Advertisement

ಅಂಚೆ ಕಚೇರಿಯ ಮುಂದೆ ಅಪಾಯಕಾರಿ ಸೇತುವೆ

11:58 AM Aug 02, 2018 | Team Udayavani |

ನಗರ : ಮಹಡಿ ಮೇಲೆ ಕಚೇರಿ ಹೊಂದಿರುವ ಪುತ್ತೂರಿನ ಪ್ರಧಾನ ಅಂಚೆ ಕಚೇರಿಯನ್ನು ಸಂಪರ್ಕಿಸುವ ವೇ ಬ್ರಿಡ್ಜ್ ಅಪಾಯಕಾರಿಯಾಗಿ ಪರಿಣಮಿಸಿದೆ. ಅಪಾಯವನ್ನು ಸೂಚಿಸಲು ಇಲಾಖೆಯೇ ಕೆಂಪು ಪಟ್ಟಿಯನ್ನೂ ಕಟ್ಟಿದೆ. ಪುತ್ತೂರು ತಾಲೂಕಿನ ಪ್ರಧಾನ ಅಂಚೆ ಕಚೇರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲೇ ಇದೆ. ಮುಖ್ಯರಸ್ತೆಗೆ ತಾಗಿಕೊಂಡೇ ಇರುವ ಈ ಅಂಚೆ ಕಚೇರಿಗೆ ದಿನಂಪ್ರತಿ ನೂರಾರು ಜನರು ಭೇಟಿ ಕೊಡುತ್ತಾರೆ. ಅವರು ಇದೇ ವೇ ಬ್ರಿಡ್ಜ್ ಮೂಲಕ ಕಚೇರಿ ಒಳಗಡೆ ಬರಬೇಕು. ಇಂತಹ ಸಂದರ್ಭ ಯಾವುದೇ ದುರಂತ ಸಂಭವಿಸದೇ ಇರಲೆಂದು, ಕೆಂಪು ಪಟ್ಟಿಯನ್ನು ಇಲಾಖೆ ಕಟ್ಟಿದೆ.

Advertisement

ಇದೇ ಅಂಚೆ ಕಚೇರಿಯ ಕೆಳ ಅಂತಸ್ತಿನಲ್ಲಿ ವಿಭಾಗೀಯ ಕಚೇರಿ ಇದೆ. ನೂರಾರು ನೌಕರರು, ಅಧಿಕಾರಿಗಳು ಇಲ್ಲಿ ದುಡಿಯುತ್ತಿದ್ದಾರೆ. ತಾಲೂಕಿನ ಅಷ್ಟೂ ಅಂಚೆ ಕಾಗದಗಳು, ಕೇಂದ್ರ ಸರಕಾರದ ವಿವಿಧ ಸೌಲಭ್ಯಗಳು ಇಲ್ಲಿಂದಲೇ ಬಟಾವಣೆ ಆಗಬೇಕು. ಹೀಗಿರುವ ಪುತ್ತೂರು ಪ್ರಧಾನ ಅಂಚೆ ಕಚೇರಿ ಸುಭದ್ರ ಆಗಿರಲೇ ಬೇಕು.

ಮೊದಲು ಬಸ್‌ ನಿಲ್ದಾಣದ ಬಳಿಯಲ್ಲಿ ಪ್ರಧಾನ ಅಂಚೆ ಕಚೇರಿ ಇತ್ತು. ವಿಶಾಲವಾದ ಹೊಸ ಕಟ್ಟಡ ನಿರ್ಮಾಣ ಆಗುತ್ತಿದ್ದಂತೆ, ಕಚೇರಿಯನ್ನು ಅಲ್ಲಿಗೇ ಶಿಫ್ಟ್‌ ಮಾಡಲಾಯಿತು. ಇದೀಗ ಅಂಚೆ ಇಲಾಖೆಯ ಎಲ್ಲ ಕೆಲಸಗಳು ಅಲ್ಲೇ ನಡೆಯುತ್ತಿವೆ. ಇದಕ್ಕೆ ಸುಭದ್ರ ವ್ಯವಸ್ಥೆಯೊಂದನ್ನು ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ವೇ ಬ್ರಿಡ್ಜ್ ನ  ಇಕ್ಕೆಲಗಳ ತಡೆಗೋಡೆ ಕುಸಿಯುವ ಹಂತದಲ್ಲಿದೆ. ಒಂದಸ್ತಿನ ಮೇಲಿರುವ ಕಚೇರಿಯ ವೇ ಬ್ರಿಡ್ಜ್  ತಡೆಗೋಡೆ ಬಿದ್ದರೆ ಇನ್ನಷ್ಟು ಅಪಾಯಕಾರಿ. ಕಚೇರಿಗೆ ಭೇಟಿ ಕೊಡುವವರು, ಅರಿಯದೇ ತಡೆಗೋಡೆ ಸಮೀಪ ಹೋಗಿ ಅಪಾಯ ಮೈಮೇಲೆ ಎಳೆದುಕೊಳ್ಳದಂತೆ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಆದರೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಕೊಳ್ಳಬೇಕಾದ ಅನಿವಾರ್ಯತೆ ಇದೆ.

