Advertisement

ಸಪ್ತಾಹದಲ್ಲಿ ಅನಾವರಣಗೊಂಡ ನೃತ್ಯ ವೈವಿಧ್ಯ

06:00 AM Jul 27, 2018 | |

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ ಒಂದು ವಾರ ಕಾಲ ಒಂದೊಂದು ನೃತ್ಯ ಪ್ರಸ್ತುತಿಯೊಂದಿಗೆ ವಿಶ್ವ ನೃತ್ಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು. ಪ್ರಥಮ ದಿನ ಭರತನಾಟ್ಯವನ್ನು ಬೆಂಗಳೂರಿನ ರಾಧಿಕಾ ರಾಮಾನುಜಂ ಪ್ರಸ್ತುತಪಡಿಸಿದರು. ಮಲ್ಲಾರಿ ಎಂಬ ಸಾಂಪ್ರದಾಯಿಕ ನೃತ್ಯದೊಂದಿಗೆ ಮೊದಲ್ಗೊಂಡಿತು. ಎರಡನೆಯ ನೃತ್ಯ ದೇವಿಸ್ತುತಿಯಲ್ಲಿ ಕೊಲ್ಲೂರಿನ ಮೂಕಾಂಬಿಕೆ ಮತ್ತು ಕಂಚಿ ಕಾಮಾಕ್ಷಿಯರ ಅಂದವನ್ನು ಅಭಿನಯಿಸಿದರು.ಅನಂತರ ಚಿದಂಬರಂ ಎಂಬ ಶಿವನ ನೃತ್ಯ ಪ್ರದರ್ಶಿಸಿದರು. ಕೊನೆಯಲ್ಲಿ ಶೃಂಗಾರ ರಸದ ನೃತ್ಯ ಪ್ರಸ್ತುತಪಡಿಸಿದರು. 

Advertisement

ಎರಡನೇ ದಿನ “ಕೂಚುಪುಡಿ’ ನೃತ್ಯವನ್ನು ಬೆಂಗಳೂರಿನ ನೃತ್ಯ ಗುರು ಅರ್ಚನಾ ಪುಣ್ಯೇಶರವರು ನಡೆಸಿಕೊಟ್ಟರು. ಪ್ರಾರಂಭಿಕ ನೃತ್ಯವಾದ ಬ್ರಹ್ಮಾಂಜಲಿಯು ಎರಡು ಶ್ಲೋಕಗಳನ್ನೊಳಗೊಂಡಿತ್ತು. ನಂತರ ಆಸ್ಥಾನ ಪದ್ಧತಿಯ ನೃತ್ಯ ಶೈಲಿಯಾದ “ಶಬ್ದಂ’ನ ಮೂಲಕ ರಾಜ ಕೃಷ್ಣದೇವರಾಯನ ಪರಾಕ್ರಮವನ್ನು ಹೊಗಳಿ, ಸಂಚಾರಿಯಲ್ಲಿ ಮಂಡೋದರಿ ಕಲ್ಯಾಣವನ್ನು ತೋರಿಸಿದರು. ನಂತರದ ನೃತ್ಯ “ಪೇರಿಣಿ’ಯಾಗಿತ್ತು. ಪೇರಿಣಿ ಎಂದರೆ ಮಡಕೆಯ ಮೇಲೆ ನಿಂತು ಮಾಡುವ ನೃತ್ಯ. ಕೊನೆಯದಾಗಿ ವೆಂಕಟೇಶ್ವರನ ಕೃತಿಯಾದ “ಪನ್ನಗ ಶಯನ’ವನ್ನು ಪ್ರಸ್ತುತಪಡಿಸಿದರು. 

