Advertisement

ಬೈಂದೂರು ಹೊಸ ಬಸ್‌ ನಿಲ್ದಾಣದ ಹೆದ್ದಾರಿಯಲ್ಲಿ ಕಾದಿದೆ ಅಪಾಯ

12:23 PM May 26, 2019 | Team Udayavani |

ಬೈಂದೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹೊಸ ಬಸ್‌ ನಿಲ್ದಾಣದ ಪ್ರಸ್ತುತ ಪರಿಸ್ಥಿತಿ ಜನರಲ್ಲಿ ಅಪಾಯದ ಆತಂಕವನ್ನು ಹುಟ್ಟು ಹಾಕಿದ್ದು, ಸಂಬಂಧಿಸಿದ ಇಲಾಖೆಯವರು ಕೂಡಲೇ ರಸ್ತೆ‌ ವಿಭಾಜಕಗಳನ್ನು ಅಳವಡಿಸುವುದರ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳೂ ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದ್ದು, ಪಾಲಕರು ಆತಂಕ ಪಡುವಂತಾಗಿದೆ.

Advertisement

ಹೊಸ ಬಸ್‌ ನಿಲ್ದಾಣ ಅಪಘಾತದ ತಾಣ
ಇಲ್ಲಿನ ಹೊಸ ಬಸ್‌ ನಿಲ್ದಾಣ ಹೆಚ್ಚು ಜನಜಂಗುಳಿ ಇರುವ ಪ್ರಮುಖ ಪ್ರದೇಶ. ತಹಶೀಲ್ದಾರರ ಕಛೇರಿ, ರೈಲ್ವೆ ನಿಲ್ದಾಣ, ಲೋಕೋಪಯೋಗಿ ಇಲಾಖೆ, ಪಶು ಚಿಕಿತ್ಸಾಲಯ, ಐ.ಟಿ.ಐ. ಕಾಲೇಜು, ಕೃಷಿ ಕೇಂದ್ರದ ಜತೆಗೆ ಒಟ್ಟು 9 ಶಾಲೆಗಳಿಗೆ ವಿದ್ಯಾರ್ಥಿಗಳು ಇಲ್ಲಿಂದಲೇ ತೆರಳಬೇಕಾಗಿದೆ. ಪ್ರತಿದಿನ ಸರಾಸರಿ 2,500 ವಿದ್ಯಾರ್ಥಿಗಳು ಹಾಗೂ 25ಕ್ಕೂ ಅಧಿಕ ಶಾಲಾ ವಾಹನಗಳು ಈ ಜಂಕ್ಷನ್‌ ಮೂಲಕ ಸಂಚರಿಸುತ್ತವೆ. ಆದರೆ ಕನಿಷ್ಠ ಪಕ್ಷ ಒಂದೂ ರಸ್ತೆ ವಿಭಾಜಕ ತಡೆ ಅಳವಡಿಸದಿರುವುದು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಜೀವದ ಬಗ್ಗೆ ಇಲಾಖೆ ಹಾಗೂ ಕಂಪೆನಿ ತೆಗೆದುಕೊಂಡ ಗಂಭೀರತೆಯನ್ನು ಬಿಂಬಿಸುತ್ತದೆ.

