ದಾಂಡೇಲಿ: ಕಳೆದ 20 ವರ್ಷಗಳಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಾರ್ಮಸಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಪದೋನ್ನತಿಗೊಂಡು ವರ್ಗಾವಣೆಯಾಗಿರುವ ಯೋಗೇಂದ್ರ ಪಡುಕೋಣೆ ಮತ್ತು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರೋಗಿಯನ್ನು ಶರವೇಗದಲ್ಲಿ ಧಾರವಾಡದ ಆಸ್ಪತ್ರೆಗೆ ಕೊಂಡೊಯ್ದು ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಸೋಮನಗೌಡ.ಸಿ.ಎಂ ಅವರಿಗೆ ದಾಂಡೇಲಿ ನಗರದ ಸ್ಥಳೀಯ ಸುದರ್ಶನ ನಗರದ ಗೆಳೆಯರ ಬಳಗದ ವತಿಯಿಂದ ಇಂದು ಸನ್ಮಾನಿಸಲಾಯಿತು.
ಯೋಗೇಂದ್ರ ಪಡುಕೋಣೆ ಮತ್ತು ಸೋಮನಗೌಡ.ಸಿ.ಎಂ ಅವರು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಮಾತನಾಡಿ, ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡುವುದರ ಜೊತೆಗೆ ಜನಸ್ನೇಹಿಯಾಗಿ ತಮ್ಮ ನಡವಳಿಕೆಗಳ ಮೂಲಕ ಜನರ ಪ್ರೀತಿ ಗಳಿಸುವುದರಿಂದ ಕೆಲಸ ಮಾಡುವ ಸಂಸ್ಥೆಗೂ ಹೆಸರು ಬರುತ್ತದೆ. ಅಂತಹ ಕಾರ್ಯವನ್ನು ಯೋಗೇಂದ್ರ ಪಡುಕೋಣೆ ಮತ್ತು ಸೋಮನಗೌಡ.ಸಿ.ಎಂ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನರ್ಸ್ ಅಧೀಕ್ಷಕಿ ತುಳಾಸ, ಗೆಳೆಯರ ಬಳಗದ ಗೋಪಾಲ್ ಸಿಂಗ್ ರಜಪೂತ್, ಗೌರವ ಸಂಚಾಲಕರಾದ ಮಾರುತಿ ಕ್ಷತ್ರಿಯ, ಗೆಳೆಯರ ಬಳಗದ ಪ್ರಮುಖರುಗಳಾದ ಮಲ್ಲಿಕಾರ್ಜುನ್ ಕೊರಗಲ್, ಮಾಂತೇಶ್, ಮಂಜುನಾಥ್ ರಾಮಸ್ವಾಮಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.