ಮೂರನೆಯ ದಿನ ಕು| ನಿರುತಾ ಕಾರಂತ್‌, ಐಶ್ವರ್ಯಾ ಬಿ.ಆರ್‌. ಮತ್ತು ವರ್ಷಾ ಗೋವಿಂದರಾಜ್‌ ಇವರು ನಂಜನಗೂಡು ಶೈಲಿಯ ಭರತನಾಟ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ನೃತ್ಯ “ಗಣೇಶ್‌ ರುಖ್‌’ ಎಂಬ ಋಗ್ವೇದ ಮಂತ್ರ ಆಧಾರಿತ ಸ್ತುತಿಯೊಂದಿಗೆ ಆರಂಭವಾಯಿತು. ಎರಡನೆಯ ನೃತ್ಯ ಬೃಹದಾಂಬಿಕೈ ನಮಸ್ತೇ. ಮೂರನೇ ಭಾಗದಲ್ಲಿ ಎರಡು ವರ್ಣಗಳ ತುಣುಕನ್ನು ಪ್ರದರ್ಶಿಸಿದರು. ಮೊದಲನೇ ವರ್ಣ “ಕಮಲಾಕ್ಷಿ’, ಕಾಂಬೋಜಿ ರಾಗ, ಮಿಶ್ರ ಜಂಪೆ ತಾಳದಲ್ಲಿದ್ದರೆ, ಎರಡನೇ ವರ್ಣ “ಎಂತೋ ವೈಭವಮು’, ಕೇದಾರ ರಾಗ, ಆದಿ ತಾಳದಲ್ಲಿತ್ತು. ಅನಂತರ “ಆರೇನು ಮಾಡಿದರು’ ಎಂಬ ದೇವರ ನಾಮವನ್ನು ಪ್ರದರ್ಶಿಸಿದರು. ಬಳಿಕ ಕಾಪಿ ರಾಗ ಹಾಗೂ ಆದಿತಾಳದ ಜಗದೋದ್ಧಾರನ ಎಂಬ ದೇವರನಾಮವನ್ನು ಪ್ರದರ್ಶಿಸಿದರು. ಆರನೇ ನೃತ್ಯದಲ್ಲಿ “ಟುಮಕ್‌ ಚಲತ್‌’ ಮತ್ತು ಕೊನೆಯ ನೃತ್ಯ ಅಂತಃಪುರ ಗೀತೆ. ನಾಲ್ಕನೇ ದಿನದ ಕಾರ್ಯಕ್ರಮವನ್ನು ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ(ರಿ.)ಯ ನೃತ್ಯ ಗುರು ವಿ| ಬಿ.ದೀಪಕ್‌ ಕುಮಾರ್‌ ನಡೆಸಿಕೊಟ್ಟರು. ವಿಘ್ನವಿನಾಶಕ ಗಣಪತಿಯನ್ನು ವಂದಿಸುವ ಸ್ತುತಿಯಲ್ಲಿ ಸಂಚಾರಿಯ ಮೂಲಕ ಆತ್ಮಲಿಂಗವನ್ನು ಪ್ರತಿಷ್ಠಾಪಿಸಿದ ಕಥೆಯನ್ನು ಅಭಿನಯಿಸಿದರು. ಎರಡನೇ ಭಾಗವಾಗಿ “ಮಾಧವ ಶಿವ ಶಂಭೋ’ ಎಂಬ ಶಿವ ನೃತ್ಯ ಪ್ರದರ್ಶಿಸಿದರು. ಈ ನೃತ್ಯವು ರೇವತಿ ರಾಗದಲ್ಲಿತ್ತು ನಂತರದ ನೃತ್ಯ “ಪೋಗದಿರಲೋ ರಂಗ’ವನ್ನು ಅಭಿನಯಿಸಿದರು. ಕೊನೆಯದಾಗಿ ಭರತನಾಟ್ಯ ಪ್ರಕಾರದ ತಿಲ್ಲಾನದಲ್ಲಿ ಕೃಷ್ಣನ ಶೃಂಗಾರ ರಸಗಳನ್ನು ತೋರಿಸಿದರು. ಇದು ಕದನ ಕುತೂಹಲ ರಾಗದಲ್ಲಿತ್ತು. ಐದನೇ ದಿನ ಕಥೆಯನ್ನು ವಿವರಿಸುವ ನೃತ್ಯವಾದ “ಕಥಕ್‌’ನ್ನು ಚಿತ್ರನಟಿ ವಿನಯಾಪ್ರಸಾದ್‌ ಅವರ ಪುತ್ರಿ ವಿ| ಪ್ರಾರ್ಥನಾ ಪ್ರಸಾದ್‌ ನಡೆಸಿಕೊಟ್ಟರು. ಕಾರ್ಯಕ್ರಮವನ್ನು “ಕಾಲಿಕಾ ಕಲಹೆ ಘೋರೆ’ ಎಂಬ ಹಿಂದೂಸ್ಥಾನಿ ಗಾಯನ ಶೈಲಿಯ “ದೃಪದ’ದ ಮೂಲಕ ಪ್ರಾರಂಭಿಸಿದರು. ಮುಂದಿನ ಭಾಗದಲ್ಲಿ “ರುಮುರಿ’ ಎಂಬ ನಾಯಕಿ ಭಾವವುಳ್ಳ ನೃತ್ಯವನ್ನು ಅಭಿನಯಿಸಿದರು. ಅನಂತರ “ಶ್ರೀರಾಮಚಂದ್ರ ಕೃಪಾಲು ಭಜಮಾನ್‌’ ಎಂಬ ಸಂತ ತುಳಸೀದಾಸರ ಭಜನ್‌ಗೆ ಹೆಜ್ಜೆ ಹಾಕಿದರು. “ತರಾನ’ ನೃತ್ಯದ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಿದರು. 

