ದಾಂಡೇಲಿ: ನಗರ ಠಾಣೆಯ ಪಿಎಸ್ಐ ಕಿರಣ್ ಪಾಟೀಲ್ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 30 ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿದ ಘಟನೆ ಡಿ.4ರ ಬುಧವಾರ ನಡೆದಿದೆ.
ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬೆಳಗಿನಿಂದಲೇ ವಿವಿಧ ವಾಹನಗಳ ತಪಾಸಣೆ ನಡೆಸಲಾಗಿತ್ತು. ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಈ ತಪಾಸಣೆ ಕಾರ್ಯದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ದಂಡ ಹಾಕಲಾಯಿತು.
ಸಮರ್ಪಕ ದಾಖಲೆ ಪತ್ರಗಳಿಲ್ಲದೆ ಇರುವುದು, ವಾಹನ ಚಾಲನಾ ಪರವಾನಿಗೆ ಇಲ್ಲದೇ ಇರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿರುವುದನ್ನು ಗಮನಿಸಿ ಸೂಕ್ತ ದಂಡ ಹಾಕಲಾಯಿತು.
ಇದೇ ಸಂದರ್ಭದಲ್ಲಿ ಪಿಎಸ್ಐ ಕಿರಣ್ ಪಾಟೀಲ್ ಅವರು ಸಂಚಾರಿ ನಿಯಮಗಳ ಪಾಲನೆಯ ಕುರಿತಂತೆ ಮನವರಿಕೆ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ನೀಡಿದರು. ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಪೊಲೀಸರು ಭಾಗವಹಿಸಿದ್ದರು.
ಪಿಎಸ್ಐ ಕಿರಣ್ ಪಾಟೀಲ್ ಮತ್ತು ಪೊಲೀಸರ ಈ ಕಾರ್ಯಕ್ಕೆ ನಗರದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.