Advertisement

ಡ್ಯಾನ್ಸಿಂಗ್‌ ಪ್ಲೇಗ್‌ ಆಫ್ 1518

12:30 AM Jan 24, 2019 | |

ಇತಿಹಾಸದಲ್ಲೇ ದಾಖಲಾದ ಕಾಯಿಲೆಗಳಲ್ಲಿ ವಿಚಿತ್ರವಾದ, ಅಷ್ಟೇ ನಿಗೂಢವೂ ಆದ ಕಾಯಿಲೆ ಇದು. 15ನೇ ಶತಮಾನದ ಆದಿಯಲ್ಲಿ, ರೋಮ್‌ನ ಸ್ಟ್ರಾಸ್‌ಬರ್ಗ್‌ ಪಟ್ಟಣದಲ್ಲಿ ಈ ವಿಚಿತ್ರ ವಿದ್ಯಮಾನ ಬೆಳಕಿಗೆ ಬಂದಿತ್ತು. ಅಲ್ಲಿ ಸುಮಾರು 400 ಮಂದಿ “ಕುಣಿತದ ಕಾಯಿಲೆ’ಯಿಂದ ಬಳಲುತ್ತಿದ್ದರು. ಏಕಾಏಕಿ ಯಾವುದೇ ಕಾರಣವಿಲ್ಲದೆ ಕುಣಿಯಲು ಶುರುಮಾಡುತ್ತಿದ್ದ ಮಂದಿ ನಿಲ್ಲಿಸುತ್ತಲೇ ಇರಲಿಲ್ಲ, ಅನ್ನಾಹಾರವಿಲ್ಲದೆ, ನಿದ್ದೆಯ ಪರಿವೇ ಇಲ್ಲದೆ ಕುಣಿತ ಮುಂದುವರಿಯುತ್ತಿತ್ತು. ದಿನಗಟ್ಟಲೆ, ವಾರಗಟ್ಟಲೆ ಕುಣಿಯುತ್ತಿದ್ದವರಲ್ಲಿ ಅದೆಷ್ಟೋ ಮಂದಿ ಪಾರ್ಶ್ವವಾಯುವಿನಿಂದ, ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದರು. ಇದು ಜನರಿಂದ ಜನರಿಗೆ ಹರಡುತ್ತಿದ್ದ ಸಾಂಕ್ರಾಮಿಕ ಕಾಯಿಲೆ ಎನ್ನುವ ಸಂಗತಿ ದಿಗಿಲು ಹುಟ್ಟಿಸುವಂಥದ್ದು. ಈ ಕಾಯಿಲೆ “ಡ್ಯಾನ್ಸಿಂಗ್‌ ಪ್ಲೇಗ್‌ ಆಫ್ 1518′ ಎಂದೇ ಹೆಸರುವಾಸಿ. ಅನೇಕ ಮಂದಿ ಇತಿಹಾಸಕಾರರು, ವೈದ್ಯರು ಈ ಘಟನೆಯನ್ನು “ಸಮೂಹ ಸನ್ನಿ’ ಎಂದೇ ಬಣ್ಣಿಸಿದ್ದಾರೆ. ಮಾನಸಿಕ ಒತ್ತಡಗಳಿಂದ ಬಳಲುತ್ತಿದ್ದವರಿಗೆ ಕುಣಿತ, ಪರಿಹಾರ ಮಾರ್ಗದಂತೆ ತೋರಿರಬೇಕು. ಒಬ್ಬರು ಕುಣಿಯುತ್ತಿದ್ದುದು ನೋಡಿ ಪ್ರಚೋದನೆಗೊಳಗೊಂಡು ಮತ್ತೂಬ್ಬರು ಕುಣಿಯುತ್ತಿದ್ದಿರಬೇಕಷ್ಟೆ ಎಂಬುದು ಅವರ ವಾದ. ವೈಜ್ಞಾನಿಕ ವಿಶ್ಲೇಷಣೆಗಳ ಹೊರತಾಗಿ ಅನೇಕ ಕತೆಗಳು, ವದಂತಿಗಳು ಇಂದಿಗೂ ಜನರ ನಡುವೆ ಜೀವಂತವಾಗಿವೆ. ಸಂತ ವಿಟ್ರಸ್‌ ನೀಡಿದ ಶಾಪದಿಂದಾಗಿ ಜನರು ಕುಣಿಯತೊಡಗಿದ್ದರು ಎನ್ನುವುದು ಅಂಥಾ ವದಂತಿಗಳಲ್ಲೊಂದು. ಇನ್ನು ಕೆಲವರು, ಆ ಸಮಯದಲ್ಲಿ ಕುಣಿಯುತ್ತಿದ್ದವರೆಲ್ಲರ ಮೈಮೇಲೆ ದೆವ್ವ ಬಂದಿತ್ತು ಎಂದೂ ನಂಬುತ್ತಾರೆ. ಅಚ್ಚರಿ ಎಂದರೆ ಆ ಕಾಲದಲ್ಲಿ ಜನರು ಯಾವುದೇ ಮೂಢನಂಬಿಕೆಗೆ ಬಲಿಯಾಗದೆ ವಿಜ್ಞಾನದ ಮೇಲೆ ನಂಬಿಕೆ ಇರಿಸಿದ್ದು!  ಅಧಿಕೃತ ದಾಖಲೆಗಳಲ್ಲಿ, ಅಂದಿನ ವೈದ್ಯಕೀಯ ಪತ್ರಾಗಾರಗಳನ್ನು ಶೋಧಿಸಿದಾಗ ಈ ಸಂಗತಿ ತಿಳಿದು ಬರುತ್ತದೆ. ಕುಣಿತದ ಕಾಯಿಲೆಗೆ ನಿರ್ದಿಷ್ಟ ಕಾರಣವನ್ನವರು ಪತ್ತೆ ಹಚ್ಚಲಾಗದಿದ್ದರೂ, ಬಿಸಿ ರಕ್ತದ ಕಾರಣದಿಂದಾಗಿ ಜನರು ನರ್ತಿಸುತ್ತಿರಬಹುದು ಎಂದು ಊಹಿಸಿದ್ದರು. ಕುಣಿದು ಕುಣಿದು ಆವೇಶ ಕಡಿಮೆಯಾಗಿ ಕಾಯಿಲೆ ವಾಸಿಯಾಗುತ್ತದೆ ಎಂದವರು ನಂಬಿದ್ದರು. ಈ ಕಾರಣಕ್ಕೆ ವೈದ್ಯರು ಕುಣಿತವನ್ನು ಬಿಡಿಸುವುದಕ್ಕೆ ಬದಲಾಗಿ ಕುಣಿಯುವುದಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ್ದರು. ಜನರನ್ನು ಕುಣಿಸಲು ಪರವೂರಿನಿಂದ ಸಂಗೀತಗಾರರನ್ನು ನಗರಪಾಲಕರು ಕರೆಸಿದ್ದರು. ಅಷ್ಟೇ ಅಲ್ಲದೆ ಕುಣಿಯಲು ಪ್ರತ್ಯೇಕ ಜಾಗವನ್ನೇ ಮೀಸಲಿರಿಸಿದ್ದರು.

Advertisement

ಹವನ

Advertisement

Udayavani is now on Telegram. Click here to join our channel and stay updated with the latest news.

Next