Advertisement

Dandeli ಬಂಗೂರನಗರದ ಐತಿಹಾಸಿಕ ಡಿಲಕ್ಸ್ ಮೈದಾನದಲ್ಲಿ ಕಟ್ಟಿಗೆ ದಾಸ್ತಾನಿಗೆ ಸಿದ್ಧತೆ

05:07 PM Dec 25, 2023 | Team Udayavani |

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಧೀನದಲ್ಲಿರುವ ಬಂಗೂರನಗರದ ಐತಿಹಾಸಿಕ ಡಿಲಕ್ಸ್ ಮೈದಾನದಲ್ಲಿ ಕಾರ್ಖಾನೆಯವರು ಕಟ್ಟಿಗೆ ದಾಸ್ತಾನಿಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.

Advertisement

ಮಾಹಿತಿಯ ಪ್ರಕಾರ, ಕೆಲವು ದಿನಗಳವರೆಗೆ ಇಲ್ಲಿ ಕಟ್ಟಿಗೆ ದಾಸ್ತಾನು ಮಾಡಲಾಗುತ್ತಿದ್ದು, ಶಾಶ್ವತವಾಗಿ ಕಟ್ಟಿಗೆ ಯಾರ್ಡನ್ನಾಗಿ ಡಿಲಕ್ಸ್‌ ಮೈದಾನವನ್ನು ಕಾಗದ ಕಾರ್ಖಾನೆಯವರು ಬಳಕೆ ಮಾಡುತ್ತಿಲ್ಲ‌ ಎಂಬುವುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

ಕಳೆದ ಕೆಲವು ದಿನಗಳಿಂದ ಟರ್ಬೈನ್ ಸಮಸ್ಯೆಯಿಂದಾಗಿ ಕಾರ್ಖಾನೆಯ ಎಲ್ಲಾ ಘಟಕಗಳು ಕಾರ್ಯನಿರ್ವಹಿಸದ ಕಾರಣ ಉತ್ಪಾದನಾ ಚಟುವಟಿಕೆ ತಕ್ಕಮಟ್ಟಿಗೆ ಕುಂಠಿತಗೊಂಡು ಕಚ್ಚಾ ವಸ್ತುವಾದ ಕಟ್ಟಿಗೆಗಳ ದಾಸ್ತಾನು ಗಣನೀಯವಾಗಿ ಹೆಚ್ಚಳವಾದ ಹಿನ್ನಲೆಯಲ್ಲಿ ಸದ್ಯಕ್ಕೆ ಕಟ್ಟಿಗೆ ದಾಸ್ತಾನಿನ‌ ಕೊರತೆಯನ್ನು ನೀಗಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಇಲ್ಲಿ ದಾಸ್ತಾನಿಡಲಾಗುವ ಕಟ್ಟಿಗೆಗಳನ್ನು ಮೊದಲು ನುರಿಸುವ ಕಾರ್ಯ ನಡೆಯಲಿದೆ‌ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿ ಹೆಚ್ಚೆಂದರೇ ಇಪ್ಪತ್ತು ದಿನಗಳಿಂದ ಒಂದು ತಿಂಗಳವರೆಗೆ ಕಟ್ಟಿಗೆ ದಾಸ್ತಾನು ಇಡಲಾಗುತ್ತದೆ ಎಂಬ ಮಾಹಿತಿ ಇಂದು ಭಾನುವಾರ ಲಭ್ಯವಾಗಿದೆ.

ಕಳೆದ ವರ್ಷ ಡಿಲಕ್ಸ್‌ ಮೈದಾನದಲ್ಲಿ ನೆಡುತೋಪು ಮಾಡುವ ಚಿಂತನೆ‌ ನಡೆದು, ವೇದಿಕೆ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ಆನಂತರ ನಗರದ ಜನತೆಯ ಆಗ್ರಹ, ಅಂದಿನ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು, ಶಾಸಕ ಆರ್.ವಿ.ದೇಶಪಾಂಡೆಯವರು ಮತ್ತು ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ನೆಡುತೋಪು ಕಾರ್ಯವನ್ನು ಕೈ ಬಿಡಲಾಗಿತ್ತು.

ಡಿಲಕ್ಸ್ ಮೈದಾನಕ್ಕೆ‌ ಮತ್ತು ದಾಂಡೇಲಿಯ ಜನತೆಗೆ ಒಂದು ಭಾವನಾತ್ಮಕವಾದ ಸಂಬಂಧವಿದೆ. ಹಾಗಾಗಿ ಡಿಲಕ್ಸ್ ಮೈದಾನ ಡಿಲಕ್ಸ್ ಮೈದಾನವಾಗಿಯೆ ಇರಬೇಕೆಂಬುವುದು ನಗರದ ಜನತೆಯ ಒತ್ತಾಸೆಯಾಗಿದೆ. ಇನ್ನೂ ಕೈಗಾರಿಕಾ ನಿಯಾಮವಳಿಯ ಪ್ರಕಾರ ಮೈದಾನ ಇರಲೆಬೇಕು. ದಕ್ಷಿಣ ಕರ್ನಾಟಕದಲ್ಲೆ ಖ್ಯಾತಿ ಪಡೆದ ರಾಮಲೀಲೋತ್ಸವ ಕಾರ್ಯಕ್ರಮವೂ ಇಲ್ಲೆ ನಡೆಯುವುದರಿಂದ ಡಿಲಕ್ಸ್‌ ಮೈದಾನ ಕೇವಲ ಆಟೋಟಗಳಿಗೆ ಮಾತ್ರ ಸೀಮಿತವಾಗದೇ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಚಟುವಟಿಕಗಳಿಗೂ ಸುವರ್ಣ ವೇದಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next