ಆರನೇ ದಿನದ ಕಾರ್ಯಕ್ರಮದಲ್ಲಿ ವಿ| ಹೇಮಾ ಎ. ಗೌತಮ್‌ ಕೂಚುಪುಡಿ ನೃತ್ಯ ಪ್ರದರ್ಶಿಸಿದರು. ನಾಂದಿ ಶ್ಲೋಕದ ಮೂಲಕ ನಾಲ್ಕು ದಿಕ್ಕುಗಳಿಗೆ, ದೇವತೆಗಳಿಗೆ ವಂದಿಸಿ ಸರ್ವರ ಏಳಿಗೆಗೆ ಪ್ರಾರ್ಥಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.ಎರಡನೇ ಭಾಗವಾಗಿ ಸಂಚಾರಿ ಮತ್ತು ಜತಿಗಳನ್ನೊಳಗೊಂಡ ನೃತ್ಯ ಶಬ್ದಂನ್ನು ಅಭಿನಯಿಸಿದರು. ಕೊನೆಯ ನೃತ್ಯ ಪ್ರಕಾರ “ತರಂಗಂ’ನ್ನು ಹರಿವಾಣದ ಮೇಲೆ ನಿಂತು ತಲೆಯ ಮೇಲೆ ತಂಬಿಗೆಯನ್ನು ಇಟ್ಟುಕೊಂಡು ಮಾಡಿದರು. 

ಕೊನೆಯ ದಿನ ಕಾರ್ಯಕ್ರಮವನ್ನು ಪುಟಾಣಿ ಕಲಾವಿದೆಯರಾದ ಕು| ನಿಯತಿ, ಕು| ನಿಯತಾ ಉಡುಪ ಮತ್ತು ಕು| ಸಿಂಚನಾ ನಿಂಪು ನಡೆಸಿಕೊಟ್ಟರು. ಆನಂದ ನಟನಮಾಡುವಾರ್ತಿಲ್‌ಯರ್‌ ಎಂಬ ತಮಿಳು ಸಾಹಿತ್ಯದ ಪೂರ್ವೀ ಕಲ್ಯಾಣ ರಾಗ ಮತ್ತು ರೂಪಕ ತಾಳದ ಶಿವ ಸ್ತುತಿಯೊಂದಿಗೆ ಆರಂಭಿಸಿದರು. ಎರಡನೇ ನೃತ್ಯಬಂಧ ಚಲಮೇಲ ಎಂಬ ಪದವರ್ಣ ನಾಟಕುರುಂಜಿ ರಾಗ ಮತ್ತು ಆದಿತಾಳದಲ್ಲಿತ್ತು. ನಂತರ ಪುರಂದರ ದಾಸರ ರಚನೆಯಾದ “ಚಿಕ್ಕವನೇ ಇವನು’ ನೃತ್ಯ ಪ್ರದರ್ಶಿಸಿದರು. ಕೊನೆಗೆ ಕಾಳಿಂಗಮರ್ದನವನ್ನು ತಿಲ್ಲಾನದ ಮೂಲಕ ಪ್ರಸ್ತುತ ಪಡಿಸಿದರು. ಈ ತಿಲ್ಲಾನವು ಗಂಭೀರ ನಟರಾಗ ಮತ್ತು ಆದಿತಾಳದಲ್ಲಿತ್ತು. 

Advertisement

ನಿಶಿತಾ ಎಸ್‌. ಎನ್‌. ಭಟ್‌ 

Advertisement

Udayavani is now on Telegram. Click here to join our channel and stay updated with the latest news.

Next