ಪೂಜಾಗಾಂಧಿ ಅಭಿನಯದ “ದಂಡುಪಾಳ್ಯ’ ಚಿತ್ರ ಯಶಸ್ವಿಯಾಗಿದ್ದೇ ತಡ, ಒಂದರ ಹಿಂದೆ ಒಂದರಂತೆ “ದಂಡುಪಾಳ್ಯ 1,2,3 ಸೀಕ್ವೆಲ್ ಬಂದಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, “ದಂಡುಪಾಳ್ಯಂ 4′ ಕೂಡ ಚಿತ್ರೀಕರಣ ಮುಗಿಸಿರುವುದು ಗೊತ್ತೇ ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, “ದಂಡುಪಾಳ್ಯಂ 4′ ಚಿತ್ರಕ್ಕೆ ಇಷ್ಟೊತ್ತಿಗೆ ಸೆನ್ಸಾರ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಮಾತ್ರ “ದಂಡುಪಾಳ್ಯಂ 4′ ಚಿತ್ರವನ್ನು ತಿರಸ್ಕರಿಸಿದೆ!
ಹೌದು, ಸೆನ್ಸಾರ್ ಮಂಡಳಿ ವರ್ತನೆಯನ್ನು ಖಂಡಿಸಿರುವ “ದಂಡುಪಾಳ್ಯಂ 4′ ಚಿತ್ರ ನಿರ್ಮಾಪಕ ವೆಂಕಟ್, ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ನಿರ್ಮಾಪಕ ವೆಂಕಟ್, “ತುಂಬಾ ಕಷ್ಟಗಳ ನಡುವೆ “ದಂಡುಪಾಳ್ಯಂ 4′ ಚಿತ್ರ ನಿರ್ಮಾಣ ಮಾಡಿದ್ದೇನೆ. ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿ, ಪ್ರಮಾಣ ಪತ್ರ ನೀಡುವ ಬದಲು, ಚಿತ್ರವನ್ನೇ ತಿರಸ್ಕರಿಸಿದೆ. ಅದಕ್ಕೆ ಕಾರಣವೂ ಕೊಟ್ಟಿಲ್ಲ.
ಚಿತ್ರದಲ್ಲೇನಾದರೂ ತಪ್ಪಿದ್ದರೆ, ಕಟ್ ಮಾಡಲು ಹೇಳಬಹುದಿತ್ತು, ಅಥವಾ ಸಂಭಾಷಣೆಯಲ್ಲಿ ಸಮಸ್ಯೆ ಇದ್ದರೆ, ಅದನ್ನು ತೆಗೆದುಹಾಕಿ ಎನ್ನಲು ಅಧಿಕಾರವೂ ಇತ್ತು. ಆದರೆ, ಚಿತ್ರವನ್ನೇ ತಿರಸ್ಕರಿಸಿ, ಬೇಕಾದರೆ, ನೀವು ಟ್ರಿಬ್ಯುನಲ್‌ಗೆ ಹೋಗಿ ಅಂತ ಒಂದು ಪತ್ರ ಕೊಡುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಆರೋಪಿಸಿದ್ದಾರೆ ವೆಂಕಟ್. ಚಿತ್ರ ತಡವಾದ ಬಗ್ಗೆ ಮಾತನಾಡುವ ವೆಂಕಟ್,
“ಚಿತ್ರವನ್ನು ಬೇಗ ಬಿಡುಗಡೆಗೊಳಿಸಬೇಕು ಎಂಬ ಕಾರಣಕ್ಕೆ ನವೆಂಬರ್‌ನಲ್ಲೇ ನಾವು ಆನ್‌ಲೈನ್ ಮೂಲಕ ಅರ್ಜಿ ಹಾಕಿದ್ದರೂ ಸಹ, ಚಿತ್ರ ವೀಕ್ಷಣೆ ಮಾಡದೆ, ಹಿಂದೆ ಬಂದ ಅನೇಕ ಚಿತ್ರಗಳನ್ನು ವೀಕ್ಷಿಸಿ, ಬಿಡುಗಡೆಗೆ ಅನುವು ಮಾಡಿಕೊಡಲಾಗಿದೆ. ಆದರೆ, “ದಂಡುಪಾಳ್ಯಂ 4′ ಚಿತ್ರ ವೀಕ್ಷಿಸದೆ, ಕೊನೆಗೆ ತಿರಸ್ಕರಿಸಿರುವುದು ಯಾವ ಕಾರಣಕ್ಕೆ ಎಂಬುದನ್ನೂ ಹೇಳದೆ, ನೋವುಂಟು ಮಾಡಲಾಗಿದೆ. ಸೆನ್ಸಾರ್‌ನಲ್ಲಿ ಎಲ್ಲವೂ ಪಾರದರ್ಶಕವಾಗಿದೆ ಎನ್ನುವ ಅಧಿಕಾರಿಗಳು, ನಮ್ಮ ಚಿತ್ರದ ವಿಷಯದಲ್ಲೇಕೆ ಆಗಿಲ್ಲ.