ಮಳೆಗಾಲದಲ್ಲಿ ಕಾಮಗಾರಿ ನಡೆಸುವುದು ತೀರಾ ಕಷ್ಟ. ಆದ್ದರಿಂದ ತಡೆಗೋಡೆಗೆ ಸಮರ್ಪಕ ಕಾಯಕಲ್ಪ ಕೊಡಲು ಕಷ್ಟವಾದಂತೆ ತೋರುತ್ತಿದೆ. ಮಳೆ ಬಿಟ್ಟ ಬಳಿಕವಷ್ಟೇ ಇದರ ಕಾಮಗಾರಿ ನಡೆಬೇಕು. ಇಲಾಖೆಯ ಸ್ವಂತ ನಿಧಿಯನ್ನು ಬಳಸಿಕೊಂಡು, ಈ ವೇ ಬ್ರಿಡ್ಜ್ ನ ರಿಪೇರಿ ಕಾಮಗಾರಿ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.

Advertisement

ಸೋರುತ್ತಿದೆ
ಒಳಭಾಗ ಸೋರುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಚೇರಿ ಮಾತ್ರವಲ್ಲ, ಅಂಚೆ ಮಾಸ್ತರರ ವಸತಿಗೃಹವೂ ಸೋರಿಕೆ ಕಂಡುಬಂದಿದೆ. ವಿಶಾಲವಾದ ಕಟ್ಟಡದಲ್ಲಿ ಕೆಲಸ ನಿರ್ವಹಿಸುವ ಸಿಬಂದಿಗಳಿಗೆ ಮಳೆನೀರು ಒಳಗೆ ಬೀಳುವುದರಿಂದ ತೊಂದರೆ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಇಲಾಖೆಯ ಹಿರಿಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಕಚೇರಿ ಒಳಭಾಗ ಸೋರುತ್ತಿಲ್ಲ ಎಂದಿದ್ದಾರೆ.

ಕಟ್ಟಡ ಕಾಮಗಾರಿ ಕಷ್ಟ 
ಅಂಚೆ ಇಲಾಖೆಯ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳುವುದು ತುಸು ಕಷ್ಟವೇ. ಸುರಿಯುತ್ತಿರುವ ಮಳೆಗೆ ಕೆಲಸ ಕೈಗೊಳ್ಳುವುದು ಕಷ್ಟ. ಹಾಗೆಂದು ಮಳೆ ನಿಂತ ಬಳಿಕ, ಅಧಿಕಾರಿಗಳು ಉದಾಸೀನ ತೋರಿಸಿದರೆ, ಮುಂದಿನ ವರ್ಷಕ್ಕೆ ಇನ್ನಷ್ಟು ಕಷ್ಟ ಆಗಲಿದೆ. ಇದಕ್ಕೆ ಅನುದಾನ ಬಿಡುಗಡೆ ಮಾಡಬೇಕಾಗಿರುವುದು ಕರ್ನಾಟಕ ಅಂಚೆ ವೃತ್ತ ಕಚೇರಿಯ ಅಧಿಕಾರಿಗಳು. ಇಲ್ಲಿಂದಲೇ ಕಾಮಗಾರಿ ಮಂಜೂರಾತಿ, ಅನುದಾನ ಸಿಗಬೇಕು. ಆದ್ದರಿಂದ ಈ ಕಾಮ ಗಾರಿ ನಡೆಸುವುದು ಸ್ವಲ್ಪ ತಡವಾಗುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ.

 ತತ್‌ಕ್ಷಣ ರಿಪೇರಿ
ಪ್ರಥಮ ಮಹಡಿಯಲ್ಲಿರುವ ಅಂಚೆ ಕಚೇರಿ ಒಳ ಹೋಗುವ ಸೇತುವೆಯ ಎರಡೂ ತಡೆಗೋಡೆಗಳು ಕುಸಿಯುವ ಹಂತ ತಲುಪಿದೆ. ಇದರ ರಿಪೇರಿಯನ್ನು ತತ್‌ಕ್ಷಣವೇ ನಡೆಸಲಾಗುವುದು. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೆಂಪು ಪಟ್ಟಿ ಹಾಕಲಾಗಿದೆ. ಆದರೆ ಕಚೇರಿ ಒಳಗಡೆ ಎಲ್ಲೂ ಸೋರಿಕೆ ಆಗುತ್ತಿಲ್ಲ.
 - ಮಂಜುನಾಥ್‌,
ಹಿರಿಯ ಸೂಪರಿಟೆಂಡೆಂಟ್‌,
ಅಂಚೆ ವಿಭಾಗೀಯ ಕಚೇರಿ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next