Advertisement
ಕಲ್ಲು ತೆಗೆದು ಬಿಟ್ಟ ಕೋರೆಗಳಲ್ಲಿ ಮಳೆಗಾಲದಲ್ಲಿ ನೀರು ತುಂಬುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಕೋರೆಯ ಸುತ್ತ ತಡೆಬೇಲಿ ಹಾಕಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟ ಸೂಚನೆ ನೀಡಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಇದು ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ.
Related Articles
Advertisement
ಕಲ್ಲಿನ ಕೋರೆ ಮಾಡಿ ಕೆಲಸ ಮುಗಿದ ಬಳಿಕ ಮುಂದೇನು? ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಸಾಮಾನ್ಯವಾಗಿ ಕೆಂಪು ಕಲ್ಲಿನ ಅಗೆತ 10ರಿಂದ 18 ಅಡಿಯವರೆಗೂ ಇರುತ್ತದೆ. ಆಳದವರೆಗೆ ಹೊಂಡ ಮಾಡಿದ ನಂತರ ಇಂತಹ ಕೋರೆಯನ್ನು ಕೇಳುವವರೇ ಇಲ್ಲ ಎನ್ನುವ ಪರಿಸ್ಥಿತಿ. ಕೃತಕ ಕೆರೆಯ ಸ್ವರೂಪದಲ್ಲಿ ಇದು ಬದಲಾಗುತ್ತದೆ. ಕೆಲವು ಜನನಿಬಿಡ ಪ್ರದೇಶದ ಕೋರೆಗಳ ಸಮೀಪ ಜನ ಸಂಚಾರವನ್ನು ನಿಯಂತ್ರಿಸುವುದು ಕೂಡಾ ಕಷ್ಟವಾಗುತ್ತದೆ. ಇದರ ಮೇಲೆ ನಿಗಾ ಇಡುವವರು ಯಾರು ಎಂಬ ಪ್ರಶ್ನೆಯೂ ಇದೆ.
ಖಾಸಗಿ ಜಾಗದಲ್ಲೂ ಮೃತ್ಯುಕೂಪ
ಖಾಸಗಿ ಪಟ್ಟಾ ಜಮೀನನ್ನು ಕಲ್ಲು ತೆಗೆಯಲು ಕೊಟ್ಟರೆ ಒಳ್ಳೆಯ ಆದಾಯ ತರುತ್ತದೆ ಎಂಬ ಕಾರಣಕ್ಕೆ ಜಿಲ್ಲೆಯ ಹಲವೆಡೆ ಕೋರೆಗಾಗಿ ಗುತ್ತಿಗೆದಾರರಿಗೆ ಕೊಡುತ್ತಾರೆ. ಕೋರೆಯವರು ಮೊದಲು ಕಲ್ಲು ಹೇಗಿದೆ ಎಂದು ನೋಡಲು ಹೊಂಡ ಮಾಡುತ್ತಾರೆ, ಕಲ್ಲು ಚೆನ್ನಾಗಿದ್ದಾರೆ ಮುಂದುವರಿಯುತ್ತಾರೆ, ಇಲ್ಲವಾದರೆ ಹಾಗೇ ಬಿಟ್ಟು ಹೋಗುತ್ತಾರೆ. ಇಂತಹ ಹೊಂಡಗಳೇ ಅನೇಕ ಜೀವ ತೆಗೆದ ಉದಾಹರಣೆ ಇದೆ. ಮೂಡುಬಿದಿರೆಯ ಬೆಳುವಾಯಿಯಲ್ಲಿ ಕೆಲವು ವರ್ಷದ ಹಿಂದೆ 6 ಮಕ್ಕಳು ಪ್ರಾಣ ಕಳೆದುಕೊಂಡಿದ್ದರು!
ಮುನ್ನೆಚ್ಚರಿಕೆ ವಹಿಸಲು ಸೂಚನೆ
ಮಳೆ ಸಂದರ್ಭದಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಜತೆಗೆ ಮಳೆ ಸಂದರ್ಭ ಯಾವುದೇ ಅಪಾಯ ಆಗದಂತೆ ಕೋರೆಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆಯೂ ಈಗಾಗಲೇ ನಿರ್ದೇಶನ ನೀಡಲಾಗಿದೆ. ಈ ಕುರಿತಂತೆ ಪರಿಶೀಲನೆ ನಡೆಸಲಾಗುವುದು.
-ದ್ವಿತೀಯ, ಉಪನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ದ.ಕ.
ಅಲ್ಲಲ್ಲಿ ಇವೆ ಕೆಲವು ಕೋರೆಗಳು!