ಇಲ್ಲಿರುವ ಸಮಸ್ಯೆಗಳು?
ಹೊಸ ಬಸ್‌ ನಿಲ್ದಾಣದ ಜಂಕ್ಷನ್‌ ಉತ್ತರ ದಿಕ್ಕಿನಿಂದ ಒತ್ತಿನೆಣೆ ಗುಡ್ಡದ ಇಳಿಜಾರು ಹೊಂದಿದೆ. ಈ ಭಾಗದಿಂದ ಬರುವ ವಾಹನಗಳು ಅತಿ ವೇಗದಿಂದ ಬರುತ್ತದೆ. ಪೂರ್ವದಿಂದ ರೈಲ್ವೇ ಹಾಗೂ ಮಧ್ದೋಡಿ ರಸ್ತೆಯಿಂದ ಉತ್ತರದ ಹೆದ್ದಾರಿ ಸಂಪರ್ಕಿಸುವಾಗ ಎರಡು ಕಡೆ ಬರುವ ವಾಹನಗಳು ಗೋಚರಿಸುವುದಿಲ್ಲ. ಮಾತ್ರವಲ್ಲದೆ ದ್ವಿಮುಖ ರಸ್ತೆಗಳಲ್ಲಿ ವಾಹನ ಸವಾರರಿಗೆ ಒಂದು ರಸ್ತೆಯನ್ನು ತಪ್ಪಿಸಿಕೊಂಡು ಇನ್ನೊಂದು ರಸ್ತೆಗೆ ಬರುವುದೆಂದರೆ ಹರಸಾಹಸವೇ ಸರಿ.ವಿವಿಧ ಕಚೆೇರಿ, ಆಸ್ಪತ್ರೆಗಳಿಗೆ ಇಲ್ಲಿ ತಿರುವು ಪಡೆಯಬೇಕಾಗಿರುವುದರಿಂದ ಸಾರ್ವಜನಿಕರು ಗೊಂದಲ ಪಡಬೇಕಾಗಿದೆ.

ಇಲ್ಲಿ ಇದುವರೆಗೆ ಹಲವಾರು ಅಪಘಾತಗಳು ನಡೆದಿವೆ. ಜೂನ್‌ನಲ್ಲಿ ಶಾಲೆ ಆರಂಭವಾದ ಬಳಿಕ ಶಾಲಾ ವಾಹನ ಸಂಚಾರ ಮತ್ತು ಪಾದಚಾರಿಗಳಿಗೂ ಸಾಕಷ್ಟು ತೊಂದರೆಯಾಗಲಿದೆ. ಒಂದೆಡೆ ವಿದ್ಯಾರ್ಥಿಗಳು ಗುಂಪು ಗುಂಪಾಗಿ ರಸ್ತೆ ದಾಟುವಾಗ ವಾಹನಗಳಿಂದ ಅಪಘಾರವಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಹೆದ್ದಾರಿ ಇಲಾಖೆ ಮತ್ತು ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಮುಂಜಾಗ್ರತೆ ವಹಿಸಬೇಕು
ಈ ಕುರಿತು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಶಾಲೆ ಆರಂಭವಾಗುತ್ತದೆ. ಹೀಗಾಗಿ ಅಪಾಯ ಸಂಭವಿಸಿದ ಬಳಿಕ ಪರಿತಪಿಸುವುದಕ್ಕಿಂತ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಲ್ಲಿ ಉತ್ತಮ.
-ಮಣಿಕಂಠ ದೇವಾಡಿಗ , ಬೈಂದೂರು

Advertisement

ಅಧಿಕಾರಿಗಳಿಗೆ ತಿಳಿಸಲಾಗಿದೆ
ಈಗಾಗಲೇ ಸಹಾಯಕ ಕಮಿಷನರ್‌ ಸಮ್ಮುಖದಲ್ಲೆ ಐ.ಆರ್‌.ಬಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. (ಪೂಟ್‌ಬ್ರಿಜ್‌) ನಡೆದಾಡುವ ಮೇಲ್ಸೆತುವೆ ನಿರ್ಮಾಣ ಮಾಡಲು ಮನವಿಯನ್ನೂ ನೀಡಿದ್ದೇವೆ. ಆದರೆ ಐ.ಆರ್‌.ಬಿ. ಕಂಪೆನಿಯವರು ಅಂಡರ್‌ಪಾಸ್‌ ಮೂಲಕ ವಾಹನ ಸಂಚರಿಸಬೇಕು ಎನ್ನುತ್ತಾರೆ. ಹೀಗಾಗಿ ಜಿಲ್ಲಾಡಳಿತದ ನಿರ್ದೇಶನದಂತೆ ಸಾರ್ವಜನಿಕರ ಬೇಡಿಕೆಗೆ ಕಂಪೆನಿ ಸ್ಪಂಧಿಸಬೇಕಾಗಿದೆ.

-ಪರಮೇಶ್ವರ ಗುನಗ, ವೃತ್ತ ನಿರೀಕ್ಷಕರು ಬೈಂದೂರು

-  ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next