ದಾಂಡೇಲಿ : ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿಯಲ್ಲಿರುವ ಗಂಡನ ಮನೆಯಲ್ಲಿ ಗಂಡನಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಮಹಿಳೆಯೋರ್ವಳನ್ನು ಆಕೆಯ ತಂದೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ದಾಂಡೇಲಿಯ ಆಜಾದ್ ನಗರದ ನಿವಾಸಿ ಪಕ್ರುಸಾಬ್ ಮೋಹಿದ್ದೀನ್ ಸಾಬ್ ನದೀಮುಲ್ಲಾ ಅವರ ಮಗಳಾದ 30 ವರ್ಷ ವಯಸ್ಸಿನ ಸಭಾನಾ ಸಿರಾಜ್ ಸರ್ಕಾವಾಸ್ ಎಂಬವಳೆ ಗಂಡನಿಂದ ಹಲ್ಲೆಗೊಳಗಾದ ಮಹಿಳೆಯಾಗಿದ್ದಾಳೆ.
ಈಕೆಯನ್ನು ಕಳೆದ 12 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿಯ ನಿವಾಸಿ ಸಿರಾಜ್ ಸರ್ಕಾವಾಸ್ ಈತನಿಗೆ ವಿವಾಹ ಮಾಡಿಕೊಡಲಾಗಿತ್ತು. ಈಕೆಗೆ ಎಳೆಯ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಈಕೆಯ ಗಂಡ ಸಿರಾಜ್ ಸರ್ಕಾವಾಸ್ ಸಾಕಷ್ಟು ಸಲ ಕುಡಿದು ಬಂದು ಈಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಸಭಾನಾ ಸಿರಾಜ್ ಸರ್ಕಾವಾಸ್ ಹೇಳಿಕೆಯನ್ನು ನೀಡಿದ್ದಾಳೆ. ಗುರುವಾರ ಎಂ.ಕೆ ಹುಬ್ಬಳ್ಳಿಯಲ್ಲಿರುವ ಗಂಡನ ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವಾಗ ಕುಡಿದು ಬಂದ ಗಂಡ ಸಿರಾಜ್ ಸರ್ಕಾವಾಸ್ ಹಲ್ಲೆ ಮಾಡಿದ್ದಾನೆ. ಕಾಲಿನಿಂದ ತುಳಿದು ಕೆಳಕ್ಕೆ ದೂಡಿದ್ದಾನೆ. ಗಂಡನಿಂದ ಹಲ್ಲೆಗೊಳಗಾದ ಸಭಾನಾಳ ಕಣ್ಣಿಗೆ ಮತ್ತು ತಲೆಗೆ ತೀವ್ರ ಗಾಯವಾಗಿದೆ. ಗಾಯಗೊಂಡ ಸಭಾನಾ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದಾಳೆ. ಗಂಡನಿಂದ ಹಲ್ಲೆಗೊಳಗಾದ ಸಭಾನಾ ಅಲ್ಲಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾಳೆ. ಆದರೆ ಅವಳಿಗೆ ಸರಿಯಾದ ನೆರವು ಸಿಕ್ಕಿರುವುದಿಲ್ಲ.
ಗಂಡನಿಂದ ಹಲ್ಲೆಗೊಳಗಾಗಿ ತೀವ್ರ ಅಸ್ವಸ್ಥಗೊಂಡ ಸಭಾನಾ ಶುಕ್ರವಾರ ಮಧ್ಯಾಹ್ನ ಮಲಗಿಕೊಂಡೆ ಇದ್ದಳು. ಇದೇ ಸಮಯಕ್ಕೆ ಆಕೆಯ ತಂದೆ ಪಕ್ರುಸಾಬ್ ಮೋಹಿದ್ದೀನ್ ಸಾಬ್ ನದೀಮುಲ್ಲಾ ಅವರು ಮಗಳನ್ನು ನೋಡಿಕೊಂಡು ಬರಲೆಂದು ದಾಂಡೇಲಿಯಿಂದ ಎಂ.ಕೆ ಹುಬ್ಬಳ್ಳಿಗೆ ಹೋಗಿದ್ದಾರೆ. ಅಲ್ಲಿ ಹೋದಾಗ ಮಗಳು ಮಲಗಿ ಅಸ್ವಸ್ಥಳಾಗಿ ತೀವ್ರ ನೊಂದುಕೊಂಡಿರುವುದನ್ನು ಗಮನಿಸಿದ್ದಾರೆ. ಈ ಸಂದರ್ಭದಲ್ಲಿ ಆಗಿರುವ ಘಟನೆಯ ಕುರಿತಂತೆ ಸಭಾನಾ ತನ್ನ ತಂದೆಯ ಬಳಿ ವಿವರಿಸಿದ್ದಾಳೆ. ಕೂಡಲೇ ಪಕ್ರುಸಾಬ್ ಮೋಹಿದ್ದೀನ್ ಸಾಬ್ ನದೀಮುಲ್ಲಾ ಅವರು ಸಭಾನಾ ಮತ್ತು ಆಕೆಯ ಇಬ್ಬರು ಮಕ್ಕಳನ್ನು ದಾಂಡೇಲಿಗೆ ಕರೆದುಕೊಂಡು ಬಂದು, ಶುಕ್ರವಾರ ರಾತ್ರಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಭಾನಾಳನ್ನು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಹಲ್ಲೆಗೊಳಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಾಹಿತಿಯನ್ನು ಪಡೆದುಕೊಂಡ ದಾಂಡೇಲಿ ನಗರ ಠಾಣೆಯ ಪೊಲೀಸರು, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ಸಭಾನಾ ದೂರು ನೀಡುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ : T20 World Cup; ಅಫ್ಘಾನ್ ಬೌಲಿಂಗ್ ದಾಳಿಗೆ ಕಿವೀಸ್ ತತ್ತರ; ರಶೀದ್ ಬಳಗಕ್ಕೆ 84 ರನ್ ಜಯ