Advertisement
ಮಹಾನಗರ: ಎರಡು ತಿಂಗಳ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆ (ಮೇ 25ರಂದು)ತೆರಳಿದ್ದ ಗಿಲ್ಗೆಟ್ ಬೋಟೊಂದು ಮಂಗಳೂರು ಅಳಿವೆ ಬಾಗಿಲು ಸಮೀಪ ಅವಘಡಕ್ಕೀಡಾಗಿದ್ದು, ಇನ್ನೂ ಅದರ ತೆರವು ಕಾರ್ಯಾಚರಣೆ ನಡೆಯದ ಹಿನ್ನೆಲೆಯಲ್ಲಿ, ಎರಡು ತಿಂಗಳುಗಳ ಸುದೀರ್ಘ ರಜೆಯ ಬಳಿಕ ಹೊಸ ನಿರೀಕ್ಷೆಯೊಂದಿಗೆ ಆ. 1ರಿಂದ ಸಮುದ್ರಕ್ಕೆ ಇಳಿದಿರುವ ಮೀನುಗಾರಿಕಾ ದೋಣಿಗಳು ನಿತ್ಯ ಅಪಾಯ ಎದುರಿಸುತ್ತಿವೆ.
Related Articles
Advertisement
ಜೂ.1ರಿಂದ ಆ.1ರ ವರೆಗೆ ಮೀನು ಸಂತತಿ ವೃದ್ಧಿಗಾಗಿ ಆಳಸಮುದ್ರ ಮೀನುಗಾರಿಕೆಗೆ ರಜೆ ನೀಡಲಾಗುತ್ತದೆ. ಇದೇ ಸಮಯದಲ್ಲಿ ಬೋಟ್‌ನಿಂದ ಇಂಧನ ಸೋರಿಕೆಯಾದರೆ ಕಡಲ ತಟಕ್ಕೆ ಬಂದು ಮೊಟ್ಟೆ ಇಡುವ ಮೀನುಗಳ ಸಂತತಿಗೂ ಕಂಟಕ ಇರುತ್ತದೆ. ಹೀಗಾಗಿ ಆದಷ್ಟು ಶೀಘ್ರ ಬೋಟು ತೆರವಿಗೆ ಗಂಭೀರ ಚಿಂತನೆ ಮಾಡಬೇಕಾಗಿದೆ ಎಂಬ ಆಗ್ರಹ ಮೀನುಗಾರರದ್ದು.
2,000 ಮೀನುಗಾರಿಕಾ ಬೋಟುಗಳ ಸಂಚಾರಮಂಗಳೂರು ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಒಟ್ಟು ಸುಮಾರು 2,000 ಮೀನುಗಾರಿಕಾ ಬೋಟುಗಳಿವೆ. 35,875 ಮಂದಿ ನೇರವಾಗಿ ಮತ್ತು ಸುಮಾರು 70,000ಕ್ಕಿಂತಲೂ ಅಧಿಕ ಮಂದಿ ಪರೋಕ್ಷವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. 2016-17ನೇ ಸಾಲಿನಲ್ಲಿ 16,603 ಮೆಟ್ರಿಕ್ ಟನ್‌ಗಳಷ್ಟು ಮೀನುಗಳು ದೊರೆತಿವೆ. ಪ್ರಸ್ತುತ ಕರ್ನಾಟಕದ ಕರಾವಳಿಯಲ್ಲಿ ಮೀನುಗಾರ ಕಾರ್ಮಿಕರಲ್ಲಿ ಹೊರರಾಜ್ಯಗಳ ಮಂದಿ ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಇವರು ಮೀನುಗಾರಿಕಾ ರಜೆ ಪ್ರಾರಂಭವಾದ ಬಳಿಕ ತಮ್ಮ ಊರಿಗೆ ಹೋಗುತ್ತಾರೆ. ಈಗ ಅವರೆಲ್ಲರೂ ಮರಳಿ ಆಗಮಿಸುತ್ತಿದ್ದು ಮತ್ತೇ ಮೀನುಗಾರಿಕೆ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆ. 