ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಮೂಡುಬಿದಿರೆ ಪೇಟೆಯಲ್ಲಿ ಅಲ್ಲಿ ಹಳೆಯ ಕಟ್ಟಡಗಳು ಶಿಥಿಲಾಲಯಗಳಾಗಿ ಮಾರ್ಪಾಡಾಗಿವೆ. ಕಾಲದ ಹೊಡೆತಕ್ಕೆ, ಮಾಲಕರ ದಿವ್ಯ ನಿರ್ಲಕ್ಷ್ಯಕ್ಕೆ, ವಾಸ ಇಲ್ಲವೇ ವ್ಯವಹಾರ ನಿರತರಾಗಿರುವವರ ಸೋಮಾರಿತನದಿಂದಾಗಿ ವೃದ್ಧಾಪ್ಯದಂಚಿನಲ್ಲಿರುವಂತೆ ಗೋಚರಿಸುತ್ತಿವೆ.
ಪೇಟೆಯಲ್ಲಿ ಹಲವು ಕಟ್ಟಡಗಳನ್ನು ಕೆಡವಿ, ಮಾರ್ಗದಂಚಿನಿಂದ ದೂರಸರಿದು ಹೊಸ ಕಟ್ಟಡಗಳಾಗಿ ಮರುಹುಟ್ಟು ಪಡೆದು ಆಧುನಿಕ ಮೂಡುಬಿದಿರೆಗೆ ಹೊಸ ಸ್ವರೂಪವನ್ನು ತರುತ್ತಿವೆ. ಇದೇ ವೇಳೆಗೆ ಅಕ್ಕಪಕ್ಕದ ಕಟ್ಟಡಗಳು ಘಾಸಿಗೊಂಡೋ, ಆಯುಷ್ಯ ಮುಗಿಯುತ್ತಿರುವ ಲಕ್ಷಣಗಳಿಂದಲೋ ಏನೋ ಇನ್ನೇನು ನೆಲಕ್ಕೆರಗುವ ಸನ್ನಾಹದಲ್ಲಿರುವಂತಿವೆ.
ಹೇಳಿ ಕೇಳಿ ಇದು ರಾಷ್ಟ್ರೀಯ ಹೆದ್ದಾರಿ ಬದಿಯ ಕಟ್ಟಡಗಳು. ಹಾಗಾಗಿ ಹೆದ್ದಾರಿ ಇಲಾಖೆಯವರು ಗಮನ ಹರಿಸಬೇಕಾಗಿತ್ತು.
ಮೂಡುಬಿದಿರೆ ಹಳೆ ಪೊಲೀಸ್ ಠಾಣೆ ಹೀಗೆ ಕುಸಿಯುತ್ತ ಬಂದಾಗ ಸಾರ್ವಜನಿಕರ ಆಗ್ರಹಕ್ಕೆ ಮಣಿದು ಅದನ್ನು ತೆರವುಗೊಳಿಸಲಾಗಿತ್ತು. ಈಗ ಅದರ ಎದುರಿನ ಮಾರ್ಗದಲ್ಲಿ ಮಣ್ಣಿನ ಗೋಡೆಯ ಕಟ್ಟಡ ಇಂಥದ್ದೇ ಅಪಾಯಕಾರಿ ಸನ್ನಿವೇಶದಲ್ಲಿದೆ. ಹಾಗಿರುವುದು ಕಾಣಬಾರದೆಂದೋ ಏನೋ ಅದರ ಎದುರು ಯಾವುದೋ ಖಾದ್ಯ ತೈಲದ ಜಾಹೀರಾತು ಫ್ಲೆಕ್ಸ್ ವಿರಾಜಮಾನವಾಗಿದೆ.
ಸ್ವಲ್ಪ ಮೇಲಕ್ಕೆ ಬಂದರೆ, ಬಲಗಡೆಯಲ್ಲಿ ಒಂದು ತೀರಾ ಶಿಥಿಲಗೊಂಡ ಮನೆಯ ಒಂದು ಭಾಗದ ಅವಶೇಷಗಳು ಮಾರ್ಗದ ಬದಿಯಲ್ಲಿಯೇ ರಾಶಿ ಬಿದ್ದಿವೆ. ಇನ್ನೂ ಸ್ವಲ್ಪ ಮುಂದೆ ಬಂದರೆ, ಎಂಸಿಎಸ್ ಸೊಸೈಟಿ ಎದುರಿನ ಮಾರ್ಗದ ಬದಿಯಲ್ಲಿ ಮಣ್ಣಿನಲ್ಲಿ ರಚಿಸಲಾದ ಒಂದು ಮಹಡಿಯ ಕಟ್ಟಡ ಜೀರ್ಣವಾಗಿ ಇಂದೋ ನಾಳೆಯೋ ಎಂಬ ಸ್ಥಿತಿಯಲ್ಲಿದೆ. ದಾರಿಹೋಕರು, ವಾಹನಗಳ ಮೇಲೆ ಬಿದ್ದರೆ ಗಂಭೀರ ಪ್ರಸಂಗ ಎದುರಾದೀತು.
ಕಳೆದ ಪುರಸಭೆ ಮಾಸಿಕ ಅಧಿವೇಶನದಲ್ಲಿ
ಈ ಅಪಾಯಕಾರಿ ಕಟ್ಟಡಗಳ ಸ್ಥಿತಿಗತಿಗಳ ಬಗ್ಗೆ ಸದಸ್ಯರು ಕಾಳಜಿ ವ್ಯಕ್ತಪಡಿಸಿದ್ದರು. ಇಂದೋ ನಾಳೆಯೋ ಎಂಬಂತಿರುವ ಈ ಕಟ್ಟಡಗಳ ಬಗ್ಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದರು.
ಸೂಕ್ತ ಕ್ರಮ: ರಾಷ್ಟ್ರೀಯ ಹೆದ್ದಾರಿ ಬದಿಯ ಈ ಹಳೆಯ ಕಟ್ಟಡಗಳು ಶಿಥಿಲಗೊಂಡಿದ್ದು ಅವುಗಳ ಸುರಕ್ಷೆಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಕಟ್ಟಡಗಳ ಮಾಲಕರಿಗೆ ನೋಟೀಸ್ ಹಾಗೂ ಸೂಕ್ತ ಕ್ರಮ ಜರಗಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೆ ಪತ್ರ ಬರೆಯಲಾಗುವುದು. –
ಇಂದು ಎಂ., ಪುರಸಭೆ ಮುಖ್ಯಾಧಿಕಾರಿ