Advertisement

ಅನಾಹುತಕ್ಕೂ ಮುನ್ನವೇ ಇಲಾಖೆ ಸುರಕ್ಷತೆ ಕಲ್ಪಿಸಲಿ

03:30 AM Dec 23, 2018 | Karthik A |

ಕಟಪಾಡಿ: ಪ್ರಾಣಾತಂಕದ ಭೀತಿಯನ್ನು ಸೃಷ್ಟಿಸುವ ಅಧಿಕ ಭಾರದ ಕಲ್ಲುಗಳನ್ನು ಹೇರಿಕೊಂಡು ಅಪಾಯಕಾರಿಯಾಗಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತು ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೂಗೊಂದು ಕೇಳಿ ಬರುತ್ತಿದೆ. ಕಟಪಾಡಿ- ಶಿರ್ವ ಸಂಪರ್ಕದ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ಹೇರಿಕೊಂಡು ದಿನವೊಂದರ ಕನಿಷ್ಟ  150-200 ಟ್ರಿಪ್‌ ವಾಹನ ಸಂಚರಿಸುತ್ತಿದ್ದು, ಇದರಿಂದ ಕೆಳಕ್ಕೆ ಬಿದ್ದ ಕಲ್ಲು ಆತಂಕವನ್ನು ಸೃಷ್ಟಿಸಿದೆ. ಸುಭಾಸ್‌ ನಗರ-ಅಚ್ಚಡ ರೈಲ್ವೇ ಮೇಲ್ಸೇತುವೆಯ ಕಣ್ಣಳತೆಯ ದೂರದಲ್ಲಿ ತಿರುವೊಂದರ ಬಳಿ ಮಂಗಳವಾರದಂದು  ದೊಡ್ಡ ಗಾತ್ರದ ಕಲ್ಲು ಬಿದ್ದಿದ್ದು, ಯಾರೋ ರಾಜ್ಯ ಹೆದ್ದಾರಿಯಿಂದ ಪಕ್ಕಕ್ಕೆ ಸರಿಸಿ ಇರಿಸಲಾಗಿದ್ದು ಇನ್ನೂ ಸ್ಥಳದಿಂದ ತೆರವುಗೊಳಿಸಿಲ್ಲ.

Advertisement

ಕಟಪಾಡಿಯತ್ತ ಲೋಡ್‌ ಹೊತ್ತೂಯ್ಯುವ ಈ ಟಿಪ್ಪರ್‌ನಿಂದ ಕೆಳಕ್ಕೆ ಬಿದ್ದ ಈ ಕಲ್ಲು ರಸ್ತೆಯ ಮಗುದೊಂದು ಭಾಗಕ್ಕೆ ಎಸೆಯಲ್ಪಟ್ಟಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಹಿಂಭಾಗದಲ್ಲಿ ವಾಹನ ಬರುತ್ತಿದ್ದರೆ ಅಥವಾ ವಿರುದ್ಧ ದಿಕ್ಕಿನಿಂದಲೂ ವಾಹನ ಬರುತ್ತಿದ್ದರೆ, ಜನರು ಸಂಚರಿಸುತ್ತಿದ್ದರೆ ಪ್ರಾಣಾತಂಕ ಸಂಭವಿಸುವ  ಭೀತಿಯನ್ನು ಸಾರ್ವಜನಿಕರು ಮತ್ತು ಸ್ಥಳೀಯರು ವ್ಯಕ್ತ ಪಡಿಸುತ್ತಿದ್ದಾರೆ. ಅತಿಯಾದ ವೇಗ, ಸುಸ್ಥಿತಿಯಲ್ಲಿ ಇರದ ವಾಹನಗಳು ಆತಂಕವನ್ನು ಸೃಷ್ಟಿಸುತ್ತಾ ಸಾಗುತ್ತಿವೆೆ. ಇದೆಲ್ಲದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸೂಕ್ತ ರೀತಿಯ ಕ್ರಮ ಕೈಗೊಂಡು ರಾಜ್ಯ ಹೆದ್ದಾರಿಯ ಸಂಚಾರಿಗಳಿಗೆ ಸುರಕ್ಷತೆಯನ್ನು ಕಲ್ಪಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಕಡಿವಾಣ ಅಗತ್ಯ
ಕಲ್ಲು ಹೇರಿಕೊಂಡು ಓಡಾಡುವ ವಾಹನಗಳ ನಾಗಾಲೋಟಕ್ಕೆ ಕಡಿವಾಣ ಹಾಕಬೇಕಿದೆ. ಕಲ್ಲು ಟಿಪ್ಪರೊಂದರಿಂದ ಜಾರಿ ರಸ್ತೆಗೆ ಬಿದ್ದಿದ್ದು, ಅಜಾಗರೂಕತೆಯನ್ನು ತೋರಿಸುತ್ತಿದೆ. ಇವರ ಅಜಾಗ್ರತೆಯಿಂದ ಯಾರೋ ಪ್ರಾಣ ಕಳಕೊಳ್ಳುವ ಮುನ್ನ ಇಲಾಖೆಯ ಅಧಿಕಾರಿಗಳು ಸುರಕ್ಷತೆ ಒದಗಿಸಲಿ.
-ಮ್ಯಾಕ್ಸಿಂ ಆಲ್ವ, ಸಮಾಜ ಸೇವಕ, ಸುಭಾಸ್‌ ನಗರ

ಸುರಕ್ಷೆ: ನಿಗಾ ವಹಿಸಿ
ಕಲ್ಲು ಹೇರಿಕೊಂಡು ತೆರಳುವ ವಾಹನಗಳ ಸುಸ್ಥಿತಿಯ ಬಗ್ಗೆ ಗಮನ ಹರಿಸಬೇಕಾದ ಆವಶ್ಯಕತೆ ಇದೆ. ಧಾರ್ಮಿಕ ಕ್ಷೇತ್ರಗಳು, ಶೈಕ್ಷಣಿಕ ಕೇಂದ್ರಗಳು ಹೆಚ್ಚಿರುವುದರಿಂದ ಹಾಗೂ ಹಬ್ಬ ಹರಿದಿನಗಳು ಬರಲಿರುವುದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ, ಜನ ಸಂಚಾರ ಅಧಿಕ ಇದೆ. ಹಾಗಾಗಿ ಈ ರಾಜ್ಯ ಹೆದ್ದಾರಿಯಲ್ಲಿ  ಸಂಚಾರದ ಸುರಕ್ಷೆಯ ಬಗ್ಗೆ ನಿಗಾ ವಹಿಸಬೇಕಿದೆ.
– ಚಂದ್ರ ಪೂಜಾರಿ, ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ, ಕುರ್ಕಾಲು ಸುಭಾಸ್‌ ನಗರ

Advertisement

Udayavani is now on Telegram. Click here to join our channel and stay updated with the latest news.

Next