Advertisement

ಸತ್ಯ ಹೇಳ್ಳೋ ಸಾಹಿತಿಗಳಿಗೆ ಕುತ್ತು

09:58 AM Jun 04, 2018 | |

ಬೀದರ: ಸತ್ಯ ಹೇಳುವ ಹಾಗೂ ಬರೆಯುವ ಸಾಹಿತಿಗಳ ಕತ್ತು ಹಿಸುಕಲಾಗುತ್ತಿದೆ. ಗೌರಿ ಲಂಕೇಶರನ್ನು ಸನಾತನ ಧರ್ಮದವರು ಕೊಲೆ ಮಾಡಿದ್ದಾರೆಂದು ಹೇಳಿಕೆ ನೀಡಿದ ಬಹುತೇಕ ಹಿರಿಯ ಸಾಹಿತಿಗಳಿಗೆ ಕೊಲೆ ಬೆದರಿಕೆ
ಕರೆ ಹಾಗೂ ಪತ್ರಗಳು ಬಂದಿವೆ ಎಂದು ಹಿರಿಯ ಸಾಹಿತಿ ಕುಂ| ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ರಂಗಮಂದಿರದಲ್ಲಿ ಗುಲ್ಬರ್ಗಾ ವಿವಿ ದಿ| ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಲೇಖಕಿ ಪಾರ್ವತಿ ಸೋನಾರೆ ರಚಿತ “ಭವರಿ’ ಕಥಾ ಸಂಕಲನ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡ ಭಾಷೆ ಅಸ್ಮಿತೆ ಉಳಿಯಬೇಕಾದರೆ ಪಾಲಕರು ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕು. ಇದರಿಂದ ಕನ್ನಡ ಭಾಷೆಯ ಅಸ್ಮಿತೆ ಹಾಗೂ ಗರಿಮೆ ಉಳಿಯುತ್ತದೆ. ಆಂಟಿ, ಅಂಕಲ್‌ ಎನ್ನುವ ಅನಿಷ್ಠ ಪದಗಳಿಂದ ಕನ್ನಡದ ಅಸ್ಮಿತೆ ಹಾಳಾಗುತ್ತಿದೆ. ಇದನ್ನು ಹೋಗಲಾಡಿಸಬೇಕಿದೆ. ಕನ್ನಡ ಭಾಷೆ ಐಷಾರಾಮಿ ಜೀವನ ನಡೆಸಲು ಡಾಲರ್‌ ಕೊಡುವುದಿಲ್ಲ. ಸುಖಕರ ಸಂಸಾರ ನಡೆಸಲು ರೂಪಾಯಿ ನೀಡುತ್ತದೆ ಎಂದರು.

