Advertisement
ಬರೀ ನಾಲ್ಕು ದಶಕಗಳ ಹಿಂದೆಯಷ್ಟೇ, ರಾಜ್ಯ,ರಾಷ್ಟ್ರ ಮಾತ್ರವಲ್ಲ, ಅಂತಾರಾಷ್ಟ್ರಿಯಮಟ್ಟದ ಪಕ್ಷಿ ತಜ್ಞರನ್ನು ಬರಮಾಡಿಕೊಂಡು ಬಂದು ಕಾಡಿನ ಸುತ್ತ ಸುತ್ತಿ, ಇಲ್ಲಿನ ಉತ್ತಮ ಸ್ಥಳಗಳು, ಕಿರು ಜಲಪಾತಗಳು, ಪ್ರಾಣಿಗಳು ನೀರು ಕುಡಿಯಲು ಬರುವ ಆಯಕಟ್ಟಿನ ಸ್ಥಳಗಳನ್ನ ಶೋಧಿಸಿ, ಪ್ರಾಣಿಪ್ರಿಯರ ಕ್ಯಾಮರಾಕ್ಕೆ ಕೆಲಸ ಕೊಡುತ್ತಿದ್ದ ಶಿವಲಿಂಗ ಸಾಹೇಬರಿಗೆ ಕೆಲಸದಿಂದ ನಿವೃತ್ತಿ ತೆಗೆದುಕೊಂಡಾಗಿನಿಂದ ಮುಗಿನ ಮೇಲೆ ಸಿಟ್ಟು ಹತ್ತಿ ಕುಳಿತುಬಿಟ್ಟಿದೆ. ಇದಕ್ಕೆ ಕಾರಣ,ಅರಣ್ಯದ ಮಧ್ಯದಲ್ಲಿರುವ ಪ್ರಾಣಿ,ಪಕ್ಷಿ ಸಂಕುಲ ಸಂಕಷ್ಟಕ್ಕೆ ಸಿಲುಕಿರುವುದು.
Related Articles
Advertisement
ಗೋವಾ-ಕರ್ನಾಟಕ ರಾಜ್ಯದ ಗಡಿಯಲ್ಲಿ ಬರುವ ಭೀಮಗಡ ಮತ್ತು ಅಣಶಿ ಅಭಯಾರಣ್ಯದಲ್ಲಿ ಹುಲಿ, ಚಿರತೆ, ಕರಿ ಚಿರತೆ, ಕಾಡುಕೋಣ, ಚಿಂಕೆ, ಕಡವೆ ಸೇರಿದಂತೆ ಎಲ್ಲಾ ವಿಭಿನ್ನ ಜಾತಿಯ ಪ್ರಾಣಿಗಳು ಕುಡಿಯುವ ನೀರು ಮತ್ತು ಆಹಾರವನ್ನು ಅರಸಿಕೊಂಡು ಪೂರ್ವದಿಕ್ಕಿನತ್ತ ಅಂದರೆ ಬಯಲು ಸೀಮೆಯತ್ತ ಬರುತ್ತಿವೆ.
ಖಾನಾಪೂರ, ಬೆಳಗಾವಿ, ಹಳಿಯಾಳ,ಮುಂಡರಗಿ,ಧಾರವಾಡ,ಕಲಘಟಗಿ, ಮುಂಡಗೋಡ, ಹಾನಗಲ್, ಶಿಕಾರಿಪುರ ತಾಲೂಕಿನಲ್ಲಿನ ಕಾಡು ಪ್ರಾಣಿಗಳು ಬರಗಾಲದಿಂದ ಕಂಗೆಟ್ಟಿವೆ ಎನ್ನುವ ಗುಪ್ತ ವರದಿಯನ್ನ ಸ್ವತಃ ಅರಣ್ಯ ಇಲಾಖೆ ಕಿರಿಯ ಅಧಿಕಾರಿಗಳೇ ಸರ್ಕಾರದ ಮಟ್ಟದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಗೋವಾ- ಕರ್ನಾಟಕ ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ಸುತ್ತುತ್ತಿವೆ. 2012 ರ ಅವಧಿಯಲ್ಲೂ ಇಲ್ಲಿ ಬರಗಾಲ ಕಾಣಿಸಿಕೊಂಡಾಗ ನೀರು ಮತ್ತು ಆಹಾರದ ಕೊರತೆಯಿಂದಾಗಿ ಇದೇ ರೀತಿ ಆನೆಗಳು ಧಾರವಾಡದ ಹೈಕೋರ್ಟ್ ಪೀಠದ ಜನ ನಿಬಿಡ ಪ್ರದೇಶದ ವರೆಗೂ ಪರೇಡ್ ಮಾಡಿದ್ದವು.ಇನ್ನು ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಕಡವೆ,ಜಿಂಕೆಗಳು, ರಾಣೆಬೆನ್ನೂರು ಸಮೀಪದಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿನ ಕೃಷ್ಣಮೃಗ, ನವಿಲು ಸೇರಿ ಇಲ್ಲಿನ ಜೀವ ಸಂಕುಲವೇ ಕುಡಿಯುವ ನೀರು ಮತ್ತು ಆಹಾರದ ಕೊರತೆ ಎದುರಿಸುತ್ತಿವೆ.
