Advertisement

ಅಪಾಯಕಾರಿಯಾಗಿದೆ ಕಲ್ಲುಗುಡ್ಡೆ –ಕೊಣಾಜೆ ರಸ್ತೆ

10:52 PM Nov 20, 2019 | mahesh |

ಕಲ್ಲುಗುಡ್ಡೆ: ಇಚ್ಲಂಪಾಡಿ – ಕಲ್ಲುಗುಡ್ಡೆ – ಕಡ್ಯ ಕೊಣಾಜೆ ಸಂಪರ್ಕ ಕಲ್ಪಿಸುವ ಸಡಕ್‌ ರಸ್ತೆಯ ಕಲ್ಲುಗುಡ್ಡೆ – ಕೊಣಾಜೆ ರಸ್ತೆಯ ಹಲವೆಡೆ ರಸ್ತೆಯ ಅಂಚುಗಳಲ್ಲಿ ತಡೆಗೋಡೆಗಳಿಲ್ಲದೆ ಅಪಘಾತಗಳು ಸಂಭವಿಸುತ್ತಿದ್ದು, ಅಪಾಯಕಾರಿಯಾಗಿದೆ. ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.

Advertisement

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ – ಕೊಣಾಜೆ ರಸ್ತೆಯಲ್ಲಿ ರೆಂಜಿಲಾಡಿ ಗ್ರಾಮದ ಮಾರಪ್ಪೆ ಎಂಬಲ್ಲಿಯ ವರೆಗೆ ಸಡಕ್‌ನಲ್ಲಿ ರಸ್ತೆ ಅಭಿವೃದ್ಧಿಗೊಂಡಿದ್ದು, ಆದರೆ ಈ ರಸ್ತೆಯ ಹಲವೆಡೆ ತೋಡಿನ ಬದಿಗಳಲ್ಲಿ ತಡೆಗೋಡೆಗಳಿಲ್ಲದೆ ಸವಾರರು ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಚಲಾಯಿಸಬೇಕಾಗಿದೆ. ಈ ರಸ್ತೆಯ ಮಾರಪ್ಪೆ, ಕೇಪುಂಜ, ನಡುಗುಡ್ಡೆ, ಕಲಾ°ರು, ಹರ್ಪಾಳ ಎನ್ನುವಲ್ಲಿ ಅಪಾಯವಿದೆ. ಕೆಲವೆಡೆ ರಸ್ತೆ ತಿರುವುಗಳಲ್ಲಿ ಪೊದರುಗಳು ಬೆಳೆದಿದ್ದು, ವಾಹನ ಸವಾರರು ರಸ್ತೆಯ ಅಂಚನ್ನು ಗುರುತಿಸುವುದೇ ಕಷ್ಟವಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು, ಶಾಲಾ ಬಸ್‌ಗಳು ಸಂಚರಿಸುತ್ತಿವೆ.

ಅಪಘಾತ ವಲಯ
ರಸ್ತೆಯ ತಿರುವುಗಳಲ್ಲಿ ವಾಹನ ಸವಾರರು ವೇಗವಾಗಿ ಬಂದಲ್ಲಿ ತಿರುವುಗಳನ್ನು ನಿಭಾಯಿಸಲು ಕಷ್ಟಕರವಾಗಿದ್ದು, ಮುಂದೆ ಹೋದರೆ ತೋಡಿಗೆ ಬೀಳುವ ಪರಿಸ್ಥಿತಿ ಇದೆ. ಈ ಪ್ರದೇಶಗಳಲ್ಲಿ ಹಲವು ಬಾರಿ ವಾಹನ ಅಪಘಾತಗಳು ಸಂಭವಿಸಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಆಗಿಲ್ಲ. ಆದರೆ ವಾಹನಗಳಿಗೆ ಧಕ್ಕೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ವಾರದ ಹಿಂದೆ ಕಾರೊಂದು ನಿಯಂತ್ರಣ ತಪ್ಪಿ ತೋಡಿನ ಬದಿಯ ವರೆಗೆ ಹೋಗಿ ಮರದಲ್ಲಿ ಸಿಲುಕಿಕೊಂಡು ಬಚಾವಾಗಿತ್ತು. ಅದರಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.