ಇಂಗ್ಲಿಷ್‌ ಓದಿದ ಮಕ್ಕಳು ತಂದೆ-ತಾಯಿಗೆ ಅನ್ನ ಹಾಕದೇ ವೃದ್ಧಾಶ್ರಮಗಳಿಗೆ ಕಳುಹಿಸುತ್ತಾರೆ. ಈಗ ಇದೊಂದು ವಾಣಿಜ್ಯ ಉದ್ಯಮವಾಗಿದೆ. ವೃದ್ಧಾಶ್ರಮಗಳು ಹೆಚ್ಚುತ್ತಿದ್ದು, ಇದು ಇಂಗ್ಲಿಷ್‌ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಿದ
ಪ್ರತಿಫಲ. ಕನ್ನಡ ಮಾಧ್ಯಮದ ಮಕ್ಕಳು ಬಿಳಿ ಜೋಳದ ರೊಟ್ಟಿ ಇದ್ದಂತೆ. ರೊಟ್ಟಿಯಂತೆ ಕನ್ನಡ ಭಾಷೆಯಲ್ಲಿಯೂ ಅಪಾರ ಶಕ್ತಿ ಇದೆ. ಈ ಶಕ್ತಿ ಹೊಂದಿರುವ ಮಕ್ಕಳು ಪೈಲ್ವಾನರಂತೆ ಇರುತ್ತಾರೆ. ಮಹಿಳೆಯರಿಗೆ ಶೇ. 33
ಮೀಸಲಾತಿ ಕೊಡಬೇಕು ಎಂದು ಹೇಳುತ್ತಾರೆ. ಆದರೆ, ಇದಕ್ಕೆ ಶಾಸನಬದ್ಧವಾಗಿ ಕಾನೂನು ರೂಪಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡಾ| ಎಸ್‌.ಎಸ್‌. ಫೌಂಡೇಶನ್‌ ಗೌರವಾಧ್ಯಕ್ಷೆ ಗುರಮ್ಮ ಸಿದ್ಧಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಅಪ್ಪಾರಾವ್‌ ಅಕ್ಕೋಣಿ “ಭವರಿ’ ಕಥಾ ಸಂಕಲ ಬಿಡುಗಡೆ ಮಾಡಿದರು. ಕನ್ನಡ ಪುಸ್ತಕ ಪ್ರಾ ಧಿಕಾರದ ಸದಸ್ಯೆ ಡಾ| ಜಯದೇವಿ ಗಾಯಕವಾಡ ಮಾತನಾಡಿದರು. ಕಥೆಗಾರ್ತಿ ಪಾರ್ವತಿ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ನಿರ್ದೇಶಕ ಡಿಂಗ್ರಿ ನರೇಶ ಕಥಾ ವಾಚನ ಮಾಡಿದರು. ಶ್ರೀದೇವಿ ಹೂಗಾರ ನಿರೂಪಿದರು, ಓಂಕಾರ ಪಾಟೀಲ ಸ್ವಾಗತಿಸಿದರು, ಕಿಚ್ಚ ಮಹೇಶ ವಂದಿಸಿದರು. 

Advertisement

ಮಕ್ಕಳ ಸಾಹಿತ್ಯ ಪರಿಷತ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಗುಪ್ತಾ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಡಿಎಚ್‌ಒ ಡಾ| ಎಂ.ಎ. ಜಬ್ಟಾರ, ಜಾನಪದ ಅಕಾಡೆಮಿ ಸದಸ್ಯರಾದ ಪ್ರಕಾಶ ಅಂಗಡಿ, ವಿಜಯಕುಮಾರ ಸೋನಾರೆ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ವೈದ್ಯಾಧಿಕಾರಿ ಡಾ| ಸಂಗಾರೆಡ್ಡಿ, ದೇವಿದಾಸ ಚಿಮಕೋಡ ಇದ್ದರು.

ಸತ್ಯ ಬರೆಯುವ ಹಾಗೂ ಹೇಳುವ ಛಾತಿ ಪಾರ್ವತಿ ಅವರಲ್ಲಿದೆ. ಅವರು “ಭವರಿ’ ಕಥಾ ಸಂಕಲನದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದಾರೆ. ಶೋಷಿತ, ಅತ್ಯಾಚಾರಕ್ಕೊಳಗಾದ ಮಹಿಳೆಯರ ನೋವು-ನಲಿವು, ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ. ಪಾರ್ವತಿ ಅವರು ನಿರಂತರವಾಗಿ ಬರೆಯುತ್ತಲೇ ಇರಬೇಕು. ನಗರ ಕೇಂದ್ರಿತ ಸಾಹಿತಿಗಳು ಜೋಕರ್‌ಗಳಂತೆ ಇರುತ್ತಾರೆ. ಎಡ, ಬಲ, ನಡು, ತೃತೀಯ ಲಿಂಗಿಯೋ ಎಂಬುದು ಗೊತ್ತಾಗುವುದಿಲ್ಲ. ಇವರು ಎಲ್ಲೆಡೆ ಠಳಾಯಿಸುತ್ತಾರೆ. ಇವರಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣ ಆಗುತ್ತದೆ. ಇವರು ನಿರುಪದ್ರವಿ ಸಾಹಿತಿಗಳು. ಉಪದ್ರವಿ ಸಾಹಿತಿಗಳಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ.
ಕುಂ. ವೀರಭದ್ರಪ್ಪ, ಹಿರಿಯ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next