Advertisement
ಶಿರಾಡಿ, ಚಾರ್ಮಾಡಿ ಸಹಿತ ಪ್ರಮುಖ ಘಾಟಿ ರಸ್ತೆಗಳು ವಿವಿಧ ಕಾರಣಗಳಿಂದ ಬಂದ್ ಆಗಿದ್ದ ಕಾರಣ ಘನ ವಾಹನಗಳು ಬಾಳೆಬರೆ ಘಾಟಿ ಯನ್ನು ಅವಲಂಬಿಸಿದ್ದವು. ರಾಜ್ಯ ಹೆದ್ದಾರಿಯಾಗಿದ್ದರೂ ರಸ್ತೆಯ ಗುಣಮಟ್ಟ ಬಹಳ ಚೆನ್ನಾಗಿರದ ಕಾರಣ ಘನ ವಾಹನಗಳ ಸಂಚಾರ ತುಸು ಕಷ್ಟ. ಮಿತಿಮೀರಿದ ಸರಕು ಹೇರಿದ ವಾಹನಗಳು ಸಾಗುವಾಗ ಕೆಲವೆಡೆ ಭೂಮಿ ಕಂಪಿಸುತ್ತಿದೆ. ಇದರ ಪರಿಣಾಮ ರಸ್ತೆ ಹಾಗೂ ರಸ್ತೆಯ ಬದಿ ಕುಸಿಯುತ್ತಿದೆ.
ಪ್ರಮುಖ ಘಾಟಿ
ಬಳ್ಳಾರಿ, ದಾವಣಗೆರೆ ಮತ್ತಿತರ ಜಿಲ್ಲೆಗಳಿಂದಲೂ ಮಂಗಳೂರಿಗೆ ಸಂಪರ್ಕ ಹೊಂದಿರುವ ಪ್ರಮುಖ ಘಾಟಿ ರಸ್ತೆ ಇದು. ನಿತ್ಯವೂ 1,500ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು, ಕನಿಷ್ಠ ದುರಸ್ತಿಯನ್ನೂ ನಡೆಸಿಲ್ಲ. ರಸ್ತೆಯ ಒಂದು ಪಾರ್ಶ್ವದಲ್ಲಿ ಸುಮಾರು 6 ಕಿ.ಮೀ.ವರೆಗೆ ಒಂದು ಸಾವಿರಕ್ಕೂ ಅಧಿಕ ಅಡಿ ಆಳದ ಪ್ರಪಾತವಿದೆ. ಅಲ್ಲಲ್ಲಿ ನಿರ್ಮಿಸಿರುವ ತಡೆಗೋಡೆಗಳಿಗೆ ವಾಹನಗಳು ಢಿಕ್ಕಿಯಾಗಿ ನಾಶವಾಗಿವೆ. ಒಟ್ಟು 12 ಕಿ.ಮೀ. ವ್ಯಾಪ್ತಿಯಲ್ಲಿ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ಬಸ್ ಚಾಲಕರು. ರಸ್ತೆಯನ್ನು ಕೆಲವೆಡೆ ಅಗಲ ಗೊಳಿಸ ಲಾಗಿದ್ದರೆ, ಇನ್ನು ಕೆಲವೆಡೆ ಕಾಂಕ್ರೀಟ್ ಹಾಕಲಾಗಿದೆ. ಒಂದೆಡೆ ಬಂಡೆ ಕಲ್ಲಿನಿಂದ ಆ ವೃತವಾದ ಗುಡ್ಡ, ಇನ್ನೊಂದು ಬದಿಯಲ್ಲಿ ಆಳವಾದ ಕಮರಿ ಇರುವುದರಿಂದ ಚರಂಡಿ ನಿರ್ಮಿಸಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಬೃಹದಾಕಾರದ ಮರಗಳು, ಗಿಡಗಂಟಿಗಳಿಂದಾಗಿ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ತೋರುತ್ತಿಲ್ಲ. ಎಚ್ಚರಿಕೆ ಫಲಕಗಳೂ ಇಲ್ಲದೆ ಅಪಘಾತಗಳು ಸಂಭವಿಸುತ್ತಿವೆ. ದಿನೇ ದಿನೆ ವಾಹನಗಳ ಸಂಚಾರ ಹೆಚ್ಚುತ್ತಿದ್ದು, ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹ. ನಿರ್ವಹಣೆ ಹೊಣೆ ನಮ್ಮದಲ್ಲ
ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದವರಿಗೆ ಈ ಸಾಲಿನಲ್ಲಿ ಕಾಮಗಾರಿಗಾಗಿ ರಸ್ತೆಯನ್ನು ಹಸ್ತಾಂತರಿಸಲಾಗಿದೆ. ಕುಂದಾಪುರದ ವಡೇರಹೋಬಳಿಯಿಂದ ಉಡುಪಿ ಜಿಲ್ಲೆಯ ಗಡಿ ಭಾಗದವರೆಗೆ 45 ಕಿ.ಮೀ. ರಸ್ತೆ ಕಾಮಗಾರಿಗೆ ಸಿಆರ್‌ಎಫ್ ನಿಧಿಯಿಂದ 10 ಕೋ.ರೂ. ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾಮಗಾರಿ ಮುಗಿಸಿ, ಎರಡು ವರ್ಷ ನಿರ್ವಹಿಸಿದ ಮೇಲೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುತ್ತದೆ. ಕಾಮಗಾರಿ ಪೂರ್ಣ ಆಗದಿರುವುದರಿಂದ ರಸ್ತೆಯ ಹೊಣೆ ಅವರದ್ದು. ಓವರ್ ಲೋಡ್ ಘನ ವಾಹನಗಳ ಸಂಚಾರದ ಬಗ್ಗೆ ಆರ್‌ಟಿಒ ಮೂಲಕ ಸರಕಾರಕ್ಕೆ ಬರೆದಿದ್ದೇವೆ.
– ಚಂದ್ರಶೇಖರ್, ಎಇ, ಲೋಕೋಪಯೋಗಿ ಇಲಾಖೆ ಉಡುಪಿ ಜಿಲ್ಲೆ ಉಪ ವಿಭಾಗ
Related Articles
ಘಾಟಿ ರಸ್ತೆಗೆ ಡಾಮರು ಹಾಗೂ ತಡೆಗೋಡೆ ನಿರ್ಮಾಣದ ಬಗ್ಗೆ ಸರಕಾರಕ್ಕೆ ಬರೆದಿದ್ದು, ಒಪ್ಪಿಗೆ ಸಿಕ್ಕಿದ ಕೂಡಲೇ ಕಾಮಗಾರಿ ಆರಂಭಿಸುತ್ತೇವೆ.
– ಸುರೇಶ್, ಸೆಕ್ಷನ್ ಆಫೀಸರ್, ಲೋಕೋಪಯೋಗಿ ಇಲಾಖೆ ಹೊಸನಗರ ಉಪ ವಿಭಾಗ
Advertisement
*ಸತೀಶ್ ಆಚಾರ್ ಉಳ್ಳೂರ್