1ರಿಂದ ಟ್ರಾಲ್ ಹಾಗೂ ಪರ್ಸಿನ್ ಬೋಟುಗಳು ಮೀನುಗಾರಿಕೆಗೆ ತೆರಳಲು ಆರಂಭವಾಗಿದ್ದು, ಆ. 7ರಂದು ಸಮುದ್ರಪೂಜೆ ನೆರವೇರುವ ಮೂಲಕ ಪೂರ್ಣಪ್ರಮಾಣದಲ್ಲಿ ಸಮುದ್ರಕ್ಕಿಳಿಯಲಿವೆ. ರಾತ್ರಿ ಬೋಟ್ ಸಂಚಾರ ಅಪಾಯ
ಅಳಿವೆ ಪ್ರದೇಶವೇ ಅತ್ಯಂತ ಅಪಾಯಕಾರಿ ಪ್ರದೇಶ. ಇಲ್ಲಿ ನೀರಿನ ತೀವ್ರತೆಯನ್ನು ಗಮನಿಸಿ ಬೋಟ್‌ಗಳು ಸಂಚರಿಸುತ್ತವೆ. ಅಳಿವೆ ಮಧ್ಯಭಾಗದಲ್ಲಿಯೇ ಬೋಟ್ ಮುಳುಗಡೆಯಾಗಿ ಇತರ ಬೋಟುಗಳ ಸಂಚಾರಕ್ಕೆ ತಡೆಯಾಗುತ್ತಿದೆ. ರಾತ್ರಿ ವೇಳೆಗೆ ಬೋಟ್‌ಗಳು ಇಲ್ಲಿ ಸಂಚರಿಸುವುದರಿಂದ ಮುಳುಗಿರುವ ಬೋಟ್ ಗೊತ್ತಾಗದೆ, ಇನ್ನೊಂದು ಅವಘಡ ಎದುರಾಗುವ ಅಪಾಯ ಇದೆ. ಹೀಗಾಗಿ ಜಿಲ್ಲಾಡಳಿತ ಇದನ್ನು ತತ್‌ಕ್ಷಣ ತೆರವು ಮಾಡಬೇಕು.
– ನಿತಿನ್ ಕುಮಾರ್, ಅಧ್ಯಕ್ಷರು, ಟ್ರಾಲ್ ಬೋಟ್ ಮೀನುಗಾರರ ಸಂಘ, ಮಂಗಳೂರು ಬೋಟ್ ಮಾಲಕರಿಂದಲೇ ತೆರವು
ಮುಳುಗಡೆಯಾದ ಬೋಟ್ ತೆರವು ಮಾಡುವುದು ಮೀನುಗಾರಿಕೆಯ ಎಂಎಸ್ ನಿಯಮ ಪ್ರಕಾರ ಬೋಟ್ ಮಾಲಕರ ಕರ್ತವ್ಯ. ಈ ಸಂಬಂಧ ಮೊದಲಿಗೆ ಬೋಟ್ ಮಾಲಕರಿಗೆ ನೋಟಿಸ್ ನೀಡಲಾಗಿತ್ತು. ಆ ಬಳಿಕ ಇನ್ಸ್ಯುರೆನ್ಸ್ ಕೊಟೇಶನ್ ಸಂಬಂಧ ಮಾಲಕರು ನಮಗೆ ತಿಳಿಸಿದ್ದು, ಇನ್ಸ್ಯುರೆನ್ಸ್ ಸಂಸ್ಥೆಯನ್ನು ಸಂಪರ್ಕಿಸಲಾಗಿದೆ. ಈಗ ಬೋಟ್ ತೆರವು ಸಂಬಂಧ ಎಲ್ಲ ರೀತಿಯ ಪ್ರಕ್ರಿಯೆಗಳು ನಡೆಯುತ್ತಿವೆ. ಶೀಘ್ರದಲ್ಲಿ ತೆರವಾಗಲಿದೆ. ಇಂಧನ ಸೋರಿಕೆ ಬಗ್ಗೆ ಯಾವುದೇ ದೂರು ಬಂದಿಲ್ಲ.
– ಮಹೇಶ್ ಕುಮಾರ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ – ದಿನೇಶ್ ಇರಾ