ಇಷ್ಟವಾಗದೇ ಇರುವಂತಹ ದೃಶ್ಯವನ್ನು ಕಿತ್ತುಹಾಕಿ ಎಂದು ಹೇಳಿದ್ದರೆ, ನಾವು ಅದಕ್ಕೆ ಸಮಜಾಯಿಸಿ ಉತ್ತರ ಕೊಡುತ್ತಿದ್ದೆವು, ಅದಕ್ಕೂ ಒಪ್ಪದಿದ್ದರೆ, ಕಿತ್ತು ಹಾಕುತ್ತಿದ್ದೆವು. ಆದರೆ, ತಿರಸ್ಕರಿಸಿದ್ದು ಸರಿಯಲ್ಲ. ಒಬ್ಬ ನಿರ್ದೇಶಕ ತಮ್ಮ ಚಿತ್ರದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾನೆ. ಅಷ್ಟೇ ಅಲ್ಲ, ಕಥೆಗೆ ಪೂರಕವಾಗಿರುವಂತಹ ದೃಶ್ಯ, ಮಾತು ಕಟ್ಟಿಕೊಟ್ಟಿರುತ್ತಾನೆ. ಸಿನಿಮಾದಲ್ಲಿ ಇಂತಹ ದೃಶ್ಯ ನೋಡುಗರ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿದ್ದರೆ, ಖಂಡಿತವಾಗಿಯೂ ಸೆನ್ಸಾರ್ ಅಧಿಕಾರಿಗಳ ಮಾತು ಕೇಳುತ್ತಿದ್ದೆವು.
ಆದರೆ, ಏಕಾಏಕಿ, ತಿರಸ್ಕಾರ ಅಂದರೆ, ಕೋಟಿ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರ ಗತಿ ಏನಾಗಬೇಕು?’ ಎಂಬ ಪ್ರಶ್ನೆ ವೆಂಕಟ್ ಅವರದು. ತಮ್ಮ ಮುಂದಿನ ನಿರ್ಧಾìದ ಬಗ್ಗೆ ಮಾತನಾಡುವ ನಿರ್ಮಾಪಕರು, “ನಮಗೆ ಸೆನ್ಸಾರ್ ಮಂಡಳಿಯಲ್ಲಿ ಏನನ್ನೂ ಮಾತನಾಡಲು ಅವಕಾಶ ಕೊಟ್ಟಿಲ್ಲ. ಈ ಚಿತ್ರವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಈಗ ನೋಡಿದರೆ ಟ್ರಿಬ್ಯುನಲ್‌ಗೆ ಹೋಗಿ ಅನ್ನುತ್ತಿದ್ದಾರೆ. ನಮಗೆ ಬೇರೆ ದಾರಿ ಇಲ್ಲ. ಟ್ರಿಬ್ಯುನಲ್‌ಗೆ ಹೋಗ್ತಿವಿ.
ಆದರೆ, ಚಿತ್ರವನ್ನು ತಿರಸ್ಕಾರ ಮಾಡೋಕೆ ಯಾವುದೇ ಕಾರಣ ಕೊಡದಿರುವ ಅಧಿಕಾರಿ ವಿರುದ್ಧ ನಾವು ಫಿಲ್ಮ್ ಚೇಂಬರ್ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿದೆ. ಉಳಿದಂತೆ ತೆಲುಗು, ಹಿಂದಿ ಇತರೆ ಭಾಷೆಯಲ್ಲಿ ಡಬ್ ಆಗುತ್ತಿದೆ. ಈ ಹಿಂದೆ ನಾನು “ದಂಡುಪಾಳ್ಯ 1′ ಮಾಡಿದಾಗ, ಬಿಡುಗಡೆ ಹಿಂದಿನ ದಿನ ಊರಿನ ಜನ ಸಮಸ್ಯೆ ಉಂಟು ಮಾಡಿದರು. ಕೋರ್ಟ್ ಮೆಟ್ಟಿಲು ಏರಬೇಕಾಯಿತು. ಈಗ ಮತ್ತೂಂದು ಸಮಸ್ಯೆ ಎದುರಾಗಿದೆ’ ಎನ್ನುತ್ತಾರೆ ವೆಂಕಟ್.