಮಾನ್‌ ಭಾರತ್‌ ಗೇಮ್‌ ಚೇಂಜರ್‌ ಆಗಿದೆ. ಕೋಟ್ಯಂತರ ಜನರಿಗೆ 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಸೇವೆ ಸಿಕ್ಕಿದೆ. ಅದನ್ನು ಪ್ರಣಾಳಿಕೆಯಲ್ಲಿ ಮುಂದುವರಿಸಿದ್ದೇವೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ಸೌಲಭ್ಯ ವಿಸ್ತರಿಸುತ್ತೇವೆ. ಪಿಎಂ ಜನೌಷಧಿ ಕೇಂದ್ರದಿಂದ 30 ಸಾವಿರ ಕೋಟಿ ರೂ. ಉಳಿತಾಯ ಆಗಿದೆ. ಮೊಬೈಲ್‌ ಡೇಟಾ ದರ ಒಂದು ಜಿ.ಬಿ.ಗೆ 250 ರೂ. ಇತ್ತು, ಇಂದು 10 ರೂ. ಆಸುಪಾಸಿನಲ್ಲಿದೆ. 500-700 ರೂ. ಬರುತ್ತಿದ್ದ ಮಾಸಿಕ ಮೊಬೈಲ್‌ ಬಿಲ್‌ ಇಂದು 50-70 ರೂ. ಆಗಿದೆ. ಡೇಟಾ ನಿಯಂತ್ರಣ ಕಾಯ್ದೆ ತರಲಾಗಿದೆ. ಎಐ ಯುಗದಲ್ಲಿ ಅಗ್ಗದಲ್ಲಿ ಡೇಟಾ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಮೋದಿ ವಾಗ್ಬಾಣಗಳು
-ಐಎನ್‌ಡಿಐಎ ಹಳೆಯ ಟೇಪ್‌ ರೆಕಾರ್ಡರ್‌ ಹಿಡಿದುಕೊಂಡು ಪ್ರಚಾರ ನಡೆಸುತ್ತಿದೆ. ನಾನು ಟ್ರ್ಯಾಕ್‌ ರೆಕಾರ್ಡ್‌ ಸಮೇತ ನಿಮ್ಮ ಮುಂದೆ ನಿಂತಿದ್ದೇನೆ.
-2004ರ ಸುಮಾರಿಗೆ ವಿಶ್ವದ ಆರ್ಥಿಕತೆ ಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತವನ್ನು ಈಗ ವಿಶ್ವದ ಐದು ಪ್ರಭಾವಿ ಆರ್ಥಿಕತೆಯ ದೇಶಗಳ ಸಾಲಿಗೆ ತಂದು ನಿಲ್ಲಿಸಲಾಗಿದೆ.
-2014ಕ್ಕೂ ಮೊದಲು ರಾಷ್ಟ್ರದ ಬ್ಯಾಂಕ್‌ಗಳು ಸಂಕಷ್ಟದಲ್ಲಿದ್ದವು. ಇಂದು ದೇಶ ದೊಂದಿಗೆ ಮೈತ್ರಿ ಬಾಂಧವ್ಯ ಹೆಚ್ಚಿಸಿಕೊಳ್ಳಲು ವಿದೇಶಗಳು ಹಪಹಪಿಸುತ್ತಿವೆ.

ಕರ್ನಾಟಕಕ್ಕೆ ಬುಲೆಟ್‌,
ಹೈಸ್ಪೀಡ್‌ ಟ್ರೈನ್‌: ಮೋದಿ ಭರವಸೆ
ಬೆಂಗಳೂರಿಗೆ ಬುಲೆಟ್‌ ಹಾಗೂ ಹೈಸ್ಪೀಡ್‌ ರೈಲು ಸೌಲಭ್ಯ ಸಿಗುವ ದಿನಗಳು ದೂರವಿಲ್ಲ ಎಂದು ಮೋದಿ ಹೇಳಿದ್ದಾರೆ. ಎನ್‌ಡಿಎ ಅಧಿಕಾರಕ್ಕೆ ಬಂದ ಅನಂತರ ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಣೆ ಬಗ್ಗೆ ಪ್ರಸ್ತಾವಿಸಿ, ಹಿಂದೆ 17 ಕಿ.ಮೀ. ಇದ್ದ ಮೆಟ್ರೋ 70 ಕಿ.ಮೀ.ಗೂ ಹೆಚ್ಚಾಗಿದೆ. ಹಳದಿ ಮಾರ್ಗವೂ ಪೂರ್ಣ ಗೊಳ್ಳುತ್ತಿದೆ. ಸಬ್‌ಅರ್ಬನ್‌ ರೈಲು, ವರ್ತುಲ ರಸ್ತೆಯ ಪ್ರಯೋಜನವೂ ಸಿಗಲಿದೆ. ನಿಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಜಗತ್ತೇ ಮಾತನಾಡುತ್ತಿದೆ. ರೈಲು, ವಿಮಾನದ ಪ್ರಯಾಣ ಹಿತಾನುಭವ ನೀಡುತ್ತಿದೆ ಎಂದೂ ಹೇಳಿದ್ದಾರೆ.

ಕಾಂಗ್ರೆಸ್‌ ಖಾಲಿ ಚೊಂಬು, ಮೋದಿ ಅಕ್ಷಯ ಪಾತ್ರೆ
ಕಾಂಗ್ರೆಸ್‌ ನಾಯಕರು ರಾಷ್ಟ್ರದ ಸಂಪತ್ತು ಲೂಟಿ ಮಾಡಿ ಖಾಲಿ ಮಾಡಿದ್ದ ಚೊಂಬನ್ನು ಪ್ರಧಾನಿ ನರೇಂದ್ರ ಮೋದಿ 10 ವರ್ಷಗಳಲ್ಲಿ ಅಕ್ಷಯ ಪಾತ್ರೆ ಮಾಡಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಹಿಂದೆ 10 ವರ್ಷ ಅಧಿಕಾರ ನಡೆಸಿತು. ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿದ್ದರು. ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದರು. ಇವರು ರಾಷ್ಟ್ರದ ಸಂಪತ್ತನ್ನು ಲೂಟಿ ಮಾಡಲಿಲ್ಲವೇ? 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣ ಯಾರ ಕಾಲದಲ್ಲಿ ನಡೆದದ್ದು? ಇವರ ಕಾಲದಲ್ಲಿ ಚೊಂಬು ಖಾಲಿ ಆಗಲಿಲ್ಲವೇ?
-ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಬಿಜೆಪಿ ಆಡಿದ್ದನ್ನು ಮಾಡಲಿಲ್ಲ
ಹಳ್ಳಿಗಳಲ್ಲಿ ಕೈಗೆ ಚೊಂಬು ಕೊಟ್ಟರು ಎನ್ನುವಂತೆ ಬಿಜೆಪಿಯವರು 15 ಲಕ್ಷ ರೂ. ಕೊಡುತ್ತೇವೆ, ಉದ್ಯೋಗ ಕೊಡುತ್ತೇವೆ, ರೈತರ ಆದಾಯ ಡಬಲ್‌ ಮಾಡುತ್ತೇವೆ ಎಂದರೂ ಮಾಡಲಿಲ್ಲ. ಈ ವಿಚಾರಗಳನ್ನು ಇಟ್ಟುಕೊಂಡು ಖಾಲಿ ಚೊಂಬಿನ ಜಾಹೀರಾತು ಕೊಟ್ಟಿದ್ದೇವೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next