ಬೇಕಿದೆ ತಡೆಗೋಡೆ
ಕೊಣಾಜೆ ಸಂಪರ್ಕ ರಸ್ತೆಯ ವಿವಿಧೆಡೆ ತೋಡಿನ ಸಮೀಪದಿಂದ ರಸ್ತೆ ನಿರ್ಮಿಸಿದ್ದರೂ ತಡೆಗೋಡೆ ನಿರ್ಮಿಸಿಲ್ಲ. ಅಗತ್ಯವಾದಲ್ಲಿಯೂ ಈ ವ್ಯವಸ್ಥೆ ಮಾಡಿಲ್ಲ. ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ತೋಡಿನ ಬದಿಯಲ್ಲಿ ತಡೆಗೋಡೆ ನಿರ್ಮಿಸುವಂತೆ ಅಥವಾ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆಯೂ ಕುಸಿತ
ಇದೇ ರಸ್ತೆಯ ರೆಂಜಿಲಾಡಿಯ ಕೇಪುಂಜ ಬಳಿ ನಡುಗುಡ್ಡೆ ಯಲ್ಲಿ ಹರಿಯುತ್ತಿರುವ ತೋಡಿನ ಸಮೀಪ ರಸ್ತೆ ಅಂಚಿನ ವರೆಗೆ ರಸ್ತೆ ಕುಸಿತಗೊಂಡಿದೆ. ಸರಿಪಡಿಸುವ ಗೋಜಿಗೆ ಸಂಬಂಧಪಟ್ಟವರು ಇನ್ನೂ ಮುಂದಾಗಿಲ್ಲ. ಈ ಬಗ್ಗೆ ಪಂಚಾಯತ್‌ ಸಭೆಯಲ್ಲಿಯೂ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿತ್ತು.

Advertisement

 ಸೂಕ್ತ ಕ್ರಮ ಅಗತ್ಯ
ಈ ರಸ್ತೆಯ ಹಲವು ಕಡೆಗಳಲ್ಲಿ ಅಪಾಯಕಾರಿ ಸ್ಥಳಗಳಿದ್ದು, ಖಾಸಗಿಯವರು ಹಾಗೂ ನಾನೂ ಗ್ರಾ.ಪಂ.ಗೆ ಕ್ರಮಕ್ಕೆ ಹಲವು ಬಾರಿ ಮನವಿ ಮಾಡಿದ್ದೆ. ಅಧಿಕ ಅನುದಾನ ಅಗತ್ಯವಿದೆ ಎಂದು ತಿಳಿದುಬಂದಿದೆ. ಶಾಸಕರ ಅಥವಾ ಇನ್ನಾವುದೋ ಮೂಲದಿಂದ ಅನುದಾನ ತರುವಲ್ಲಿ ಪ್ರಯತ್ನ ನಡೆಯಬೇಕಿದೆ.
– ರಜಿತಾ ಪದ್ಮನಾಭ ಕೇಪುಂಜ, ಗ್ರಾ.ಪಂ. ಸದಸ್ಯೆ ನೂಜಿಬಾಳ್ತಿಲ

 ಮನವಿ ಮಾಡಲಾಗಿದೆ
ರಸ್ತೆಯ ಅಪಾಯಕಾರಿ ಸ್ಥಿತಿ – ಗತಿಗಳ ಬಗ್ಗೆ ಸಾರ್ವಜನಿಕರು ಗ್ರಾಮಸಭೆಯಲ್ಲಿ ಅರ್ಜಿ ನೀಡಿ ದ್ದಾರೆ. ಕೊಣಾಜೆ ರಸ್ತೆಯ ಅಪಾಯ ಕಾರಿ ಕಡೆಗಳಲ್ಲಿ ತಡೆಗೋಡೆ ನಿರ್ಮಿಸಲು ಅನುದಾನ ಕ್ಕಾಗಿ ತಾ.ಪಂ.ಗೆ ಮನವಿ ಮಾಡಲಾಗಿದೆ. ಗ್ರಾಮ ಪಂಚಾಯತ್‌ ಅನುದಾನ ದಿಂದ ಈ ಕೆಲಸ ಅಸಾಧ್ಯ.
– ಸದಾನಂದ ಗೌಡ ಸಾಂತ್ಯಡ್ಕ, ಗ್ರಾ.ಪಂ. ಅಧ್ಯಕ್ಷರು ನೂಜಿಬಾಳ್ತಿಲ

– ದಯಾನಂದ ಕಲ್ನಾರು

Advertisement

Udayavani is now on Telegram. Click here to join our channel and stay updated with the latest news.

Next