ದಾಂಡೇಲಿ,ಹಳಿಯಾಳ,ಧಾರವಾಡ,ಖಾನಾಪೂರ,ಹಾನಗಲ್ ತಾಲೂಕಿನಲ್ಲಿರುವ ಬಯಲು ಅರಣ್ಯ ಪ್ರದೇಶದಲ್ಲಿನ(ಅಂದರೆ ಎಲೆ ಉದುರಿಸುವ ಗಿಡಗಳ ಕಾಡು) ಶೇ.96 ರಷ್ಟು ಸಣ್ಣ ಕೆರೆಗಳು ಮತ್ತು ಪ್ರಾಣಿಗಳ ಕುಡಿಯುವ ನೀರಿಗಾಗಿ ಅರಣ್ಯ ಇಲಾಖೆ ತೋಡಿಸಿದ್ದ ಸಣ್ಣ ಹೊಂಡಗಳು ಮಳೆಯ ಕೊರತೆಯಿಂದ ಈ ವರ್ಷ ಬತ್ತಿ ಹೋಗಿವೆ. ಈ ಐದು ತಾಲೂಕಿನಲ್ಲಿ ಕಾಡು ಪ್ರಾಣಿಗಳ ದಾಹ ತಣಿಸುವ 670 ಕ್ಕೂ ಹೆಚ್ಚು ಕೆರೆಗಳಿವೆ. ಅವುಗಳ ಪೈಕಿ 580ರಷ್ಟು ಸಣ್ಣ ಕೆರೆಗಳು (ಹೊಂಡಗಳು ಸೇರಿ)ಸಂಪೂರ್ಣ ಬತ್ತಿ ಹೋಗಿವೆ. ಆದರೆ ಜೂನ್, 2017ರ ವರೆಗೂ ಪ್ರಾಣಿಗಳು ಈ ಅರಣ್ಯದಲ್ಲಿಯೇ ಜೀವನ ಸಾಗಿಸಬೇಕಾಗಿದ್ದು, ಈ ವರ್ಷದ ಬೇಸಿಗೆ, ಕಾಡು ಪ್ರಾಣಿಗಳ ಪಾಲಿಗೆ ಯಮನ ಪಾಶವಾಗುವ ಸಾಧ್ಯತೆಯೇ ಹೆಚ್ಚಿದೆ ಎನ್ನುತ್ತಿದ್ದಾರೆ ಅರಣ್ಯ ಇಲಾಖೆಯಲ್ಲಿನ ಪ್ರಾಣಿಪ್ರಿಯ ಹಿರಿಯ ಅಧಿಕಾರಿಗಳು.
