ದಾಂಡೇಲಿ: ಬಹುಶಃ ಅವರಿರುತ್ತಿದ್ದರೇ ಈ ಭಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುತ್ತಿದ್ದರು. ಆದರೇನು ಹೋಗಬಾರದ ವಯಸ್ಸಿಗೆ ಹೋಗಿ ಬಿಟ್ಟರು. ಕೋವಿಡ್ ಮಹಾಮಾರಿ ಒರ್ವ ಸಮರ್ಥ ಜನನಾಯಕನನ್ನು ಬಲಿ ಪಡೆದಿರುವುದು ಮಾತ್ರ ದುರಂತ.
ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 17 ವರ್ಷಗಳಿಂದ ಸುಧೀರ್ಘವಾಗಿ ಸೇವೆಯನ್ನು ಸಲ್ಲಿಸಿದ್ದ ಸೈಯದ್ ತಂಗಳ ಅವರು ಅಗಲಿದ ನಂತರ ದಾಂಡೇಲಿಯಲ್ಲಿ ಕಾಂಗ್ರೆಸ್ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದು ಸುಳ್ಳಲ್ಲ. ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ದರೂ ಸೈಯದ್ ತಂಗಳ ಅವರ ನೇತೃತ್ವದಲ್ಲಿ ಅದು ಜನಜಾತ್ರೆಯ ಕಾರ್ಯಕ್ರಮವಾಗುತ್ತಿತ್ತು. ಹಾಗೆಂದು ಈಗ ಕಾರ್ಯಕ್ರಮಗಳು ಆಗುತ್ತಿಲ್ಲ ಎಂದಲ್ಲ. ಆದರೆ ಆ ಪ್ರಮಾಣದಲ್ಲಿ ಆಗುತ್ತಿಲ್ಲ ಎನ್ನುವುದು ವಾಸ್ತವ ಸತ್ಯ. ಸೈಯದ್ ತಂಗಳ ಅವರ ಅಗಲಿಕೆಯನ್ನು ಕಾಂಗ್ರೆಸ್ ಪಕ್ಷ ಅಷ್ಟು ಸಲೀಸಾಗಿ ತುಂಬಿಸಿಕೊಳ್ಳುವುದು ಸುಲಭದ ಕೆಲಸವಲ್ಲ.
ದಾಂಡೇಲಿಯಲ್ಲಿ ಕಾಂಗ್ರೆಸ್ ಅಂದ್ರೆ ತಂಗಳ, ತಂಗಳ ಅಂದ್ರೆ ಕಾಂಗ್ರೆಸ್ ಎಂಬಷ್ಟರ ಮಟ್ಟಿಗೆ ಸೈಯದ್ ತಂಗಳ ಬೆಳೆದುನಿಂತಿದ್ದರು. ಯಾವುದೇ ಕಾರ್ಯಕ್ರಮಗಳಿರಲಿ, ಯಾರೇ ಕಾರ್ಯಕ್ರಮಕ್ಕೆ ಸಹಾಯ ಕೇಳಿ ಬಂದರೂ ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಯೆ ಇಲ್ಲ. ದಾಂಡೇಲಿಯ ಮಟ್ಟಿಗೆ ಕಾಂಗ್ರೆಸ್ ಒಂದು ಯುಗ ಪುರುಷನನ್ನೆ ಕಳೆದುಕೊಂಡಿದೆ ಎಂದೆ ಹೇಳಬಹುದು.
ಯಾವಾಗ ಸೈಯದ್ ತಂಗಳ ಅವರು ವಿಧಿವಶರಾದರೋ ಅಂದೆ ದಾಂಡೇಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಕಚೇರಿಯೂ ಇಲ್ಲದಂತಾಯ್ತು. ನಗರ ಸಭೆಯಲ್ಲಿ ಆಡಳಿತದ ಚುಕ್ಕಾಣಿಯನ್ನು ಹೊಂದಿರುವ, ರಾಜ್ಯದ ಮುತ್ಸದ್ದಿ ನಾಯಕನನ್ನು ಹೊಂದಿರುವ ದಾಂಡೇಲಿಯಲ್ಲಿ ತಂಗಳ ವಿಧಿವಶರಾದ ನಂತರ ಪಕ್ಷದ ಕಚೇರಿ ಮಾಡಲು ಸಾಧ್ಯವಾಗದೇ ಹೋಗಿರುವುದು ಮುಂದಿನ ದಿನಗಳಲ್ಲಿ ಪಕ್ಷ ಹೇಗೆ ಅಸ್ವಿತ್ವವನ್ನು ಉಳಿಸಿಕೊಳ್ಳಬಹುದು ಎನ್ನುವ ಪ್ರಶ್ನೆ ನಗರದಲ್ಲಿದೆ. ಬ್ಲಾಕ್ ಕಾಂಗ್ರೆಸ್ಸಿಗೆ ಅಧ್ಯಕ್ಷರೆ ಇಲ್ಲದೇ ಹಂಗಾಮಿ ಅಧ್ಯಕ್ಷರ ಮೂಲಕ ಪಕ್ಷ ಕಾರ್ಯನಿರ್ವಹಿಸುತ್ತಿದೆ. ಮುಂಬರಲಿರುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮಾಡಬೇಕಾದ ಜವಾಬ್ದಾರಿ ಮುತ್ಸದ್ದಿ ನಾಯಕದ್ದಾಗಿದೆ. ಸೈಯದ್ ತಂಗಳ್ ಅವರಿಲ್ಲದೇ ಕೊರಗಿದ ಕಾಂಗ್ರೆಸ್ ಇದೀಗ ಪಕ್ಷಕ್ಕೊಂದು ನಗರದಲ್ಲಿ ಕಚೇರಿ ಇಲ್ಲದೇ ಸೊರಗಿದಂತಾಗಿದೆ.
ನಗರ ಸಭೆಯ ಒಂದು ಉಪ ಚುನಾವಣೆಯಲ್ಲಿ ಗೆದ್ದಿರಬಹುದು, ಇಂದು ನಡೆಯುತ್ತಿರುವ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬಂತಿದೆ. ಅದು ಹೇಗೂ ಕಾಂಗ್ರೆಸ್ ಭದ್ರಕೋಟೆಯೆ ಆಗಿರುವುದರಿಂದ ಅಲ್ಲಿ ಅರ್ಹವಾಗಿ ಕಾಂಗ್ರೆಸ್ ಗೆಲುವು ಸಾಧ್ಯ. ಈ ಗೆಲುವು ಕಾಂಗ್ರೆಸಿನ ಸಾಧನೆ ಎಂದು ಸಂಭ್ರಮಿಸುವ ಗೆಲುವು ಅಲ್ಲ ಎನ್ನುವುದನ್ನು ಒಪ್ಪಿಕೊಂಡು ಪಕ್ಷ ಸಂಘಟನೆ, ಪಕ್ಷಕ್ಕೊಂದು ಕಚೇರಿ ಮಾಡಿಕೊಂಡಲ್ಲಿ ಪಕ್ಷ ವರ್ಚಸ್ಸನ್ನು ಉಳಿಸಿಕೊಳ್ಳಬಹುದು. ಇಲ್ಲದೇ ಹೋದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಇವೆಲ್ಲವುಗಳ ಪರಿಣಾಮವನ್ನು ಅನುಭವಿಸಬೇಕಾದಿತು.