ದೇವರಹಿಪ್ಪರಗಿ: ಮೇಲಗಡೆಯಷ್ಟೇ ಸುಸಜ್ಜಿತ ಸಿಮೆಂಟ್ ಕಂಬಗಳು, ಕೆಳಗಡೆ ಮಾತ್ರ ಅಪಾಯಕ್ಕೆ ಆಹ್ವಾನ ನೀಡುವಂತೆ ಸಿಮೆಂಟ್ ಕಿತ್ತು ಹೋದ ಕಬ್ಬಿಣದ ಸ್ತಂಭಗಳು.
ಕಳೆದ ನಾಲ್ಕು ವರ್ಷಗಳಿಂದ ಗುಣಮಟ್ಟ ಕಳೆದುಕೊಂಡು, ಬದಲಾವಣೆಗಾಗಿ ಕಾಯುತ್ತಿರುವ ಬಿಬಿ.ಇಂಗಳಗಿ ಗ್ರಾಮದ ವಿದ್ಯುತ್ ಕಂಬಗಳ ವಾಸ್ತವಿಕ ಸ್ಥಿತಿಯಿದು.
ತಾಲೂಕಿನ ಬಿಬಿ ಇಂಗಳಗಿ ಗ್ರಾಮದಲ್ಲಿ ಒಂದಲ್ಲ, ಎರಡಲ್ಲ ಕನಿಷ್ಟ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಗಾಳಿ, ಮಳೆಗೆ ಬೀಳುವ ಹಂತದಲ್ಲಿವೆ. ಜೊತೆಗೆ ಅಪಾಯದ ಮುನ್ಸೂಚನೆ ನೀಡುತ್ತಿವೆ. ಈ ಕುರಿತು ಗ್ರಾಪಂ ಸದಸ್ಯ ಸಲೀಂ ವಠಾರ ಹಾಗೂ ಮಾನಪ್ಪ ಹಿರೇಕುರುಬರ ಹೇಳುವಂತೆ, ಗ್ರಾಮದಲ್ಲಿ 25 ವರ್ಷಗಳ ಹಿಂದೆ ನೆಟ್ಟ ವಿದ್ಯುತ ಕಂಬಗಳೇ ಈವರೆಗೆ ಇವೆ. ಈಗ ಅವುಗಳ ಸಿಮೆಂಟ್ ಕಿತ್ತು ಹೋಗಿ ಎಲುಬಿನ ಗೂಡಿನಂತೆ ಕಬ್ಬಿಣದ ಗೂಡಾಗಿವೆ.
ಕಂಬಗಳ ಬದಲಾವಣೆಗಾಗಿ ಹಲವು ಬಾರಿ ಹೆಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿ ಗಮನ ಸೆಳೆಯಲಾಗಿದೆ. ಅದಾಗ್ಯೂ ಯಾರು ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳುತ್ತಿಲ್ಲ. ಸಾಕಷ್ಟು ಮಳೆ, ಗಾಳಿ ತಿಂದಿರುವ ಕಂಬಗಳು ನಿವೃತ್ತಿಯ ಅಂಚಿನಲ್ಲಿದ್ದು ಅವುಗಳಿಗೆ ವಿಶ್ರಾಂತಿ ನೀಡಬೇಕಾಗಿದೆ. ಒಂದು ವೇಳೆ ಇವುಗಳ ಸ್ಥಿತಿ ನಿರ್ಲಕ್ಷಿಸಿದ್ದಲ್ಲಿ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಗ್ರಾಮದ ಚಿಕ್ಕಮಕ್ಕಳು ಬಹುತೇಕ ಸಮಯ ತಮ್ಮ ಆಟಗಳನ್ನು ಇಂಥ ಅಪಾಯದ ಕಂಬಗಳ ಅಡಿಯಲ್ಲಿ ಆಡುವುದರಿಂದ ವಿದ್ಯುತ್ ಪ್ರವಹಿಸುವ ಸಾಧ್ಯತೆಗಳಿವೆ. ಆದ್ದರಿಂದ ಕಬ್ಬಿಣದ ಗೂಡಾಗಿರುವ ಇಂಥ ಕಂಬಗಳನ್ನು ಕೂಡಲೇ ಬದಲಾಯಿಸಲು ಹೆಸ್ಕಾಂ ಮುಂದಾಗಬೇಕು. ಜೊತೆಗೆ ಗ್ರಾಮದ ಎರಡನೇ ವಾರ್ಡಿನಲ್ಲಿ ವಿದ್ಯುತ್ ತಂತಿ ಮನೆಗಳ ಮೇಲೆ ಹಾದು ಹೋಗಿದ್ದು ಅತೀ ಸಮೀಪದಲ್ಲಿದೆ. ಇದು ಸಹ ಎಚ್ಚರಿಕೆ ಗಂಟೆಯಾಗಿದ್ದು ಇದನ್ನು ಸಹ ಬದಲಾಯಿಸಬೇಕು ಎನ್ನುತ್ತಾರೆ.
ಗ್ರಾಮದಲ್ಲಿರುವ ಎಲ್ಲ ವಿದ್ಯುತ್ ಕಂಬಗಳ ವಾಸ್ತವಿಕ ಸ್ಥಿತಿಗಳನ್ನು ಅರಿಯಲು ಹೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ನಿವೃತ್ತಿಯ ಅಂಚಿನ ಕಂಬಗಳನ್ನು ಬದಲಾಯಿಸಿ ಹೊಸದಾದ ಕಂಬಗಳನ್ನು ಮಳೆಗಾಲದ ಆರಂಭದ ಮುನ್ನ ಸ್ಥಾಪಿಸಲು ಮುಂದಾಗಬೇಕು ಎಂದು ಗ್ರಾಮದ ಮಾಂತೇಶ ಮುದನೂರ, ಅಶೋಕ ಹೊಸಮನಿ, ಲಾಲಬಿ ನದಾಫ್, ಶಿವು ದಲ್ಲಾಳಿ, ರಫೀಕ್ ಬಾಗಲಕೋಟ, ಹನುಮಂತ ಮಾದರ, ಶಾರೂಖ್ ದೊಡಮನಿ ಆಗ್ರಹಿಸುತ್ತಾರೆ.
ಗ್ರಾಮದಲ್ಲಿ ಅವನತಿಯ ಅಂಚಿನಲ್ಲಿರುವ ಕಂಬಗಳ ಕುರಿತು ನನಗೆ ಮಾಹಿತಿಯಿದೆ. ಕೂಡಲೇ ಕಂಬಗಳ ಬದಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು
. –ಎಸ್.ಆರ್.ಕಟ್ಟಿಮನಿ. ಶಾಖಾಧಿಕಾರಿ, ಹೆಸ್ಕಾಂ ಕೋರವಾರ