ಪ್ರಾಣಿಗಳಿಗೆ ನೀರಿನ ಕೊರತೆ ಇರುವ ಜಿಲ್ಲೆಗಳಲ್ಲಿನ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕಾಡುಗಳಲ್ಲಿ ಬತ್ತಿರುವ ಕೆರೆಗಳ ಅಂಗಳದಲ್ಲಿ ಸಣ್ಣ ಗುಂಡಿ ತೋಡಿ, ತಾಡಪಲ್‌ಗಳನ್ನು ಹಾಕಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಜ್ಜಾಗಿದ್ದಾರೆ. ಅಷ್ಟೇಯಲ್ಲ, ಅರಣ್ಯ ಮಧ್ಯದಲ್ಲಿ ಇರುವ ನರ್ಸರಿಗಳಿಗೆ ಜಿಂಕೆ,ಕಡವೆ ಮತ್ತು ಇತರ ಪ್ರಾಣಿಗಳು ಜೀವದ ಹಂಗು ತೊರೆದು ನೀರು ಕುಡಿಯಲು ಬರುತ್ತಿವೆ. ಹೀಗಾಗಿ ನರ್ಸರಿಗಳಿಂದ ಮತ್ತು ಅರಣ್ಯದ ಪಕ್ಕದಲ್ಲಿರುವ ರೈತರ ಹೊಲದಲ್ಲಿನ ಖಾಸಗಿ ಬೊರವೆಲ್‌ಗಳನ್ನ ಬಳಸಿಕೊಂಡು ಕಾಡಿನ ಅಂಚಿನಲ್ಲಿ ಅಲ್ಲಲ್ಲಿ ಗುಂಡಿತೋಡಿ ತಾಡಪತ್ರಿ(ನೀರು ಇಂಗಿಸದ ಅಬ್ರಕ )ಹಾಕಿ ಅಲ್ಲಿ ನೀರು ನಿಲ್ಲಿಸಿ ಪ್ರಾಣಿಗಳು ನಿರಾತಂಕವಾಗಿ ನೀರು ಕುಡಿಯಲು ವ್ಯವಸ್ಥೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ ಹಣ ಸಮಯಕ್ಕೆ ಸರಿಯಾಗಿ ಸಿಕ್ಕುತ್ತಿಲ್ಲ ಎನ್ನುವ ಕೊರಗು ಅಧಿಕಾರಿಗಳಲ್ಲಿದೆ.
ಹೀಗಾಗಿ ಶಿವಲಿಂಗ ಸಾಹೇಬ್ ಸಿಟ್ಟಾಗಿ, ತನ್ನ ಶಕ್ತಿ ಮೀರಿ ಕಾಡು ಉಳಿಸುವುದಕ್ಕೆ ಪ್ರಯತ್ನ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು, ದೊಡ್ಡ ಅಧಿಕಾರಿಗಳಿಗೆ ಮನವಿ ಕೊಡುತ್ತಿದ್ದಾರೆ. ಆದರೆ ಅವರ ಮನವಿಗಳನ್ನು ಹಿರಿಯ ಅಧಿಕಾರಿಗಳು ಪರಿಗಣಿಸುತ್ತಲೇ ಇಲ್ಲ ಎನ್ನುವ ಕಾರಣಕ್ಕೆ ಅವರಿಗೆ ಮತ್ತಷ್ಟು ಸಿಟ್ಟು ಬಂದಿದೆ.
ಇಲ್ಲಿ ಸಮಸ್ಯೆ ಇಲ್ಲದಾಂಡೇಲಿ,ಖಾನಾಪೂರದ ಒಳಭಾಗದಲ್ಲಿನ ದಟ್ಟ ಕಾಡಿನಲ್ಲಿ ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಆದರೆ ಕಾಡಿನ ಹೊರ ಅಂಚಿನ ಕೆರೆಗಳು ಬತ್ತಿ ಹೋಗಿದ್ದು, ಕಾಡಿನ ಜೀವ ಸಂಕುಲಕ್ಕೆ ಸಂಕಷ್ಟ ತಂದಿಟ್ಟಿದೆ. ಅರಣ್ಯ ಇಲಾಖೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಡುತ್ತಿದೆ. ಗ್ರಾಮಗಳು ಮತ್ತು ಹೊಲಗಳಂಚಿನ ಎಲೆ ಉದುರಿಸುವ ಗಿಡಗಳ ಕಾಡಿನಲ್ಲಿ ಈ ಹಿಂದೆ ಜೀವಂತವಾಗಿ ಹರಿಯುತ್ತಿದ್ದ ಸಣ್ಣ ಹಳ್ಳಕೊಳ್ಳಗಳು, ಕೊಳವೆಬಾವಿ ಮತ್ತು ಬರದಿಂದಾಗಿ ಬತ್ತಿ ಹೋಗಿದ್ದು, ಈ ಸಂಕಷ್ಟಕ್ಕೆ ಕಾರಣ ಎನ್ನುತ್ತಿದ್ದಾರೆ ಪರಿಸರ ತಜ್ಞರು. ಬಸವರಾಜ ಹೊಂಗಲ್