ವಯಸ್ಸೇನೋ ಎಪ್ಪತ್ತಾಗಲಿದೆ. ಆದರೆ ಮುಖಕ್ಕೆ ಬಣ್ಣ ಹಚ್ಚಿ, ವಸ್ತ್ರಾಲಂಕಾರ ಮಾಡಿಕೊಂಡು, ವೇದಿಕೆಗೆ ಬಂದರೆ, ದಣಿವಿಲ್ಲದೆ ಹೃನ್ಮನ ತಣಿಸುವ ನರ್ತನ, ಪ್ರೇಕ್ಷಕರಲ್ಲಿ ಉನ್ನತವಾದ ರಸೋತ್ಪಾದನೆ. ಯಾರಿಗೆ 70? ಮೈಸೂರಿನಲ್ಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ, ಜಗತ್ತಿನ ಉದ್ದಗಲಕ್ಕೂ ಸಾವಿರಾರು ಶಿಷ್ಯಂದಿರನ್ನು ಹೊಂದಿರುವ, ಗುರು ಡಾ. ವಸುಂಧರಾ ದೊರೆಸ್ವಾಮಿ ಅವರಿಗೆ ನವೆಂಬರ್ 1ರಂದು ಎಪ್ಪತ್ತಾಗಲಿದೆ.
ಸಾವಿರಾರು ಶಿಷ್ಯಂದಿರಿಗೆ ಪ್ರೀತಿಯ ಅಮ್ಮ. ಪಾಠ ಮಾಡುವಾಗ ಮಾತ್ರ ಶಿಸ್ತಿನ ಸಾಕಾರಮೂರ್ತಿ. ಗುರುವಾಗಿ, ಸಂಸ್ಥೆಯ ನಿರ್ದೇಶಕಿ ಯಾಗಿ, ಸಾವಿರಾರು ಕಾರ್ಯಕ್ರಮ ಗಳ ಆಯೋಜಕಿಯಾಗಿ, ಮೇರು ಕಲಾವಿದೆಯಾಗಿ, ಅವರಿಗೆ ಇರುವ ಅನುಭವ ವಿಶಿಷ್ಟವಾದುದು. ಪ್ರಾರಂಭದಲ್ಲಿ ಪಂದನಲ್ಲೂರು ಶೈಲಿಯಲ್ಲಿ ಪರಿಣತಿ ಪಡೆದದ್ದು. ನಂತರ ಯೋಗದ ಹಠ ಸಾಧನೆ, ಯೋಗದ ಹಲವು ಭಂಗಿಗಳನ್ನು, ಭರತನಾಟ್ಯಕ್ಕೆ ಅಳವಡಿಸಿ, ಶೈಲಿಯಲ್ಲಿ ಹಲವು ಬದಲಾವಣೆ ತಂದು, ತಮ್ಮ ಛಾಪು ಒತ್ತಿ, ವಸುಂಧರಾ ಬಾನಿ ಯನ್ನೇ ಹುಟ್ಟು ಹಾಕಿದ್ದಾರೆ.
ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ, ಶ್ರೀಕೃಷ್ಣ ಆಸ್ಥಾನ ನೃತ್ಯ ರತ್ನ ಪ್ರಶಸ್ತಿ, ಕರ್ನಾಟಕ ಕಲಾ ತಿಲಕ ಬಿರುದು, ಚಂದನ ಪ್ರಶಸ್ತಿ ಇತ್ಯಾದಿಗಳು ಸಂದಿವೆ. ಪ್ಯಾರಿಸ್‌ನಲ್ಲಿ ನಡೆದ, ಯುನೆಸ್ಕೋ ವಿಶ್ವಶಾಂತಿ ಸಮ್ಮೇಳನ ದಲ್ಲಿ ವಿವಿಧ ದೇಶಗಳ 2 ಸಾವಿರ ಪ್ರತಿನಿಧಿಗಳ ಮುಂದೆ, ಭಾರತವನ್ನು ಪ್ರತಿನಿಧಿಸಿ, ನೃತ್ಯ ಪ್ರದರ್ಶಿಸಿದ ಏಕೈಕ ನರ್ತಕಿ ಎಂಬ ಹೆಗ್ಗಳಿಕೆ ಇವರದ್ದು.
ವರ್ಷದ ಆರು ತಿಂಗಳು ಭಾರತದಲ್ಲಿ, ನಾಲ್ಕು ತಿಂಗಳು ಅಮೆರಿಕದಲ್ಲಿ, ಮತ್ತೆರಡು ತಿಂಗಳು ಸಿಂಗಪೂರ, ಆಸ್ಟ್ರೇಲಿಯ, ಹೀಗೆ ವಿವಿಧೆಡೆ ವಾಸ. ಜಗತ್ತಿನೆಲ್ಲೆಡೆ ಇರುವ ಶಿಷ್ಯರಿಗಾಗಿ ಈ ತಿರುಗಾಟ. ಹೋದೆಲ್ಲೆಡೆ, ಹಲವಾರು ಏಕವ್ಯಕ್ತಿ ನೃತ್ಯ ಕಾರ್ಯಕ್ರಮ ಗಳು. ಪ್ರತಿ ಬಾರಿಯೂ ಹೊಸದೊಂದು ಪರಿಕಲ್ಪನೆ. ಹಾಗೆಂದು, ಶಾಸ್ತ್ರೀಯ ಚೌಕಟ್ಟು ಮೀರುವ ಮಾತೇ ಇಲ್ಲ. ಈ ವಯಸ್ಸಿನಲ್ಲೂ ಅಭಿನಯ, ನೃತ್ಯದಲ್ಲಿ ರಾಜಿಯಾಗದೇ, ಪರಿಪೂರ್ಣತೆ ಯನ್ನೇ ಸಾಧಿಸುತ್ತಾರೆ ಈ ಅಮ್ಮ.
ಯಾವುದೇ ಶಿಷ್ಯೆಯ ಕಾರ್ಯಕ್ರಮದ ನಟುವಾಂಗಕ್ಕೆ ಕರೆದರೆ, ಯಾವಾಗಲೂ ಸಿದ್ಧ. ಪಾಠಕ್ಕಂತೂ ಹೊತ್ತು ಗೊತ್ತಿಲ್ಲದೆ, ಶಿಷ್ಯೆಯರು ಹೋಗಿ ಕಾಡುತ್ತಾರೆ. ಹಿತಮಿತ ಆಹಾರ, ನಿತ್ಯ ಯೋಗಾಭ್ಯಾಸ, ಸದಾ ಚಟುವಟಿಕೆ, ಶಿಸ್ತಿನ ಜೀವನಶೈಲಿ, ಇದೇ ಈ ವಸುಂಧರೆಯ 70ರ ಹರೆಯದ ಗುಟ್ಟು. ಶಿಷ್ಯರೆಲ್ಲರೂ ಸೇರಿ, ನವೆಂಬರ್ 2ರಂದು ಮೈಸೂರಿನಲ್ಲಿ ಸಪ್ತತಿ ಕಾರ್ಯಕ್ರಮ ಆಯೋಜಿಸಿ ದ್ದಾರೆ. ಎಲ್ಲಾ ಶಿಷ್ಯರ ಪ್ರೀತಿಯ ಅಮ್ಮ, ಅಂದು ಕಲಾಮಂದಿರದಲ್ಲಿ ನೃತ್ಯ ಕಾರ್ಯ ಕ್ರಮ ನೀಡಲಿದ್ದಾರೆ. ನೀವೂ ಬನ್ನಿ…
* ಡಾ. ಕೆ.ಎಸ್. ಶುಭ್ರತಾ