ಮಂಗಳೂರು, ಮೂಡಬಿದಿರೆ ತಾಲೂಕಿನ ಆದ್ಯಪಾಡಿ, ಬಡಗ ಎಕ್ಕಾರು, ಕೊಂಪದವು, ಪುತ್ತಿಗೆ, ಬೆಳುವಾಯಿ, ತೆಂಕಮಿಜಾರು, ತೆಂಕ ಎಕ್ಕಾರು, ಮುನ್ನೂರು, ಬಂಟ್ವಾಳ ತಾಲೂಕಿನ ಕರಿಯಂಗಳ, ಮಂಚಿ, ಕಸಬಾ, ಉಳ್ಳಾಲ ತಾಲೂಕಿನ ಮೂಳೂರು-ಇರಾ, ಕಂಚಿನಡ್ಕಪದವು, ನರಿಂಗಾನ ಮುಂತಾದ ಕಡೆಗಳಲ್ಲಿ ಕಲ್ಲಿನ ಕೋರೆಗಳಿವೆ. ಇಲ್ಲಿ ಎಲ್ಲಾ ಕಡೆ ಅಪಾಯ ಎಂದಲ್ಲ. ಆದರೆ, ಕೆಲವು ಕಡೆಗಳಲ್ಲಿ ಅಪಾಯವಿದ್ದು, ಗಣಿ ಇಲಾಖೆ-ಸ್ಥಳೀಯಾಡಳಿತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ನೀರು ಇಂಗಿಸುವುದಾದರೂ ಭದ್ರತೆ ಅಗತ್ಯ!
ಮಳೆಗಾಲದಲ್ಲಿ ನೀರು ತುಂಬಿ ಬೃಹತ್ ಕೆರೆಗಳಾಗಿ ಪರಿವರ್ತನೆಯಾಗುವುದರಿಂದ ಅಂತಹ ಕೋರೆಗಳನ್ನೇ ಮುಚ್ಚಿಸಲಾಗುತ್ತದೆ. ಅಪಾಯಕಾರಿ ಕೋರೆಗಳಿಂದ ಜೀವಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಮುಚ್ಚಿಸುವುದು ಕೂಡ ಅನಿವಾರ್ಯ. ಆದರೆ ಇಂತಹ ಕೋರೆಯಲ್ಲಿಯೇ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡು ಜಲಸಂರಕ್ಷಣೆ ಮಾಡಲು ಕೂಡ ಅವಕಾಶವಿದೆ ಎಂಬ ಪ್ರಯತ್ನವೂ ಕೆಲವೆಡೆ ಆಗುತ್ತಿದೆ. ನಿರುಪಯುಕ್ತ ಕಲ್ಲಿನ ಕೋರೆಗಳಲ್ಲಿ ನಾಲ್ಕೂ ಸುತ್ತಲು ಸೂಕ್ತ ಭದ್ರತೆಯನ್ನು ಕೈಗೊಂಡು ಮಳೆ ನೀರು ಸಂಗ್ರಹಿಸಿ ನೀರು ಇಂಗಿಸುವಂತೆ ಮಾಡುವ ಪ್ರಯತ್ನ ಕೆಲವರು ನಡೆಸುತ್ತಿದ್ದಾರೆ; ಆದರೆ, ಅಲ್ಲೂ ಗರಿಷ್ಠ ಭದ್ರತೆ ವ್ಯವಸ್ಥೆ ಮಾಡಬೇಕು.
ಮಳೆಗಾಲದಲ್ಲಿ ಕೆರೆಗಳಾಗುವ ಕೋರೆಗಳು!
ಸಾರ್ವಜನಿಕ ಜಾಗದಲ್ಲಿರುವ ದೊಡ್ಡ ಕೆಂಪುಕಲ್ಲು ಕೋರೆಗಳು ಅಪಾಯವನ್ನು ಸೃಷ್ಟಿಸಿದಂತೆಯೇ, ಖಾಸಗಿ ಜಾಗದಲ್ಲಿರುವ ಚಿಕ್ಕ, ಮಧ್ಯಮ ಗಾತ್ರದ ಕೋರೆಗಳು ಕೂಡ ಅಪಾಯಕಾರಿಯೇ. ಖಾಸಗಿ ಜಾಗದಲ್ಲಿ ತೆಗೆದ ಸಣ್ಣ ಕೋರೆಗಳನ್ನು ಜನ ಕೆರೆಯ ರೀತಿಯಲ್ಲಿ ಬಳಸುವುದಕ್ಕಾಗಿ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಆದರೆ, ತಡೆಗೋಡೆ ಇಲ್ಲದೆ ಅವುಗಳು ಕೂಡಾ ಮೃತ್ಯುಕೂಪಗಳಾದ ಘಟನೆಗಳು ಹಲವೆಡೆ ನಡೆದಿವೆ.
– ದಿನೇಶ್ ಇರಾ