ಬಾಗಲಕೋಟೆ: ಇಲ್ಲಿನ ಸೆಟಲ್‌ಮೆಂಟ್ ಕಾಲೋನಿಯ ದಂಡಿನ ದುರ್ಗಾದೇವಿ ಜಾತ್ರೆ ಮಂಗಳವಾರ ಅದ್ಧೂರಿಯಾಗಿ ನೆರವೇರಿತು. ದಂತಿನ ದುರ್ಗಾದೇವಿ ಜಾತ್ರೆಗೆ ತನ್ನದೇ ಆದ ವೈಶಿಷ್ಟತೆ ಇದ್ದು, ಮಹಿಳೆಯರು, ಮಕ್ಕಳಾದಿಯಾಗಿ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಜಾತ್ರೆಯ ಅಂಗವಾಗಿ ಬೆಳಗ್ಗೆ ಸೆಟಲ್‌ಮೆಂಟ್ ಕಾಲೋನಿಯ ದುರ್ಗಾದೇವಿ ದೇವಸ್ಥಾನದಿಂದ ಅದ್ಧೂರಿ ಮೆರವಣಿಗೆ ಆರಂಭಗೊಂಡು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆ ವೇಳೆ ಮಕ್ಕಳು, ಹಿರಿಯರು, ಮಹಿಳೆಯರೆಲ್ಲರೂ
ಕುಣಿದು ಕುಪ್ಪಳಿಸಿದರು.
ಬಳಿಕ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಪೂಜಾರಿಗಳಾದ ಶಿವಲಪ್ಪ ಮನ್ನಪ್ಪಚವ್ಹಾಣ ಮತ್ತು ಪರಶುರಾಮ ಉಜನಪ್ಪ ಕಾಳೆ ಅವರು ದೇವಿಗೆ ವಿಶೇಷ ಭಕ್ತಿ ಸಮರ್ಪಿಸಿದರು.
ಹಲವು ವರ್ಷಗಳಿಂದ ಟೆಂಗಿನ ಕಾಯಿಯನ್ನು ತಲೆಗೆ ಹೊಡೆದುಕೊಂಡು ಒಡೆಯುವ ಸಂಪ್ರದಾಯ ಇಲ್ಲಿದ್ದು, ಅದಕ್ಕಾಗಿ ದಂಡಿನ ದುರ್ಗಾದೇವಿ ಎಂಬ ಹೆಸರೂ ಬಂದಿದೆ ಎಂಬ ಪ್ರತೀತಿ ಇದೆ. ಗದಗ ಜಿಲ್ಲೆಯಲ್ಲಿ ದಂಡಿನ ದುರ್ಗಾದೇವಿಯ ಮೂಲ ದೇವಸ್ಥಾನವಿದ್ದು, ಅಲ್ಲಿಂದ ಪ್ರೇರೇಪಣೆಗೊಂಡು, ಇಲ್ಲಿನ ಸೆಟಲ್‌ಮೆಂಟ್ ಕಾಲೋನಿಯಲ್ಲಿ ದೇವಿಯ ಗುಡಿ ಕಟ್ಟಲಾಗಿದೆ. ಪ್ರತಿವರ್ಷ ನಾಲ್ಕೈದು ಕಾಲೋನಿಯ ಜನರು, ದೇವಿಯ ಜಾತ್ರೆಯನ್ನು ಮನೆಯ ಹಬ್ಬದಂತೆ ಆಚರಿಸುತ್ತಾರೆ.
ಮಂಗಳವಾರ ಕೂಡ, ನಗರದಲ್ಲಿ ಸೆಟಲ್‌ಮೆಂಟ್ ಕಾಲೋನಿ ಸಹಿತ ಪ್ರಮುಖ ಬೀದಿಗಳು, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಪ್ರತಿಯೊಂದು ಮನೆಯಲ್ಲೂ ವಿಶೇಷ ಅಡುಗೆ ಸಿದ್ಧಪಡಿಸಿ, ಬಂಧು-ಮಿತ್ರರನ್ನು ಮನೆಗೆ ಕರೆಸಿ, ಊಟ ಬಡಿಸಿ ಖುಷಿಪಟ್ಟರು. ನವನಗರದ ಅಂಬಾಭವಾನಿ ಮತ್ತು ದುರ್ಗಾದೇವಿ ದೇವಸ್ಥಾನದಲ್ಲೂ ಜಾತ್ರೆ ನಿಮಿತ್ಯ ವಿಶೇಷ ಪ್ರಸಾದ ವ್ಯವಸ್ಥೆ, ಭಕ್ತರಿಂದ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಿಗೆ ಹರಕೆ ತೀರಿಸಿದರು.